ಕೊಯಮತ್ತೂರಲ್ಲಿ ಕನ್ನಡ ಬಾವುಟವಿದ್ದ ವಾಹನ ತಡೆದು ಚಾ.ನಗರ ಯುವಕರ ಮೇಲೆ ದಬ್ಬಾಳಿಕೆ
ಮೈಸೂರು

ಕೊಯಮತ್ತೂರಲ್ಲಿ ಕನ್ನಡ ಬಾವುಟವಿದ್ದ ವಾಹನ ತಡೆದು ಚಾ.ನಗರ ಯುವಕರ ಮೇಲೆ ದಬ್ಬಾಳಿಕೆ

January 2, 2020

ಮೈಸೂರು,ಜ.1(ಆರ್‍ಕೆ)-ಕಾರಿನಿಂದ ಕನ್ನಡ ಬಾವುಟ ತೆಗೆಯುವಂತೆ ಚಾಮರಾಜ ನಗರ ಯುವಕರ ಮೇಲೆ ದಬ್ಬಾಳಿಕೆ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಚಾಮರಾಜನಗರ ಜಿಲ್ಲೆ ಕಿಲಗೆರೆಯ ಶಿವಕುಮಾರ್, ವೀರಭದ್ರಪ್ಪ, ಮನು, ರವಿ, ಶಿವಕುಮಾರ್, ಸೋಮಶೇಖರ್, ಮಧುಸೂದನ್, ಮಹದೇವಪ್ರಸಾದ್ ಹಾಗೂ ಅಭಿನಂದನ್ ಎಂಬುವರು ಕೊಯಮತ್ತೂರಿನ ಜಗ್ಗಿ ವಾಸುದೇವ ಅವರ ಆಶ್ರಮದಲ್ಲಿನ ಈಶ್ವರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಅಲ್ಲಿನ ಹೊರವಲಯದ ಗಣಬದಿ ಬಳಿಯ ಹೀರೋ ಹೋಂಡಾ ಷೋ ರೂಂ ಎದುರು ಈ ಘಟನೆ ನಡೆದಿದೆ.

ಇಂದು ಬೆಳಿಗ್ಗೆ 7 ಗಂಟೆಗೆ ಟವೇರಾ ವಾಹನದಲ್ಲಿ 9 ಮಂದಿ ಸ್ನೇಹಿತರು ಚಾಮ ರಾಜನಗರದಿಂದ ಹೊರಟಿದ್ದರು. ಕೊಯಮತ್ತೂರು ನಗರ ತಲುಪಿದಾಗ ಮಧ್ಯಾಹ್ನ ಸುಮಾರು 2.30 ಗಂಟೆ ವೇಳೆಯಾಗಿತ್ತು. ಅಲ್ಲಿನ ಗಣಬದಿ ಬಳಿ ನಮ್ಮ ಕಾರನ್ನು ಅಡ್ಡಗಟ್ಟಿದ ಯುವಕರಿಬ್ಬರು, ಕಾರಿನ ಮುಂಭಾಗ ಹಾಕಿದ್ದ ಭುವನೇಶ್ವರಿ ಕನ್ನಡ ಬಾವುಟ ತೆಗೆಯುವಂತೆ ಒತ್ತಾಯಿಸಿದರು ಎಂದು ಮಹದೇವಪ್ರಸಾದ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ನನ್ನ ವಾಹನದ ಮೇಲೆ ನಮ್ಮ ಕನ್ನಡ ಬಾವುಟ ಹಾಕಿದ್ದೇವೆ. ಅದರಿಂದ ನಿಮಗೇನಾ ದರೂ ತೊಂದರೆ ಆಗಿದೆಯೇ? ನೀವು ನಮ್ಮ ರಾಜ್ಯಕ್ಕೆ ಬಂದಾಗ ತೊಂದರೆ ಮಾಡು ತ್ತೇವಾ? ಬಾವುಟ ಹಾಕಬಾರದೆಂಬ ನಿಯಮವಿದೆಯೇ? ಪೊಲೀಸರನ್ನೇ ಕರೆಸಿ ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ನಾವು ಹೇಳಿದೆವು ಎಂದು ಅವರು ತಿಳಿಸಿದರು.

ಈ ಸಂದರ್ಭ ವಾಗ್ವಾದ ನಡೆಯಿತು. ಜನರು ಸೇರಿದರಾದರೂ ಅವರು ಈ ವಿಷಯದಲ್ಲಿ ಯುವಕರಿಗೆ ಬೆಂಬಲ ನೀಡಲಿಲ್ಲ. ಕಡೆಗೆ ಬಾವುಟ ಕೀಳಲು ಮುಂದಾದ ಯುವಕರನ್ನು ಸ್ಥಳೀಯರೇ ತಡೆದರು. ಪೊಲೀಸರು ಬರುವ ಮುನ್ನವೇ ನಮ್ಮನ್ನು ಕಳುಹಿಸಿದರು. ನಮ್ಮ ಕಾರಿನಲ್ಲಿ ಬಾವುಟ ತೆಗೆಯಲು ನಾವು ಬಿಡಲಿಲ್ಲ. ನಂತರ ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದೇವೆ ಎಂದು ಮಹದೇವಪ್ರಸಾದ್ ತಮ್ಮನ್ನು ಸಂಪರ್ಕಿಸಿದ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »