ಆರ್ಥಿಕ ಪ್ರಗತಿಯಲ್ಲಿ ಸಾಮಾಜಿಕ ಸಹಿಷ್ಣುತೆ ಪಾತ್ರ ಪ್ರಮುಖ
ಮೈಸೂರು

ಆರ್ಥಿಕ ಪ್ರಗತಿಯಲ್ಲಿ ಸಾಮಾಜಿಕ ಸಹಿಷ್ಣುತೆ ಪಾತ್ರ ಪ್ರಮುಖ

March 1, 2020

ಜ್ಞಾನಪೀಠ ಪುರಸ್ಕೃತರ 8 ಸಮಗ್ರ ವಿಮರ್ಶಾ ಕೃತಿಗಳ ಬಿಡುಗಡೆಯಲ್ಲಿ ಮಾಜಿ ಸಿಎಂ ವೀರಪ್ಪಮೊಯಿಲಿ ಅಭಿಮತ

ಮೈಸೂರು, ಫೆ.29(ಎಸ್‍ಬಿಡಿ)- ಆರ್ಥಿಕ ಬೆಳವಣಿಗೆಯಲ್ಲಿ ಸಾಮಾಜಿಕ ಸಹಿಷ್ಣುತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಯಿಲಿ ಅಭಿಪ್ರಾಯಪಟ್ಟರು.

ತನು ಮನು ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಕಲಾಕೂಟ ಜಂಟಿಯಾಗಿ ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತರ 8 ಸಮಗ್ರ ವಿಮರ್ಶಾ ಕೃತಿಗಳನ್ನು ಬಿಡು ಗಡೆ ಮಾಡಿದ ಅವರು, ಕನ್ನಡ ಸಂಸ್ಕೃತಿಯ ಒಡಲಲ್ಲಿ ಸಹಿಷ್ಣುತೆ, ಸಮನ್ವಯತೆ ಇರು ವುದನ್ನು ಹಲವು ಐತಿಹಾಸಿಕ ಸಂಗತಿಗಳು ಸಾಕ್ಷೀಕರಿಸುತ್ತವೆ. ಬಂಡವಾಳ ಹೂಡಿಕೆಗೆ ಕರ್ನಾಟಕವನ್ನೇ ಹೆಚ್ಚು ಆಯ್ಕೆ ಮಾಡಲು ಇಲ್ಲಿರುವ ಸಹಿಷ್ಣುತೆಯೇ ಕಾರಣ. ಬಂಡವಾಳ ಹೂಡಿಕೆ ಕಡಿಮೆಯಾಗಿದೆ ಎಂದರೆ ಅಸಹಿಷ್ಣುತೆ ಇದೆ ಎಂದು ಅರ್ಥ. ಹಾಗಾಗಿ ಆರ್ಥಿಕ ಬೆಳವಣಿಗೆಗೆ ಸಹಿಷ್ಣುತೆ ಪ್ರಮುಖವಾಗುತ್ತದೆ ಎಂದು ವಿಶ್ಲೇಷಿಸಿದರು. ಹಿಂಸೆ ಇರದ ಕಾಲವಿಲ್ಲ. ಆದರೆ ಇತ್ತೀಚೆಗೆ ಅದು ವಿಜೃಂಭಿಸುತ್ತಿದೆ. ಎಲ್ಲದಕ್ಕೂ ಹಿಂಸೆಯೇ ಪರಿಹಾರ ಎನ್ನು ವಂತಾಗಿದೆ. ಹಿಂಸೆಯ ಮೂಲ ಅಹಂಕಾರ ಎಂದು ವ್ಯಾಖ್ಯಾನಿಸಿದ ಅವರು, ಮೂಢ ನಂಬಿಕೆಗಿಂತ ಮತಾಭಿಮಾನ ಅಪಾಯ ಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡದ ಅಷ್ಟ ದಿಗ್ಗಜರು: ಕನ್ನಡಿಗರಿಗೆ ಶ್ರೇಷ್ಟ ಪರಂಪರೆಯಿದೆ. ಎಲ್ಲಾ ಧರ್ಮ, ಭಾಷೆಗಳು ಕನ್ನಡ ಸಂಸ್ಕೃತಿಯ ಅಂಗ ದಂತಿವೆ. ಕರ್ನಾಟಕದಲ್ಲಿರುವ ಸಮನ್ವ ಯತೆ, ಇಲ್ಲಿನ ಸಾಹಿತ್ಯದಲ್ಲಿರುವ ಸೃಜನ ಶೀಲತೆ ಬೇರೆಲ್ಲೂ ಇಲ್ಲ. ಕುವೆಂಪು ಅವರು ಇಲ್ಲಿ ಜನಿಸಿದ್ದು ಈ ನೆಲದ ಪುಣ್ಯ. ಅವರ ಸಾಹಿತ್ಯ ಸಾರ್ವಕಾಲಿಕ ಸತ್ಯ ತಿಳಿಸುತ್ತವೆ. `ಓ ನನ್ನ ಚೇತನ, ಆಗು ನೀ ಅನಿಕೇತನ…’ ಕವಿತೆಯಂತಹ ರಾಷ್ಟ್ರಪ್ರೇಮ ಸಾರುವ ಮತ್ತೊಂದು ಗೀತೆಯಿಲ್ಲ. ದ.ರಾ.ಬೇಂದ್ರೆ ಒಡಲಿನ ಕವಿಯಾದರೆ, ಶಿವರಾಮ ಕಾರಂತರು ನಡೆದಾಡುವ ವಿಶ್ವಕೋಶವಾಗಿದ್ದರು. ಕಡಲಿನಂತಹ ಆಳ, ವಿಸ್ತಾರ ತಿಳಿಯು ವುದು ಕಷ್ಟ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರಂತಹ ಕಥೆಗಾರರು ಮತ್ತೊಬ್ಬರಿಲ್ಲ. ಶ್ರೇಷ್ಠ ಸೃಜನಶೀಲತೆ ಹೊಂದಿದ್ದ ಅನಂತ ಮೂರ್ತಿ ಅವರು ಸಾರ್ವಜನಿಕ ಸಂಗತಿ ಗಳಿಗೆ ಪ್ರತಿಕ್ರಿಯಿಸುವ ರೀತಿ ಅನೇಕರನ್ನು ಕೆರಳಿಸುತ್ತಿತ್ತು. ಪ್ರತಿಭಾವಂತ ಕವಿ, ಪಂಡಿತ ವಿ.ಕೃ.ಗೋಕಾಕ್, ಹೊಸ ಸಂವೇದನೆಯ ನಾಟಕಕಾರ ಗಿರೀಶ್ ಕಾರ್ನಾಡ್, ವಿಶಿಷ್ಟ ಕಾವ್ಯ ಶಕ್ತಿಯುಳ್ಳ ಚಂದ್ರಶೇಖರ ಕಂಬಾರರ ಸೇವೆ ಸ್ಮರಣೀಯ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಗರಿ ಮುಡಿಸಿದ ಈ ಅಷ್ಟ ದಿಗ್ಗಜರು ಕನ್ನಡ ಭಾಷೆ ಮಾತ್ರವಲ್ಲದೆ ಭಾರತೀಯ ಸಂಸ್ಕೃತಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ, ತನು ಮನು ಪ್ರಕಾಶನದ 22ನೇ ವರ್ಷದ ಕ್ಯಾಟ್‍ಲಾಗ್ ಬಿಡುಗಡೆ ಮಾಡಿದರು. ಪ್ರಾಧಿಕಾರದ ಸದಸ್ಯ ಕಬ್ಬಿ ನಾಲೆ ವಸಂತ ಭಾರದ್ವಾಜ್ ಕೃತಿಗಳನ್ನು ಪರಿಚಯಿಸಿದರು. ಹಿರಿಯ ಸಾಹಿತಿ ಸಿಪಿಕೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವಾಸು, 8 ಕೃತಿಗಳ ಸಂಪಾದಕರಾಗಿರುವ ಯಕ್ಷಗಾನ ಅಕಾಡೆಮಿ ಸದಸ್ಯ ಜಿ.ಎಸ್.ಭಟ್ಟ, ಕನ್ನಡ ಸಾಹಿತ್ಯ ಕಲಾಕೂಟದ ಎಂ.ಚಂದ್ರ ಶೇಖರ್, ಪ್ರಕಾಶಕ ಮಾನಸ ಮತ್ತಿತರರಿದ್ದರು.

ಸಿಎಎ; ದೆಹಲಿ ಗಲಭೆಗೆ ಕೇಂದ್ರ, ದೆಹಲಿ ಸರ್ಕಾರದ ವೈಫಲ್ಯ ಕಾರಣ

ಮೈಸೂರು: ದೆಹಲಿಯಲ್ಲಿ ನಡೆಯುತ್ತಿರುವ ಗಲಭೆಗೆ ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ದೆಹಲಿ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ ಆರೋಪಿಸಿದರು.

ಮೈಸೂರಿನಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಎಎ ವಿಚಾರವಾಗಿ ದೆಹಲಿಯ ಗಲಭೆ ಒಂದು ವೈಪರೀತ್ಯ. ಶಾಹೀನ್‍ಬಾಗ್‍ನಲ್ಲಿ 40 ದಿನಗಳಿಂದ ಶಾಂತಿಯುತ ಪ್ರತಿಭಟನೆ ನಡೆದಿತ್ತು. ಇವರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವೀಕ್ಷಕರನ್ನು ನೇಮಿಸಿತ್ತು. ಇದು ಕೇಂದ್ರ ಸರ್ಕಾರದ ಕೆಲಸ. ಆದರೆ ಕೇಂದ್ರ ಸರ್ಕಾರ ಆ ದಾರಿ ಬಿಟ್ಟು ವಾಮಮಾರ್ಗ ಹಿಡಿದು, ತಮ್ಮ ಜನರ ಛೂ ಬಿಟ್ಟು ಪ್ರತಿಭಟನೆ ಮಾಡಿಸಿ, ಈ ರೀತಿಯ ಸಂಘರ್ಷಕ್ಕೆ ಆಹ್ವಾನ ಮಾಡಿಕೊಟ್ಟರು. ದೇಶದ ಇತಿಹಾಸದಲ್ಲೇ ಈ ರೀತಿಯ ದೌರ್ಜನ್ಯ, ಆಕ್ರಮಣಶಾಲಿ ಪ್ರವೃತ್ತಿ ಗೃಹ ಸಚಿವರ ಮುತುವರ್ಜಿಯಲ್ಲಿ ನಡೆದಿರುವುದು ಇದೇ ಮೊದಲು. ಶಾಹೀನ್‍ಬಾಗ್ ಪ್ರತಿಭಟನೆ ಹಾಗೂ ಗಲಭೆ ವಿಚಾರದಲ್ಲೂ ದೆಹಲಿ ಮುಖ್ಯಮಂತ್ರಿ ಮೌನ ವಹಿಸಿರುವುದು ವಿಪರ್ಯಾಸ ಎಂದರು.

ಸಿಎಎ ವಿರೋಧಿ ಪ್ರತಿಭಟನೆ ವೇಳೆ ದೇಶ ವಿರೋಧಿ ಘೋಷಣೆ, ಭಿತ್ತಿಪತ್ರ ಪ್ರದರ್ಶನ ಬೇಜವಾಬ್ದಾರಿ ಕೃತ್ಯ. ದೊರೆಸ್ವಾಮಿ ಅವರಂತಹ ಹಿರಿಯರನ್ನು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎನ್ನುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.

Translate »