ಅಂಗವಿಕಲತೆ ಸಮಸ್ಯೆಗೆ ಪರಿಹಾರದ ಪ್ರಯತ್ನ ಸಮರ್ಪಕವಾಗಿಲ್ಲ
ಮೈಸೂರು

ಅಂಗವಿಕಲತೆ ಸಮಸ್ಯೆಗೆ ಪರಿಹಾರದ ಪ್ರಯತ್ನ ಸಮರ್ಪಕವಾಗಿಲ್ಲ

May 15, 2019

ಮೈಸೂರು: ನಮ್ಮ ದೇಶದ ಕೋಟ್ಯಾಂತರ ಮಕ್ಕಳು ವಾಕ್ ಮತ್ತು ಶ್ರವಣ ದೋಷ ಸಮಸ್ಯೆ ಯಿಂದ ಬಳಲುತ್ತಿದ್ದಾರೆ ಎಂದು ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಡಾ.ಬಿ.ಸುರೇಶ್ ಅಭಿಪ್ರಾಯಪಟ್ಟರು.

ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಜೆಎಸ್‍ಎಸ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಸಹಯೋಗ ದೊಂದಿಗೆ ಆಯೋಜಿಸಿದ್ದ 2018-19ನೇ ಸಾಲಿನ `ಪದವಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವದಲ್ಲಿ ಒಟ್ಟು ಒಂದು ಶತಕೋಟಿ ಮಂದಿ ಕಿವುಡು, ಮೂಕರಾಗಿದ್ದಾರೆ. ವಿಶ್ವದ ಒಟ್ಟು ಜನಸಂಖ್ಯೆಯ ಶೇ.15 ರಷ್ಟು ಮಂದಿ ಇದ್ದಾರೆ. ನಮ್ಮ ದೇಶದಲ್ಲಿ ಒಟ್ಟು ಏಳು ಕೋಟಿ ಅಂಗವಿಕಲರಾಗಿದ್ದು, ಇದರಲ್ಲಿ ಅಂಗವೈಫಲ್ಯ, ಬುದ್ಧಿಮಾಂದ್ಯರು ಹಾಗೂ ಇತರೆ ಅಂಗವಿಕಲತೆಯಿಂದ ಬಳಲುತ್ತಿರುವವರು ಇದ್ದಾರೆ. ಇವರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಗಂಭೀರ ಪ್ರಯತ್ನಗಳು ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ಹಲವು ಭಾಷೆಗಳಿವೆ. ಆಯಾಯ ಪ್ರಾದೇಶಿಕ ಭಾಷೆಗಳಲ್ಲೆ ಅಂಗವಿಕಲರು ವ್ಯವಹರಿಸುತ್ತಿದ್ಧಾರೆ. ಆದರೆ, ವಿಶ್ವದ ಬೇರೆ ದೇಶಗಳಲ್ಲಿ ಇರು ವಂತೆ ಒಂದು ಸಂಜ್ಞಾ ಭಾಷೆ ಅಭಿವೃದ್ಧಿ ಯಾಗಬೇಕು. ಪ್ರಸ್ತುತ ನಮ್ಮ ದೇಶದಲ್ಲಿ ಸಂಜ್ಞಾ ಭಾಷೆಯ ಅಭಿವೃದ್ಧಿ ಆರಂಭಿಕ ಹಂತದಲ್ಲಿದೆ. ಇದರ ಪದಕೋಶದಲ್ಲಿ ಕೇವಲ ಸಾವಿರ ಪದಗಳಿವೆ ಎಂದರು.
ನಿಘಂಟು ಸಂಪಾದನೆಯಾಗಲಿ: ಭಾರತ ದಲ್ಲಿ ಕಿವುಡು, ಮೂಕರಿಗಾಗಿ ಸಂಜ್ಞಾ ಭಾಷೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸುವ ಅಗತ್ಯತೆ ಹೆಚ್ಚಿದ್ದು, ಇವರಿಗಾಗಿ ಸೂಕ್ತ ಭಾಷಾ ನಿಘಂಟು ಸಿದ್ಧವಾಗಿಲ್ಲ. ಈಗಿರುವ ನಿಘಂಟುಗಳು ವೃತ್ತಿಪರವಾಗಿಯೂ ಇಲ್ಲ. ಈ ಕುರಿತು ತಜ್ಞರು ಕಾರ್ಯ ನಿರ್ವ ಹಿಸುವ ಅಗತ್ಯತೆ ಇದೆ ಎಂದರಲ್ಲದೆ, ಈ ಕ್ಷೇತ್ರದ ಕೋರ್ಸ್‍ಗಳಿಗೆ ಪುರುಷರು ಮಾತ್ರ ಪ್ರವೇಶಾತಿ ಪಡೆಯುತ್ತಿದ್ದರು. ಇದೀಗ ಮಹಿಳೆ ಯರು ಈ ಕ್ಷೇತ್ರಕ್ಕೆ ಹೆಚ್ಚಾಗಿ ಬರುತ್ತಿರು ವುದು ಒಳ್ಳೆಯ ಬೆಳವಣಿಗೆ ಎಂದರು.

ಆಯಿಷ್ ನಿವೃತ್ತ ನಿರ್ದೇಶಕ ಡಾ.ನ.ರತ್ನ ಮಾತನಾಡಿ, ವಾಕ್ ಮತ್ತು ಶ್ರವಣ ವಿಷಯವನ್ನು ವೃತ್ತಿಯಾಗಿ ಸ್ವೀಕರಿಸುವುದು ಬಹುದೊಡ್ಡ ಜವಾಬ್ದಾರಿ. ಅನೇಕ ನೊಂದ ಜೀವಗಳಿಗೆ ಸಾಂತ್ವನ ಹೇಳುವ ಅವಕಾಶ ಸಿಗುತ್ತದೆ. ಹಾಗಾಗಿ, ಗಂಭೀರ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಬಹುಮಾನ ವಿತರಣೆ: ಉತ್ತಮ ಸಾಧನೆ ತೋರಿದ ಟಿ.ಅನಿತಾ ಮಣಿ ಅವರಿಗೆ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಬಹುಮಾನ, ಸೌಮ್ಯಾ ಹನಸೋಗೆ ಅವರಿಗೆ ಅತ್ಯುತ್ತಮ ವೈದ್ಯೆ, ಭರಣಿ ಅವರು 2018-19 ಸಾಲಿನಲ್ಲಿ ಹೆಚ್ಚು ಅಂಕ ಗಳಿಕೆಗೆ, ರಂಜಿನಿ ದೊರೈ ಅವರು 2017-18ನೇ ಸಾಲಿನಲ್ಲಿ ಹೆಚ್ಚು ಅಂಕ ಗಳಿಕೆಗೆ, ಸಂಗಕಾರಿ ಕೃಪಯ್ಯ ಗಣೇಶನ್ ಅವರು 2018-19ನೇ ಸಾಲಿನಲ್ಲಿ ಆಡಿಯಾಲಜಿ ವಿಷಯಕ್ಕೆ, ಮರಿಯಾ ಜಾರ್ಜ್ ಅವರು 2017-18ನೇ ಸಾಲಿನಲ್ಲಿ ಹೆಚ್ಚು ಅಂಕ ಗಳಿಕೆಗೆ, ಚಿತ್ಕಲಾ ಶರ್ಮಾ ಅವರು 2018-19ನೇ ಸಾಲಿನಲ್ಲಿ ಧ್ವನಿ ಔಷಧ ವಿಜ್ಞಾನ ವಿಷಯಕ್ಕೆ, ರಾಕೇಶ್ ಟಿ.ಕುಮಾರ್ 2017-18ನೇ ಸಾಲಿನಲ್ಲಿ ಹೆಚ್ಚು ಅಂಕ ಗಳಿಕೆಗೆ, ಶ್ರುತಿ ಕೆ.ವಿನೋದ್ ಅವರು ಅತ್ಯುತ್ತಮ ವಿದ್ಯಾರ್ಥಿ, ಮೋನಿಕಾ ರತ್ನಮಾಲಾ ಅವರು ಅತ್ಯುತ್ತಮ ಔಷಧ ವಿಜ್ಞಾನ, ಡಿ.ನಾಗಶ್ರೀ ಅವರು 2017-18ನೇ ಸಾಲಿನ ಎಂಎಎಸ್‍ಎಲ್‍ಪಿ ವಿಷಯದಲ್ಲಿ ಹೆಚ್ಚು ಅಂಕ ಗಳಿಕೆಗೆ, ಎಸ್. ನೇಹಾ ಅವರಿಗೆ ವಾಕ್ ಮತ್ತು ಭಾಷಾ ಔಷಧವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಗಳಿಕೆಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಡಾ.ಬಿ.ಸುರೇಶ್, ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್ಸೂರ್‍ಮಠ್, ಪ್ರಾಂಶುಪಾಲೆ ಸುಮಾ, ಎಂ.ಪಿ.ನಟರಾಜ್ ಉಪಸ್ಥಿತರಿದ್ದರು.

Translate »