ಡಿ.26ರಂದು ಅಪರೂಪದ `ಕಂಕಣ’ ಸೂರ್ಯ ಗ್ರಹಣ
ಮೈಸೂರು

ಡಿ.26ರಂದು ಅಪರೂಪದ `ಕಂಕಣ’ ಸೂರ್ಯ ಗ್ರಹಣ

December 19, 2019

ಮೈಸೂರು,ಡಿ.18(ಆರ್‍ಕೆಬಿ)-ಡಿ.26ರಂದು ಬೆಳಿಗ್ಗೆ 8.06ರಿಂದ 11.09ರವರೆಗೆ ಸಂಭವಿಸಲಿರುವ ಅಪರೂಪದ `ಕಂಕಣ ಸೂರ್ಯ ಗ್ರಹಣ’ವನ್ನು ಯಾವುದೇ ಮೌಢ್ಯವಿಲ್ಲದೇ, ಸುರಕ್ಷಿತವಾಗಿ ವೀಕ್ಷಿಸು ವಂತೆ ಹರಿ ವಿದ್ಯಾಲಯದ ಸಂಪನ್ಮೂಲ ವ್ಯಕ್ತಿ ಶ್ರೀಧರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 172 ವರ್ಷಗಳ ನಂತರ ಸಂಭವಿಸುತ್ತಿರುವ ಕಂಕಣ ಸೂರ್ಯಗ್ರಹಣದ ಈ ಅಪರೂಪದ ಸೂರ್ಯ-ಚಂದ್ರರ ಕಣ್ಣಾ ಮುಚ್ಚಾಲೆ ಬೆಳಕಿನ ಆಟದ ಖಗೋಳ ವಿದ್ಯಮಾನವನ್ನು ವೀಕ್ಷಿಸಿ ಸೂರ್ಯ ಸಂಭ್ರಮ, ಸೂರ್ಯೋತ್ಸವ ಆಚರಿಸುವಂತೆ ತಿಳಿಸಿದರು.

ಸೂರ್ಯ ಮತ್ತು ಭೂಮಿ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದರೆ ಅದು ಸಂಪೂರ್ಣ ಸೂರ್ಯಗ್ರಹಣ, ಭಾಗಶಃ ಆವರಿಸಿದರೆ ಖಗ್ರಾಸ ಅಥವಾ ಪಾಶ್ರ್ವ ಸೂರ್ಯಗ್ರಹಣ ಎನ್ನಲಾಗುತ್ತದೆ. 172 ವರ್ಷ ಗಳ ಹಿಂದೆ ಈ ಅಪರೂಪದ ಖಗೋಳ ವಿದ್ಯಮಾನ ನಡೆದಿತ್ತು. ಇದು ಮತ್ತೆ 2064ರಲ್ಲಿ ಸಂಭವಿಸಲಿದೆ. ಹೀಗಾಗಿ ಡಿ.26ರಂದು ಸಂಭವಿಸುವ ಈ ಕಂಕಣ ಸೂರ್ಯಗ್ರಹಣವನ್ನು ತಪ್ಪದೇ ವೀಕ್ಷಿಸು ವಂತೆ ಸಲಹೆ ನೀಡಿದರು. ಈ ಗ್ರಹಣವು ಸಮುದ್ರದಲ್ಲಿ ಹಾದು ಹೋಗುವ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಹಾಗೂ ತಮಿಳುನಾಡಿನ ಕೆಲ ಭಾಗದಲ್ಲಿ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ಇಂಥ ವಿದ್ಯಮಾನ ಕಾಣಲು ದೇಶ, ವಿದೇಶದಿಂದ ವಿಜ್ಞಾನಿಗಳು, ಖಗೋಳ ತಜ್ಞರು ಹಾಗೂ ಸಾರ್ವಜನಿಕರು ಮೈಸೂ ರಿನತ್ತ ಆಗಮಿಸುತ್ತಿದ್ದಾರೆ. ಆದ್ದರಿಂದ ನಮ್ಮದೇ ಊರಿನಲ್ಲಿ ಗೋಚ ರಿಸಲಿರುವ ಕಂಕಣ ಸೂರ್ಯಗ್ರಹಣವನ್ನು ನೋಡಿ, ಗ್ರಹಣ ವೇಳೆ ಸೂರ್ಯನ ಕಿರಣಗಳು ಭೂಮಿಗೆ ನೇರವಾಗಿ ಬೀಳುವುದರಿಂದ ಸೌರ ಕನ್ನಡಕದಿಂದ ಗ್ರಹಣ ವೀಕ್ಷಣೆ ಮಾಡಬೇಕು. ಇಲ್ಲದಿದ್ದರೆ ಕಣ್ಣಿಗೆ ಅಪಾಯ ಉಂಟಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾ ಗಿದೆ ಎಂದು ಎಚ್ವರಿಕೆ ನೀಡಿದರು. ಈ ಸಂಬಂಧ ಹೆಚ್ಚಿನ ಮಾಹಿತಿಗೆ ಮೊ.ಸಂ. 7259225927 ಸಂಪರ್ಕಿಸಬಹುದು. ಗೋಷ್ಠಿಯಲ್ಲಿ ಮೈಸೂರು ಸೈನ್ಸ್ ಫೌಂಡೇಷನ್ ಸದಸ್ಯ ಹೆಚ್.ವಿ.ಮುರಳೀಧರ್ ಇದ್ದರು.

Translate »