ಬೆಂಕಿಗಾಹುತಿಯಾಗಿದ್ದ ಬಂಡೀಪುರ ಅರಣ್ಯದಲ್ಲಿ ಬಿತ್ತನೆ ಕಾರ್ಯ ಆರಂಭ
ಮೈಸೂರು

ಬೆಂಕಿಗಾಹುತಿಯಾಗಿದ್ದ ಬಂಡೀಪುರ ಅರಣ್ಯದಲ್ಲಿ ಬಿತ್ತನೆ ಕಾರ್ಯ ಆರಂಭ

May 6, 2019

ಮೈಸೂರು: ಕಿಡಿಗೇಡಿಗಳಿಟ್ಟ ಕಿಚ್ಚಿಗೆ ಬಂಡೀಪುರ ಅಭಯಾರಣ್ಯದ ಸುಟ್ಟು ಹೋಗಿ ರುವ ಕೆಲ ಪ್ರದೇಶಕ್ಕೆ ಪುನಶ್ಚೇತನ ನೀಡಲು ಕ್ರಮ ಕೈಗೊಂಡಿರುವ ಅರಣ್ಯ ಇಲಾಖೆ ಬಿದಿರು ಸೇರಿ ದಂತೆ ಸ್ಥಳೀಯವಾಗಿ ಬೆಳೆಯುವ ಮರಗಳ ಬೀಜ ಬಿತ್ತನೆ ಆರಂಭಿಸಿದ್ದು, ಹೆಚ್ಚಿನ ಪ್ರಮಾಣ ದಲ್ಲಿ ಹಾನಿಯಾಗಿದ್ದ ಕಾಡಿಗೆ ಕಳೆದ ಐದಾರು ದಿನದಿಂದ ಬೀಜ ಬಿತ್ತನೆ ಕಾರ್ಯ ನಡೆಸ ಲಾಗುತ್ತಿದೆ. ಕಳೆದ 15 ದಿನಗಳಿಂದ ಬಂಡೀಪುರ ಅಭಯಾರಣ್ಯದ ಎಲ್ಲಾ ವಲಯಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಈಗಾಗಲೇ ಬಹು ತೇಕ ಎಲ್ಲಾ ವಲಯಗಳು ಹಸಿರಿನಿಂದ ಕಂಗೊ ಳಿಸುತ್ತಿದೆ. ಈ ನಡುವೆ ಬೆಂಕಿ ಬಿದ್ದು ತೀವ್ರ ಹಾನಿಗೊಳಗಾಗಿರುವ ಗೋಪಾಲಸ್ವಾಮಿ ಬೆಟ್ಟ, ಕುಂದಕರೆ ವಲಯದಲ್ಲಿ ಮರಗಳು ಚಿಗು ರುತ್ತಿವೆಯಾದರೂ ನೆಲದಲ್ಲಿ ಹುಲ್ಲು ಬೆಳೆದಿಲ್ಲ. ಇದುವರೆಗೂ ಆರೇಳು ಬಾರಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಬೀಜ ಬಿತ್ತನೆ ಕಾರ್ಯ ಆರಂಭಿಸಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ. ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಹುಲಿಗಳಿರುವ ರಾಷ್ಟ್ರೀಯ ಉದ್ಯಾನವನ ಎಂಬ ಕೀರ್ತಿಗೆ ಪಾತ್ರವಾಗಿದೆ. 1200 ಚ.ಕಿ.ಮೀ ವಿಸ್ತೀರ್ಣದ ಬಂಡೀಪುರ 136 ಹುಲಿಗಳು, ಸಾವಿರಾರು ಆನೆ, ನೂರಾರು ಕಾಡೆಮ್ಮೆ, ಹಲವು ಚಿರತೆ, ಕರಡಿ, ಸಾಂಬಾರ್, ಮೌಸ್ ಡೀರ್, ಚುಕ್ಕೆ ಜಿಂಕೆ, ಕಾಡುನಾಯಿ ಮತ್ತಿತರ ಪ್ರಾಣಿ ಸಂಕುಲವನ್ನು ತನ್ನ ಮಡಿಲಲ್ಲಿಟ್ಟುಕೊಂಡಿದೆ. ಕುಂದಕೆರೆ ಗೋಪಾಲ ಸ್ವಾಮಿ ಬೆಟ್ಟ ವಲಯದ ಕಾಡಿಗೆ ಕಿಡಿಗೇಡಿಗಳು ದುರುಳರು ಬೆಂಕಿ ಇಟ್ಟಿದ್ದರಿಂದ ಅಪಾರ ವನ್ಯಸಂಪತ್ತು ಭಸ್ಮವಾಗಿತ್ತು. ಈ ಅರಣ್ಯ ಪ್ರದೇಶ ಮತ್ತೆ ಹಸಿರಿನಿಂದ ಕಂಗೊಳಿಸಲೆಂದು ವಿವಿಧ ಜಾತಿ ವೃಕ್ಷಗಳು ಹಾಗೂ ಬಿದಿರಿನ ಬೀಜಗಳ ಬಿತ್ತನೆ ಮಾಡಲಾಗುತ್ತಿದೆ. ಎಸಿಎಫ್ ರವಿಕುಮಾರ್, ಗೋಪಾಲಸ್ವಾಮಿ ಬೆಟ್ಟ ವಲಯದ ಇಂಚಾರ್ಜ್ ಆರ್‍ಎಫ್‍ಒ ಎನ್.ಸಿ.ಮಹದೇವ ಉಸ್ತುವಾರಿಯಲ್ಲಿ ಬೀಜ ಬಿತ್ತಲಾಗುತ್ತಿದೆ.

ಯಾವ ಯಾವ ಬೀಜ: ಗುಂಡ್ಲುಪೇಟೆ-ಊಟಿ (ಮೇಲುಕಾಮನಹಳ್ಳಿ ಗೇಟ್‍ನಿಂದ) ಮುಖ್ಯರಸ್ತೆಯ ಎರಡೂ ಬದಿಯಿಂದ ಬೀಜ ಬಿತ್ತನೆ ಆರಂಭಿಸಿ, ಗೋಪಾಲಸ್ವಾಮಿ ಬೆಟ್ಟದ ಹಲವೆಡೆ ಮುಂದುವರೆಸಲಾಗಿದೆ. ಇಲಾಖೆಯ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ಮಣ್ಣನ್ನು ಕಳಕೊಂಟಿನಿಂದ ಸಡಿಲಿಸಿ ಬೀಜ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಹೊಂಗೆ(2500 ಕೆಜಿ), ಶ್ರೀಗಂಧ(500), ಫೈಕಸ್(200), ಎಲಚಿ(470), ಹುಣಸೆ(200), ಹೆಬ್ಬೇವು(4000), ಗೊಬ್ಬಳಿ(110), ಶಿವನೆ(14), ಹೆಮಟಾ(1500 ಕೆಜಿ), ಹೊಳೆದಾಸವಾಳ(13 ಕೆಜಿ) ಸೇರಿದಂತೆ ವಿವಿಧ ತಳಿಯ ಗಿಡ-ಮರಗಳ ಬೀಜವನ್ನು ನೆಡುವುದಕ್ಕೆ ಉದ್ದೇಶಿಸಲಾಗಿದೆ. ಈಗಾಗಲೇ 10 ಸಾವಿರ ಕೆಜಿಗೂ ಹೆಚ್ಚು ವಿವಿಧ ಗಿಡ, ಮರಗಳ ಬೀಜ ತರಲಾಗಿದ್ದು, ಇನ್ನು 2500ಕೆಜಿ ಬಿತ್ತನೆ ಬೀಜ ತರುವ ಆಲೋಚನೆ ಅರಣ್ಯ ಇಲಾಖೆ ಮುಂದಿದೆ.

ಸೀಡ್ ಬಾಲ್ ಬಳಸಲ್ಲ: ಕೆಲವು ಸಂಘ ಸಂಸ್ಥೆಗಳು ಕಾಳ್ಗಿಚ್ಚಿನಿಂದ ತೀವ್ರ ಹಾನಿ ಗೊಳಗಾಗಿದ್ದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹಾಕಲೆಂದು ಸಾರ್ವಜನಿಕ ವಂತಿಗೆ ಸಂಗ್ರಹಿಸಿ ಸೀಡ್ ಬಾಲ್ ತಯಾರಿಸುತ್ತಿರುವುದಾಗಿ ಹೇಳಿಕೊಂಡಿದ್ದವು. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿ, ಸೀಡ್ ಬಾಲ್ ತಯಾರಿಕೆಗೆ ಯಾವ ಸಂಸ್ಥೆಗಳಿಗೂ ಅನುಮತಿ ನೀಡಿಲ್ಲ. ಸೀಡ್ ಬಾಲ್ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದೀಗ ಬೀಜ ಬಿತ್ತನೆ ಕಾರ್ಯದಲ್ಲಿ ಸಂಘ-ಸಂಸ್ಥೆ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರಿಗೆ ಅವಕಾಶ ನೀಡದೆ, ಇಲಾಖೆ ಸಿಬ್ಬಂದಿಗಳ ಮೂಲಕವೇ ಬಿತ್ತನೆ ಬೀಜ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ.
ಎಂ.ಟಿಯೋಗೇಶ್ ಕುಮಾರ್

Translate »