ಸರ್ಕಾರದ ಪತನದ ಭೀತಿಯ ನಡುವೆಯೇ ಪೊಲೀಸರಿಗೆ ಶೇ.12.5ರಷ್ಟು ವೇತನ ಹೆಚ್ಚಳ
ಮೈಸೂರು

ಸರ್ಕಾರದ ಪತನದ ಭೀತಿಯ ನಡುವೆಯೇ ಪೊಲೀಸರಿಗೆ ಶೇ.12.5ರಷ್ಟು ವೇತನ ಹೆಚ್ಚಳ

July 17, 2019

ಬೆಂಗಳೂರು, ಜು.16-ಸರ್ಕಾರದ ಪತನದ ಭೀತಿಯ ನಡುವೆಯೇ ಪೊಲೀಸರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂಪರ್ ಕೊಡುಗೆ ನೀಡಿದೆ.

ಧೂಳು ಹಿಡಿದಿದ್ದ ಔರಾದ್ಕರ್ ಸಮಿತಿ ಶಿಫಾರಸ್ಸನ್ನು ಭಾಗಶಃ ಮಾನ್ಯ ಮಾಡಿ, ಪೊಲೀಸರಿಗೆ ಶೇ. 12.5 ರಷ್ಟು ವೇತನ ಹೆಚ್ಚಳ ಮಾಡಿ, ಆದೇಶ ಹೊರಡಿಸಿದೆ. ಇದಲ್ಲದೆ, ವೇತನದ ಜೊತೆಗೆ ಅವರಿಗೆ ಸರ್ಕಾರಿ ನೌಕರರಿಗೆ ಸಿಗುವ ಇತರೆ ಸವಲತ್ತುಗಳಲ್ಲೂ ಹೆಚ್ಚಳ ಮಾಡಿದ್ದು, ಇದರಿಂದ ಪೊಲೀಸರು ಒಂದಷ್ಟು ನಿರಾಳವಾದಂತೆ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರ ದಿಂದ 600 ಕೋಟಿ ರೂ. ವಾರ್ಷಿಕ ಹೊರೆ ಬೀಳುತ್ತದೆ. ಒಂದು ವೇಳೆ ವರದಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಿದ್ದರೆ, ಸರಿ ಸುಮಾರು 2000 ಕೋಟಿ ರೂ. ಅಗತ್ಯವಿತ್ತು. ಪ್ರಸಕ್ತ ಹಣ ಕಾಸಿನ ಪರಿಸ್ಥಿತಿಯನ್ನಾಧಾರವಾಗಿಟ್ಟುಕೊಂಡು ಮಧ್ಯಂತರ ಆದೇಶವನ್ನು ಹೊರಡಿಸಿ ವೇತನ ಹೆಚ್ಚಳ ಮಾಡಲಾಗಿದೆ. ಸರ್ಕಾರದ ಆದೇಶದ ಪೂರ್ಣ ಪ್ರತಿ ಇನ್ನು ಲಭ್ಯವಾಗಿಲ್ಲ. ವೇತನ ಹೆಚ್ಚಳ ಮಾಡಬೇಕು, ಸಮವಸ್ತ್ರ ಭತ್ಯೆಯನ್ನು ಹೆಚ್ಚಳ ಮಾಡಬೇಕು, ರಿಸ್ಕ್ ಭತ್ಯೆ ನೀಡಬೇಕು ಎಂಬುದೂ ಸೇರಿದಂತೆ ಹಲವು ಆರ್ಥಿಕ ಅನುಕೂಲದ ಬೇಡಿಕೆಗಳನ್ನು ಪೊಲೀಸರು ಮಂಡಿಸಿದ್ದರು. ವಾರದ ರಜೆ ಸೇರಿದಂತೆ ಹಲವು ಅಂಶಗಳನ್ನೂ ಪ್ರಸ್ತಾಪಿಸಿದ್ದರು. ಔರಾದ್ಕರ್ ಸಮಿತಿ ಈ ಎಲ್ಲ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅಂತಿಮವಾಗಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಆ ವರದಿಯ ಆಧಾರದ ಮೇಲೆ ಸರ್ಕಾರ ಪೊಲೀಸರಿಗೆ ಬಂಪರ್ ಗಿಫ್ಟ್ ನೀಡಿದ್ದು ಈ ಬೆಳವಣಿಗೆ ಪೊಲೀಸ್ ವಲಯದಲ್ಲಿ ಹರ್ಷ ತಂದಿದೆ.

Translate »