ಸುಭಾಷ್‍ಚಂದ್ರ ಬೋಸ್ ಹೋರಾಟ ಕೇವಲ ಸ್ವಾತಂತ್ರ್ಯಕ್ಕೆ ಸೀಮಿತವಲ್ಲ
ಮೈಸೂರು

ಸುಭಾಷ್‍ಚಂದ್ರ ಬೋಸ್ ಹೋರಾಟ ಕೇವಲ ಸ್ವಾತಂತ್ರ್ಯಕ್ಕೆ ಸೀಮಿತವಲ್ಲ

January 24, 2020

ಮೈಸೂರು, ಜ.23 (ಪಿಎಂ)- ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೋರಾಟ ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ಸೀಮಿತ ಎಂದು ಪರಿ ಭಾವಿಸಬಾರದು. ಅವರ ಹೋರಾಟ ಹಾಗೂ ಚಿಂತನೆಗಳು ಒಂದು ಪೀಳಿಗೆಗೆ ಮಾತ್ರ ಸೀಮಿತಗೊಂಡಿಲ್ಲ. ಹೀಗಾಗಿ ಇಂದಿಗೂ ಅವರ ಚಿಂತನೆ ಹಾಗೂ ಹೋರಾಟದ ಆದರ್ಶ ಪ್ರಸ್ತುತ ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ ಅಭಿಪ್ರಾಯಪಟ್ಟರು.

ಮೈಸೂರು ವಿವಿಯ ಗ್ರಂಥಾಲಯದಲ್ಲಿ ನೇತಾಜಿ ಜನ್ಮ ಶತಮಾನೋತ್ಸವ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮಶತಾಬ್ಧಿ ಸಮಾರಂಭದಲ್ಲಿ ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಹಲವು ಮಹನೀಯರು ನಮ್ಮ ದೇಶ ವನ್ನು ಕಟ್ಟಿದ್ದಾರೆ. ಅವರ ಕೊಡುಗೆಗಳನ್ನು ನಾವು ಸ್ಮರಿಸಬೇಕು. ಸುಭಾಷ್ ಚಂದ್ರ ಬೋಸ್, ಗಾಂಧೀಜಿ ಹಾಗೂ ಅಂಬೇ ಡ್ಕರ್ ಮೊದಲಾದ ಎಲ್ಲಾ ಮಹನೀಯರ ಹೋರಾಟ ಹಾಗೂ ಕೊಡುಗೆ ಇಡೀ ಮನುಕುಲದ ಒಳಿತಿಗಾಗಿಯೇ ಆಗಿದೆ. ಅವರ ಕೊಡುಗೆ ಕೇವಲ ಒಂದು ಪೀಳಿ ಗೆಗೆ ಮಾತ್ರ ಸೀಮಿತವಾಗಿಲ್ಲ. ಗಾಂಧಿ ಹಾಗೂ ಅಂಬೇಡ್ಕರ್ ಚಿಂತನೆ ಇಂದಿಗೂ ಪ್ರಸ್ತುತವಾಗಿದ್ದರೆ, ಸುಭಾಷ್ ಚಂದ್ರ ಬೋಸ್ ಅವರ ಹೋರಾಟ ಇಂದಿಗೂ ಆದರ್ಶವಾಗಿದೆ ಎಂದು ತಿಳಿಸಿದರು.

ಭಿನ್ನಾಭಿಪ್ರಾಯದ ಸಂಭ್ರಮಾಚರಣೆ ಎನ್ನುವ ಮಾತಿದೆ. ಇಂತಹ ಆರೋಗ್ಯ ಪೂರ್ಣ ವಿಚಾರ ವಿನಿಮಯ ಪ್ರಜಾ ಪ್ರಭುತ್ವದಲ್ಲಿ ಮಾತ್ರವೇ ಸಾಧ್ಯ. ವೈವಿಧ್ಯ ಮಯ ಸಮಾಜದಲ್ಲಿ ಭಿನ್ನಾಭಿಪ್ರಾಯ ಸಾಮಾನ್ಯ ಸಂಗತಿ. ಅದು ಆರೋಗ್ಯಕರ ವಾಗಿರುವುದು ಮುಖ್ಯ ಎಂದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ ಮಾತನಾಡಿ, ಗಾಂಧಿ ಅವರಿಗೂ ಪೂರ್ವದಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಸುಭಾಷ್ ಚಂದ್ರ ಬೋಸ್ ಅವರು ಕ್ರಾಂತಿಯ ಹಾದಿಯಲ್ಲಿ ಮುಂದು ವರೆದರೆ, ಗಾಂಧಿಯವರು ಶಾಂತಿಯ ಮಾರ್ಗ ಅನುಸರಿಸಿದರು. ಧೈರ್ಯ, ಸಾಹಸ, ಕೆಚ್ಚಿಗೆ ಮತ್ತೊಂದು ಹೆಸರಿನಂತೆ ಇದ್ದವರು ಸುಭಾಷ್ ಚಂದ್ರ ಬೋಸ್ ಎಂದು ಸ್ಮರಿಸಿದರು.

ಸ್ವಾತಂತ್ರೋತ್ತರ ಬಳಿಕ ಅನೇಕ ಮಹ ನೀಯರು ದೇಶಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆ ಹಾಗೂ ವಿಚಾರಧಾರೆಗಳನ್ನೂ ಶಾಲಾ-ಕಾಲೇಜು ಪಠ್ಯದಲ್ಲಿ ಅಳವಡಿಸಬೇಕು. ಇದರಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ ಎಂದರು. ಇದೇ ವೇಳೆ ಸುಭಾಷ್ ಚಂದ್ರ ಬೋಸ್ ಅವರ ಕುರಿತ ಇಂಗ್ಲಿಷ್ ಹಾಗೂ ಕನ್ನಡ ಪುಸ್ತಕ ಗಳನ್ನು ಪ್ರದರ್ಶಿಸಲಾಯಿತು. ಉಪ ಮೇಯರ್ ಶ್ರೀಧರ್, ಮೈಸೂರು ವಿವಿ ಗ್ರಂಥಾಲಯದ ಗ್ರಂಥಪಾಲಕಿ ಡಾ.ಪಿ. ಸರಸ್ವತಿ ಮತ್ತಿತರರು ಹಾಜರಿದ್ದರು.

Translate »