ಎರಡನೇ ಮದುವೆ ಪ್ರಸ್ತಾಪ: ಪತಿ ಮೇಲೆ  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪತ್ನಿ
ಮೈಸೂರು

ಎರಡನೇ ಮದುವೆ ಪ್ರಸ್ತಾಪ: ಪತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪತ್ನಿ

January 10, 2019

ಮೈಸೂರು: ಎರಡನೇ ಮದುವೆ ಪ್ರಸ್ತಾಪ ಮುಂದಿಟ್ಟ ಪತಿಯ ಮೇಲೆ ಪತ್ನಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಮೈಸೂರಿನ ಸತ್ಯನಗರದಲ್ಲಿ ನಡೆದಿದೆ.

ಆಟೋ ಚಾಲಕ ಮಜರ್ ಪಾಷಾ(46) ಎಂಬಾತನೇ ತನ್ನ ಪತ್ನಿ ಮಮ್ತಾಜ್(40)ಳಿಂದ ಹತ್ಯೆಗೀಡಾದವನಾಗಿದ್ದಾನೆ. ಈ ದಂಪತಿಗೆ 26 ವರ್ಷಗಳ ಹಿಂದೆ ಮದುವೆಯಾಗಿತ್ತು. ಆರು ಮಕ್ಕಳು ಇದ್ದಾರೆ. ಅವರಲ್ಲಿ ಒಬ್ಬನಿಗೆ ಮದುವೆಯೂ ಆಗಿದೆ. ಆಟೋ ಚಾಲಕ ಮಜರ್ ಪಾಷಾ ಬೇರೊಬ್ಬ ಮಹಿಳೆ ಜೊತೆ ಸಂಬಂಧ ಇಟ್ಟುಕೊಂಡಿದ್ದನೆಂದು ಹೇಳಲಾಗಿದ್ದು, ಸೋಮವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದ ಈತ, ಪತ್ನಿ ಮಮ್ತಾಜ್ ಜೊತೆ ಜಗಳಕ್ಕಿಳಿದಿದ್ದಾನೆ. ಈ ವೇಳೆ ತಾನು ಸಂಬಂಧ ಇಟ್ಟುಕೊಂಡಿರುವ ಮಹಿಳೆಯನ್ನು ವಿವಾಹವಾಗುವುದಾಗಿ ಆತ ಹೇಳಿದಾಗ ಕೆರಳಿದ ಮಮ್ತಾಜ್, ಮನೆಯಲ್ಲಿ ಬಾಟಲಿಯಲ್ಲಿ ಸಂಗ್ರಹಿಸಿಟ್ಟಿದ್ದ ಒಂದು ಲೀಟರ್ ಪೆಟ್ರೋಲ್ ಅನ್ನು ಪತಿಯ ತಲೆ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ಹೇಳಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮಜರ್ ಪಾಷಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಮ್ಮುಖದಲ್ಲಿ ಆತ ನೀಡಿದ ಹೇಳಿಕೆ ಅನ್ವಯ ಉದಯಗಿರಿ ಪೊಲೀಸರು ಕೊಲೆ ಯತ್ನ (ಐಪಿಸಿ 307) ಪ್ರಕರಣ ದಾಖಲಿಸಿಕೊಂಡು ಮಮ್ತಾಜ್‍ಳನ್ನು ಬಂಧಿಸಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಜರ್ ಪಾಷಾ ಸಾವನ್ನಪ್ಪಿದ್ದು, ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ಕೊಲೆ (ಐಪಿಸಿ 302) ಪ್ರಕರಣವಾಗಿ ಮಾರ್ಪಡಿಸಿಕೊಂಡಿದ್ದಾರೆ. ಈ ನಡುವೆ ಆರೋಪಿ ಮಮ್ತಾಜ್, ತನ್ನ ಪತಿ ಕುಡಿತದ ದಾಸನಾಗಿದ್ದು, 2ನೇ ಮದುವೆಯಾಗಲು ಯತ್ನಿಸಿದ್ದ. ಅದಕ್ಕಾಗಿ ನನ್ನನ್ನು ಕೊಲ್ಲಲು ಪೆಟ್ರೋಲ್ ಸುರಿಯಲು ಬಂದಾಗ ಆತನ ಕೈಯಲ್ಲಿದ್ದ ಸಿಗರೇಟ್‍ನಿಂದಾಗಿ ಪೆಟ್ರೋಲ್‍ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.

Translate »