ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು
ಮೈಸೂರು

ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು

July 17, 2019

ನವದೆಹಲಿ, ಜು.16- ಅತೃಪ್ತ ಕಾಂಗ್ರೆಸ್-ಜೆಡಿಎಸ್‍ನ 15 ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಾಳೆ ಬೆಳಿಗ್ಗೆ ತೀರ್ಪು ಪ್ರಕಟಿಸಲಿದೆ.

ಈ ತೀರ್ಪು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾ ರದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಾದ-ಪ್ರತಿವಾದ ಮುಗಿಸಿ, ತೀರ್ಪು ಕಾಯ್ದಿರಿಸುತ್ತಿದ್ದಂತೆ ಇತ್ತ ಉಭಯ ಪಕ್ಷಗಳ 15 ಬಂಡಾಯ ಶಾಸಕರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ವ್ಹಿಪ್ ಜಾರಿ ಮಾಡಿ, ಚದುರಂಗದ ಆಟದಲ್ಲಿ ದಾಳ ಹಾಕಿದೆ. ಬುಧವಾರ ನೀಡಲಿರುವ ತೀರ್ಪು ಎಲ್ಲರ ಗಮನ ಸೆಳೆದಿದ್ದು ಅದು ನೀಡುವ ಆದೇಶವೇನು ಎಂಬುದರ ಆಧಾರದ ಮೇಲೆ ರಾಜ್ಯ ರಾಜಕೀಯಕ್ಕೆ ರೋಚಕ ತಿರುವು ಸಿಗಲಿದೆ. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 3.15ರ ತನಕ ಅತೃಪ್ತ ಶಾಸಕರ, ಸರ್ಕಾರದ, ಸಭಾಧ್ಯಕ್ಷರ, ಮುಖ್ಯಮಂತ್ರಿ ಪರ ಮತ್ತು ಯೂತ್ ಕಾಂಗ್ರೆಸ್ ಪರ ವಕೀಲರ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠ ಬುಧವಾರ ಬೆಳಿಗ್ಗೆ ತನ್ನ ತೀರ್ಪು ಪ್ರಕಟಿಸುವು ದಾಗಿ ಹೇಳಿತು. ಬುಧವಾರ ಅದು ನೀಡುವ ತೀರ್ಪಿನಲ್ಲಿ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತೆ ಸ್ಪೀಕರ್‍ಗೆ ಸೂಚನೆ ನೀಡುತ್ತದೋ ಅಥವಾ ಶಾಸಕರನ್ನು ಯಾವ ಕಾರಣಕ್ಕೂ ಸದಸ್ಯತ್ವದಿಂದ ಅನರ್ಹಗೊಳಿಸದಂತೆ ಕಟ್ಟುಪಾಡು ವಿಧಿಸುತ್ತದೋ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇಂದು ಬೆಳಿಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಂದೆ ಅತೃಪ್ತ ಶಾಸಕರ ಪರವಾಗಿ ವಾದ ಮಂಡಿಸಿದ ಮುಕುಲ್ ರೋಹಟಗಿ ಶಾಸಕರ ರಾಜೀ ನಾಮೆಯನ್ನು ತಕ್ಷಣವೇ ಸಭಾಧ್ಯಕ್ಷರು ಅಂಗೀಕರಿಸಬೇಕಿತ್ತು. ಆದರೆ ಅವರು ಸರ್ಕಾರದ ರಕ್ಷಣೆಗೆ ಮುಂದಾಗಿರುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಬಲವಾಗಿ ವಾದ ಮಂಡಿಸಿದರು. ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಅದನ್ನವರು ಮಾಡಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಅವರು ಯಾವುದೇ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಬದಲಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವಾದಿಸಿದರು.

ಇದೇ ರೀತಿ ವಿಧಾನಸಭಾಧ್ಯಕ್ಷರ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಮುಖ್ಯಮಂತ್ರಿ ಪರವಾಗಿ ರಾಜೀವ್ ಧವನ್ ಸೇರಿದಂತೆ ನಾಲ್ಕು ಮಂದಿ ವಕೀಲರು ತಮ್ಮ ತಮ್ಮ ವಾದ ಮಂಡಿಸಿದರು. ಒಂದು ಹಂತದಲ್ಲಿ ವಿಧಾನಸಭಾಧ್ಯಕ್ಷರ ವಕೀಲರು, ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಅಥವಾ ನಾಡಿದ್ದು ಸ್ಪೀಕರ್ ಅವರು ಒಂದು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ. ಗುರುವಾರ ಅಧಿವೇಶನ ನಡೆಯಲಿದ್ದು, ಅಂದು ಹಣಕಾಸು ವಿಧೇಯಕ ಮಂಡನೆಯಾಗಲಿದೆ. ಇಂತಹ ಸಂದರ್ಭದಲ್ಲಿ ಶಾಸಕರು ಸರ್ಕಾರವನ್ನು ಬೀಳಿಸುವ ಯೋಜನೆ ರೂಪಿಸಿದ್ದಾರೆ. ಹೀಗಾಗಿ ಇಂತಹ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಬಾರದು ಎಂದು ವಾದ ಮಂಡಿಸಿದ್ದರು.

ಆದರೆ ಯಾವ ಕಾರಣಕ್ಕೂ ಅಧ್ಯಕ್ಷರಿಗೆ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿ ಎಂದು ನಿರ್ದೇಶನ ನೀಡಬಾರದು. ಈ ಹಿಂದೆ ಅಂತಹ ನಿರ್ದೇಶನಗಳನ್ನು ನ್ಯಾಯಾ ಲಯ ನೀಡಿದಾಗ ಕೆಲ ರಾಜ್ಯಗಳ ವಿಧಾನಸಭೆ ಸ್ಪೀಕರ್ ಅವರು ಅದನ್ನು ಪಾಲಿಸದೆ ಇರುವ ನಿದರ್ಶನಗಳಿವೆ ಎಂದು ಹೇಳಿದರು. ಮಧ್ಯಾಹ್ನದವರೆಗೆ ನಡೆದ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಮಧ್ಯಾಹ್ನ ಮೂರು ಗಂಟೆಗೆ ವಿಚಾರಣೆಯನ್ನು ಮುಂದೂ ಡಿದರು. ತದ ನಂತರ ಮತ್ತೆ ಪ್ರಾರಂಭವಾದ ವಿಚಾರಣೆ 15 ನಿಮಿಷಗಳ ಕಾಲ ನಡೆಯಿತು. ಈ ಹಂತದಲ್ಲಿ ಯೂತ್ ಕಾಂಗ್ರೆಸ್ ಪರ ವಕೀಲರು ತಮ್ಮ ವಾದ ಮಂಡಿಸಿ, ಶಾಸಕರ ರಾಜೀನಾಮೆ ಪ್ರಕರಣ ಪ್ರಜಾಪ್ರಭುತ್ವಕ್ಕೆ ಮಾರಕ.ಕೇವಲ ಸರ್ಕಾರವನ್ನು ಬೀಳಿಸುವ ಸಲುವಾಗಿಯೇ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.ಇದು ಸರಿಯಲ್ಲ ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಬುಧವಾರ ಬೆಳಿಗ್ಗೆ 10:30 ಕ್ಕೆ ತೀರ್ಪು ನೀಡುವುದಾಗಿ ಪ್ರಕಟಿಸಿತು. ಆ ಮೂಲಕ ಶಾಸಕರ ರಾಜೀನಾಮೆ ಪ್ರಕರಣಕ್ಕೆ ಮುಂದೇನು ತಿರುವು ಸಿಗಲಿದೆ ಎಂಬ ಕುತೂಹಲ ಉಳಿದುಕೊಂಡಂತಾಯಿತು.

ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ವ್ಹಿಪ್ ಜಾರಿ
ಬೆಂಗಳೂರು, ಜು.16- ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಬುಧವಾರ ಬೆಳಿಗ್ಗೆ ಹೊರಬರುವುದು ನಿಗದಿಯಾಗುತ್ತಿದ್ದಂತೆಯೇ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ತಮ್ಮ ಶಾಸಕರಿಗೆ ವ್ಹಿಪ್ ಜಾರಿ ಮಾಡಿವೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ವಿಶ್ವಾಸ ಮತಯಾಚನೆ ಮಾಡಲಿದ್ದು, ಈ ಸಂದರ್ಭದಲ್ಲಿ ತಾವುಗಳು ಸದನದಲ್ಲಿ ಹಾಜರಾಗಿ ವಿಶ್ವಾಸಮತ ಪೂರ್ಣಗೊಳ್ಳುವವರೆಗೂ ಇದ್ದು, ಸರ್ಕಾರದ ಪರ ಮತ ಚಲಾಯಿಸಬೇಕೆಂದು ಉಭಯ ಪಕ್ಷಗಳು ಬಂಡಾಯ ಶಾಸಕರಿಗೂ ಆದೇಶ ಮಾಡಿವೆ.

ಒಂದು ವೇಳೆ ವ್ಹಿಪ್ ಉಲ್ಲಂಘಿಸಿದಲ್ಲಿ ತಮ್ಮ ಸದಸ್ಯತ್ವ ಅನರ್ಹತೆ ಸೇರಿದಂತೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು 15 ಶಾಸಕರಿಗೆ ಎಚ್ಚರಿಸಿದೆ. ಇಂದು ಸಂಜೆ ಈ ಶಾಸಕರ ನಿವಾಸ, ಕಚೇರಿ ಮತ್ತು ಶಾಸಕರ ಭವನದ ಕೊಠಡಿಗಳ ಬಾಗಿಲುಗಳಿಗೆ ವ್ಹಿಪ್ ಚೀಟಿಯನ್ನು ಉಭಯ ಪಕ್ಷಗಳು ಅಂಟಿಸಿವೆ. ಅಷ್ಟೇ ಅಲ್ಲದೆ ಕಾನೂನಾತ್ಮಕವಾಗಿ ಈ ಸದಸ್ಯರಿಗೆ ಸಂದೇಶಗಳನ್ನು ರವಾನಿಸ ಲಾಗಿದೆ. ಇನ್ನು ಉಳಿದ ಉಭಯ ಪಕ್ಷಗಳ ಶಾಸಕರು ಹೋಟೆಲ್ ಮತ್ತು ರೆಸಾರ್ಟ್‍ನಲ್ಲಿ ತಂಗಿದ್ದು, ಅವರಿಗೂ ವ್ಹಿಪ್ ಜಾರಿ ಮಾಡಲಾಗಿದೆ. ಬಿಜೆಪಿ ಈಗಾಗಲೇ ತನ್ನ ಶಾಸಕರಿಗೆ ವ್ಹಿಪ್ ಜಾರಿ ಮಾಡಿದ್ದಲ್ಲದೆ, ಪಕ್ಷದ ಮುಖಂಡರು ತಮ್ಮ ಸದಸ್ಯರಿಗೆ ಪಾಠ ಮಾಡಿದ್ದಾರೆ. ಅದರಲ್ಲೂ ಅನುಮಾನ ಬಂದಿರುವ ಸದಸ್ಯರಿಗಂತೂ ವಿಶೇಷ ತಿಳುವಳಿಕೆಯನ್ನು ನಾಯಕರು ನೀಡಿ ದ್ದಾರೆ ಎನ್ನಲಾಗಿದೆ. ವಿಶ್ವಾಸಮತ ಯಾಚನೆಯ ಸಂದರ್ಭ ದಲ್ಲಿ ಹಾಜರಿದ್ದು ವಿಶ್ವಾಸಮತ ಯಾಚನೆಯ ನಿರ್ಣಯದ ಪರವಾಗಿ ಮತ ಚಲಾಯಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಭಯ ಪಕ್ಷಗಳ ಶಾಸಕಾಂಗ ನಾಯಕರು ವ್ಹಿಪ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರಿಗೆ ವ್ಹಿಪ್ ಜಾರಿ ಮಾಡಿದ್ದರೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರಿಗೆ ವ್ಹಿಪ್ ಜಾರಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನವೇ ಶಾಸಕರಿಗೆ ವಿಪ್ಹ್ ಬಾಂಬ್ ಜಾರಿಯಾಗಿದ್ದು ಇದು ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ಎಂಬುದು ಬುಧವಾರ ಬೆಳಿಗ್ಗೆ ಪ್ರಕಟವಾಗಲಿರುವ ಸುಪ್ರಿಂಕೋರ್ಟ್ ತೀರ್ಪಿನ ನಂತರ ನಿರ್ಧಾರ ವಾಗಲಿದೆ.ಈ ಮಧ್ಯೆ ಸರ್ಕಾರದ ಬಲವನ್ನು ಹೆಚ್ಚಿಸಿಕೊಳ್ಳಲು ಇಂದು ಕೂಡಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ತಂದೆ ದೇವೇಗೌಡರ ಜತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸುದೀರ್ಘ ಚರ್ಚೆ ನಡೆಸಿದರು. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಮುಖಂಡರು ಪ್ರತ್ಯೇಕವಾಗಿ ಸಭೆ ನಡೆಸಿ, ಶಾಸಕರಿಗೆ ವ್ಹಿಪ್ ನೀಡುವುದು ಮತ್ತು ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಸಮಾಲೋಚನೆ ನಡೆಸಿದರು. ಈ ಮಧ್ಯೆ ಸುಪ್ರೀಂಕೋರ್ಟ್ ತೀರ್ಪು ಬುಧವಾರ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಇಂದು ತಮ್ಮ ಸ್ವಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ನಾನು ಸುಪ್ರೀಂಕೋರ್ಟ್‍ಗಿಂತ ದೊಡ್ಡವನಲ್ಲ. ಹೀಗಾಗಿ ಬುಧವಾರ ಅದು ತೀರ್ಪು ನೀಡಿದ ಬಳಿಕ ಮುಂದೇನು ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇನೆ ಎಂದರು.

Translate »