ಪ್ರತಿಭಟನೆ ಕೈಬಿಟ್ಟ ಶಾಲಾ ಮಕ್ಕಳ ವಾಹನ ಚಾಲಕರು
ಮೈಸೂರು

ಪ್ರತಿಭಟನೆ ಕೈಬಿಟ್ಟ ಶಾಲಾ ಮಕ್ಕಳ ವಾಹನ ಚಾಲಕರು

July 17, 2019

ಮೈಸೂರು, ಜು.16(ಆರ್‍ಕೆಬಿ)-ಓಮ್ನಿ ವಾಹನ ದಲ್ಲಿ 12 ಮಕ್ಕಳು, ಆಟೋಗಳಲ್ಲಿ 8 ಮಕ್ಕಳನ್ನು ಕರೆದೊಯ್ಯಲು ಅನುಮತಿ ನೀಡುವಂತೆ ಆಗ್ರಹಿಸಿ ಶಾಲಾ ಮಕ್ಕಳ ಸಾಗಿಸುವ ಓಮ್ನಿ ಮತ್ತು ಆಟೋ ಚಾಲಕರು ಸೋಮವಾರದಿಂದ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಭರವಸೆ ಮೇರೆಗೆ ಇಂದು ಕೈಬಿಟ್ಟು ಮಕ್ಕಳನ್ನು ಕರೆದೊಯ್ಯುವ ಕಾರ್ಯಕ್ಕೆ ಮರಳಿದರು.

ಓಮ್ನಿ ವಾಹನದಲ್ಲಿ 8 ಮತ್ತು ಆಟೋಗಳಲ್ಲಿ 5 ಮಕ್ಕಳನ್ನು ಕರೆದೊಯ್ಯಲಾಗುತ್ತಿದ್ದು, ಇದರಿಂದ ನಮ್ಮ ಜೀವನ ನಿರ್ವಹಿಸುವುದು ಕಷ್ಟವಾಗಿದೆ. ಮಕ್ಕಳನ್ನು ಕಾನೂನು ಬದ್ಧವಾಗಿ ಜವಾಬ್ದಾರಿಯಿಂದ ಶಾಲೆಗೆ ಕರೆದೊಯ್ದು ಮತ್ತೆ ಮನೆಗೆ ಸೇರಿಸುವ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿರುವ ನಮಗೆ ಇತ್ತೀಚಿನ ನಿಯಮದಿಂದ ನಮ್ಮ ಜೀವನಕ್ಕೆ ಭಾರೀ ಹೊಡೆತ ಬಿದ್ದಿದೆ. ಅಲ್ಲದೆ ನೂರಾರು ಚಾಲಕರ ಡಿಎಲ್ ಕೂಡ ವಶಪಡಿಸಿಕೊಂಡಿರುವುದು ನಮ್ಮನ್ನು ಹೈರಾಣಾಗಿಸಿದೆ. ಹಾಗಾಗಿ ನಮಗೆ ಡಿಎಲ್ ಮರಳಿಸ ಬೇಕು. ಓಮ್ನಿಯಲ್ಲಿ 12 ಮತ್ತು ಆಟೋಗಳಲ್ಲಿ 8 ಮಕ್ಕಳನ್ನು ಕರೆದೊಯ್ಯಲು ಅನುಮತಿ ನೀಡ ಬೇಕು. ನಮಗೂ ಜೀವನ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ 400ಕ್ಕೂ ಹೆಚ್ಚು ಓಮ್ನಿ ಮತ್ತು ಆಟೋ ಚಾಲಕರು ಸೋಮವಾರ ದಿಂದ ಶಾಲೆಗಳಲ್ಲಿ ಮಕ್ಕಳನ್ನು ಕರೆದೊಯ್ಯುವ ಕಾರ್ಯವನ್ನು ಸ್ಥಗಿತಗೊಳಿಸಿ, ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಬಳಿ ಅನಿರ್ದಿಷ್ಟ ಪ್ರತಿಭಟನೆ ಆರಂಭಿ ಸಿದ್ದರು. ಇದುವರೆಗೆ ಓಮ್ನಿಯಲ್ಲಿ ಪ್ರತಿ ಟ್ರಿಪ್‍ನಲ್ಲಿ 12 ಮಕ್ಕಳು ಆಟೋದಲ್ಲಿ 8 ಮಕ್ಕಳನ್ನು ಜವಾ ಬ್ದಾರಿಯಿಂದ ಶಾಲೆಗಳಿಗೆ ಕರೆದೊಯ್ದು ಪುನಃ ಅವರ ಮನೆಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಆದರೆ ಇತ್ತೀಚೆಗೆ ಪೊಲೀಸ್ ಇಲಾಖೆ ಈ ಪ್ರಮಾಣದ ಮಕ್ಕಳನ್ನು ಕರೆದೊ ಯ್ಯಲು ಅವಕಾಶ ನೀಡದೆ ಇಷ್ಟೇ ಮಕ್ಕಳನ್ನು ಕರೆದೊಯ್ಯುವಂತೆ ಒತ್ತಡ ಹಾಕಲಾಗುತ್ತಿದೆ. ಅಲ್ಲದೆ ಸ್ಥಳದಲ್ಲಿಯೇ ಕಾನೂನು ಕ್ರಮಕ್ಕೆ ಮುಂದಾಗಿರುವು ದರಿಂದ ನಿಗದಿತ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ತಲುಪಿಸಲು ಹಾಗೂ ಮನೆಗೆ ವಾಪಸ್ ಕರೆ ದೊಯ್ಯಲು ಆಗುತ್ತಿಲ್ಲ ಎಂದು ಚಾಲಕರು ಈ ಸಂದರ್ಭದಲ್ಲಿ ದೂರಿದರು. ಇದೇ ವೃತ್ತಿಯನ್ನು ಅವಲಂಬಿಸಿ ಜೀವನ ನಿರ್ವಹಿಸುತ್ತಿರುವ ನಮಗೆ ಹೊಸ ನೀತಿಯಿಂದ ತೊಂದರೆಯಾಗುತ್ತಿದೆ. ಅಲ್ಲದೆ ಆರ್ಥಿಕವಾಗಿ ಸದೃಢರಲ್ಲದ ಪೋಷಕ ರಿಗೂ ಹೆಚ್ಚಿನ ಹೊರೆಯಾಗುತ್ತಿದೆ. ಬಹುತೇಕ ಮಧ್ಯಮ, ಕೆಳವರ್ಗದ ಹಾಗೂ ಅಸಂಘಟಿತ ವರ್ಗಕ್ಕೆ ಸೇರಿದ ಕೂಲಿ ಕಾರ್ಮಿಕ ಪೋಷಕರಿಗೆ ಹೆಚ್ಚಿನ ತೊಂದರೆ ಆಗುತ್ತಿದೆ ಎಂದು ಪ್ರತಿಭಟನಾ ಕಾರರ ಮನವಿಯಾಗಿತ್ತು. ಕಾನೂನು ಚೌಕಟ್ಟಿ ನಲ್ಲಿಯೇ ಸಾರ್ವಜನಿಕರಿಗೆ, ಮಕ್ಕಳ ಪೋಷಕರಿಗೆ, ಮಕ್ಕಳಿಗೆ ಯಾವ ಅಡೆ ತಡೆ, ತೊಂದರೆ ಇಲ್ಲ ದಂತೆ ಕಾರ್ಯ ನಿರ್ವಹಿಸಲು ಸಿದ್ಧರಿರುವ ನಮಗೆ ಓಮ್ನಿ ವಾಹನದಲ್ಲಿ 12 ಹಾಗೂ ಆಟೋಗಳಲ್ಲಿ 8 ಮಕ್ಕಳನ್ನು ಕರೆದೊಯ್ಯಲು ಅವಕಾಶ ಕಲ್ಪಿಸು ವಂತೆ ಆಗ್ರಹಿಸಿದ್ದರು. ಜಿಲ್ಲಾಧಿಕಾರಿಗಳು ಸಭೆ ಕರೆದು ನಮ್ಮ ಸಮಸ್ಯೆಯನ್ನು ಆಲಿಸಬೇಕು. ನಮ್ಮ ಮನವಿಗೆ ಸ್ಪಂದಿಸಿ, ನಮಗೂ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆ ಯಾಗಿತ್ತು. ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಮನವಿ ಸ್ವೀಕರಿಸಿ, ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದರು. ಇದರ ಅನ್ವಯ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಂಗಳವಾರ ತಮ್ಮ ಕಚೇರಿಯಲ್ಲಿ ಓಮ್ನಿ ಮತ್ತು ಆಟೋ ಚಾಲಕರ ಸಮಿತಿಯ ಮುಖಂಡರ ಮನವಿ ಆಲಿಸಿದರು. ಬಳಿಕ, ಇದಕ್ಕೆ ಸಂಬಂಧಿಸಿದ ಇಲಾಖೆಯ ಗಮನಕ್ಕೂ ಈ ವಿಚಾರವನ್ನು ತಂದು, ನಂತರ ಅವಶ್ಯಕತೆ ಇದ್ದರೆ ನಿಮ್ಮನ್ನೂ ಕರೆಯುವುದಾಗಿ ಭರವಸೆ ನೀಡಿದರು. ಅಲ್ಲಿಯವರೆಗೆ ಮಕ್ಕಳಿಗೆ ತೊಂದರೆಯಾಗದಂತೆ ನಿಮ್ಮ ಕೆಲಸ ನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಮೌಖಿಕ ಭರವಸೆ ಹಿನ್ನೆಲೆಯಲ್ಲಿ ಚಾಲಕರು ಪ್ರತಿಭಟನೆಯನ್ನು ಕೈಬಿಟ್ಟು, ಮಂಗಳವಾರ ಸಂಜೆಯಿಂದಲೇ ಶಾಲೆಗಳಿಂದ ಮಕ್ಕಳನ್ನು ಕರೆದೊಯ್ಯುವ ಕಾರ್ಯಕ್ಕೆ ಹಿಂತಿರುಗಿದರು. ಈ ಸಂದರ್ಭದಲ್ಲಿ ಓಮ್ನಿ ಮತ್ತು ಆಟೋ ಚಾಲಕರ ಸಮಿತಿಯ ಮುಖಂಡರಾದ ಕೆ.ಹೆಚ್.ಅನಂತಕುಮಾರ್, ಸುರೇಶ್, ಶ್ರೀನಿವಾಸ್, ಪಾಪಣ್ಣ, ಭೈರವಸ್ವಾಮಿ, ರಘು, ಅನಂತು, ಎಂ.ರವಿ ಇನ್ನಿತರರು ಉಪಸ್ಥಿತರಿದ್ದರು.

Translate »