ಮಡಿಕೇರಿ: ಜಿಲ್ಲೆಯ ಪ್ರಸಿದ್ಧ ನೈಸರ್ಗಿಕ ಸೊಬಗಿನ ಮಡಿಕೇರಿಯ ರಾಜಾ ಸೀಟು ಉದ್ಯಾನವನದಲ್ಲಿ ಜ.11 ರಿಂದ 13ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಅರಳಿ ನಿಂತಿರುವ ರಂಗು ರಂಗಿನ ಹೂವುಗಳಿಂದ ಉದ್ಯಾನವನ ಕಂಗೊಳಿಸುತ್ತಿದೆ.
ವಿವಿಧ ಜಾತಿಯ ಹೂವುಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದ್ದು, ಉದ್ಯಾನ ವನಕ್ಕೆ ಹೊಸ ಮೆರುಗು ತುಂಬಿವೆ. 8 ರಿಂದ 10 ಸಾವಿರ ಸಂಖ್ಯೆಯಲ್ಲಿ ವಿವಿಧ ಜಾತಿಯ ಪೇಟೂನಿಯಾ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಪ್ಲಾಕ್ಸ್, ವಿಂಕಾ, ರೋಸಿಯಾ, ಡೇಲಿಯಾ ಹೂವುಗಳು ನೋಡುಗರನ್ನು ಆಕರ್ಷಿಸಲಿದೆ.
ಕೊಡಗಿನ ಕುಲದೇವತೆಯಾದ ಕಾವೇರಿ ಮಾತೆಯ ಪ್ರತಿಮೆ ಹಾಗೂ ಮಂಟಪ ತೀರ್ಥೋದ್ಭವದ ಕುಂಡಿಕೆಯ ಕಲಾಕೃತಿ ಯನ್ನು 12 ಅಡಿ ಎತ್ತರದಲ್ಲಿ 15 ಅಡಿ ಉದ್ದ ದಲ್ಲಿ ವಿವಿಧ ಹೂವುಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳಿಗೆ ಮನರಂಜನೆ ನೀಡುವಂತಹ ಸ್ಪೈಡರ್ ಮ್ಯಾನ್, ಮಿಕ್ಕಿ ಮೌಸ್, ಡೊನಾಲ್ಡ್ ಡಕ್, ಡೋರಮ್ಯಾನ್ ಕಾರು, ಯುದ್ದ ವಿಮಾನ, ಆನೆ, ಜಿಂಕೆ, ನವಿಲು ಮಾದರಿಯ ಕಲಾಕೃತಿಗಳನ್ನು ಹೂವು ಮತ್ತು ಎಲೆಗಳಿಂದ ತಯಾರಿಸಲಾಗುತ್ತಿದೆ. ಈಗಾಗಲೇ ವಿವಿಧ ಕಲಾಕೃತಿಗಳನ್ನು ನಿರ್ಮಿ ಸಲಾಗಿದ್ದು, ನುರಿತ ಕಾರ್ಮಿಕರು ಸಿದ್ಧ ತೆಯಲ್ಲಿ ತೊಡಗಿಕೊಂಡಿದ್ದಾರೆ.
ತೋಟಗಾರಿಕೆಯಲ್ಲಿ ಹೊಸ ತಾಂತ್ರಿಕತೆಯಾದ ಜಲಕೃಷಿ ಮಾದರಿಯಲ್ಲಿ ಹಣ್ಣು ತರಕಾರಿ ಬೆಳೆಯುವ ಪ್ರಾತ್ಯಕ್ಷತೆಯನ್ನು ಇದೇ ಮೊದಲ ಬಾರಿಗೆ ಫಲ ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿದೆ.
ಮಾವು, ಕಿತ್ತಳೆ, ಅನಾನಾಸ್ ಹಣ್ಣು ಗಳು ಹಾಗೂ ದಪ್ಪ ಮೆಣಸಿನಕಾಯಿ, ತರಕಾರಿಗಳಿಂದ ಆನೆ, ನವಿಲು, ಗಿಟಾರ್, ತಬಲ, ಜಲಚರಗಳಾದ ಸ್ಟಾರ್‍ಫಿಷ್, ಆಕ್ಟೋಪಸ್ ಇತ್ಯಾದಿ ಕಲಾಕೃತಿಗಳನ್ನು ಹೂ ಮತ್ತು ಅಲಂಕಾರಿ ಎಲೆಗಳಿಂದ ನಿರ್ಮಿಸುವ ಮೂಲಕ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರವಾಸಿಗರನ್ನು ಸೆಳೆಯಲು ಪ್ರಯ ತ್ನಿಸಲಾಗುತ್ತಿದೆ. ಇದಕ್ಕೆಂದು ಬಣ್ಣ ಬಣ್ಣದ ಗುಲಾಬಿ ಹೂವುಗಳನ್ನು ಕೂಡ ತರ ಲಾಗಿದ್ದು, ಜೋಡಣೆಯ ಕೆಲಸ ಬಿರುಸಿನಿಂದ ಸಾಗಿದೆ.
ಮಾತ್ರವಲ್ಲದೇ, ಜಿಲ್ಲೆಯ ರೈತರು ಬೆಳೆದಿರುವಂತಹ ವಿಶಿಷ್ಟವಾದ ಹಣ್ಣು ಗಳು, ತರಕಾರಿ, ತೋಟಗಾರಿಕಾ ಬೆಳೆ ಗಳು, ಸಾಂಬಾರು ಬೆಳೆಗಳ ಪ್ರದರ್ಶನಕ್ಕೂ ವೇದಿಕೆ ಒದಗಿಸಲಾಗುತ್ತಿದ್ದು, ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನವನ್ನು ನೀಡುವ ಮೂಲಕ ಬೆಳೆಗಾರರು ಮತ್ತು ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ.
ಫಲಪುಷ್ಟ ಪ್ರದರ್ಶನ ವೀಕ್ಷಣೆಗೆ 10 ರೂ.ಗಳ ಪ್ರವೇಶ ಶುಲ್ಕ ಹಾಗೂ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಲು ತೋಟಗಾರಿಕಾ ಇಲಾಖೆ ತೀರ್ಮಾನಿ ಸಿದೆ. ಮಡಿಕೇರಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕೊಡಗು ಪ್ರವಾಸಿ ಉತ್ಸವದ ಅಂಗವಾಗಿ ನಡೆಯುವ ಫಲ ಪುಷ್ಪ ಪ್ರದರ್ಶನದ ಉದ್ಘಾಟನೆಯನ್ನು ಜ.11 ರಂದು ಸಂಜೆ 4.30ಗಂಟೆಗೆ ತೋಟ ಗಾರಿಕೆ ಸಚಿವರಾದ ಎಂ.ಸಿ.ಮನಗೂಳಿ ನೆರ ವೇರಿಸಲಿದ್ದು, ಈ ಉತ್ಸವದಲ್ಲಿ ಲಕ್ಷಾಂತರ ಮಂದಿ ಪ್ರವಾಸಿಗರನ್ನು ನಿರೀಕ್ಷಿಸಲಾಗಿದೆ.
– ಪ್ರಸಾದ್ ಸಂಪಿಗೆಕಟ್ಟೆ