ನಂಜನಗೂಡು: ಅಂದಾಜು 70 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣಗೊಂಡು ಸಂಚಾರಕ್ಕೆ ಮುಕ್ತವಾಗಿದ್ದ ಸಿಟಿಜನ್ ಶಾಲೆ ಹಿಂಬದಿಯ ರಸ್ತೆ ಮೂರು ತಿಂಗಳಲ್ಲೇ ಹದಗೆಟ್ಟಿದ್ದು, ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರ ಹಾಗೂ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಹುಲ್ಲಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸಿಟಿಜನ್ ಶಾಲೆ ಹಿಂಬದಿ ಒಂದೂವರೆ ಕಿ.ಮೀ. ರಸ್ತೆಯನ್ನು 3 ತಿಂಗಳ ಹಿಂದಷ್ಟೇ 70 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತಾದರೂ ಸದ್ಯ ಈ ರಸ್ತೆಗೆ ಡಾಂಬರೀಕರಣವಾಗಿದೆ ಎಂಬ ಕುರುಹೇ ನಾಪತ್ತೆಯಾಗಿದ್ದು, 3 ತಿಂಗಳಲ್ಲೇ ಕಾಮಗಾರಿಯ ಬಣ್ಣ ಬಯಲಾಗಿದೆ.
ರಸ್ತೆ ಉದ್ದಕ್ಕೂ ಹಳ್ಳಕೊಳ್ಳಗಳು ಸೃಷ್ಟಿ ಯಾಗಿದ್ದು, ರಸ್ತೆಗೆ ಹಾಕಿರುವ ಡಾಂಬರ್ ಕಿತ್ತು ಬರುತ್ತಿದೆ. ಅಲ್ಲದೆ 60 ಅಡಿ ಅಗಲದ ರಸ್ತೆ ಕಾಮಗಾರಿ ಬದಲಾಗಿ ಕೇವಲ 20 ಅಡಿ ಕಾಮಗಾರಿ ನಡೆಸಿರುವ ಆರೋಪ ಕೇಳಿ ಬರುತ್ತಿದೆ. ಕಾಮಗಾರಿ ಟೆಂಡರ್ ಪಡೆದಿದ್ದ ಗುತ್ತಿಗೆದಾರ ಸಂಪೂರ್ಣ ಹಣ ಜೇಬಿಗಿಳಿಸಿದ್ದಾನೆ ಎಂದು ಸಾರ್ವಜನಿಕರು ದೂರಿದ್ದು, ಕಳಪೆ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಶಾಲೆಗೆ ಸಾಕಷ್ಟು ಸಂಖ್ಯೆಯಲ್ಲಿ ತೆರಳುವ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿದಂತೆ ವಾಹನ ಸವಾರರು ನಿತ್ಯ ಸಮಸ್ಯೆ ಅನುಭವಿ ಸುತ್ತಿದ್ದು, ಮಳೆ ಬಂದರಂತೂ ಸಂಚರಿಸಲಾಗದಷ್ಟು ದುಸ್ಥಿತಿ ನಿರ್ಮಾಣವಾಗುತ್ತದೆ.
ಅನಿವಾರ್ಯವಾಗಿ ಇದೇ ರಸ್ತೆಯನ್ನೇ ಬಳಸಬೇಕಿರುವುದರಿಂದ ಸಾರ್ವಜನಿಕರು ವಿಧಿ ಇಲ್ಲದೆ ನಿತ್ಯ ನರಕ ದರ್ಶನ ಮಾಡು ವಂತಾಗಿದೆ. ಕೂಡಲೇ ರಸ್ತೆ ದುರಸ್ತಿಡಿಸಿ ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆ ದಾರನನ್ನು ಬ್ಲಾಕ್‍ಲಿಸ್ಟ್‍ಗೆ ಸೇರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.