ಸಣ್ಣಪುಟ್ಟ ಅವಘಡ ಹೊರತುಪಡಿಸಿದರೆ ಮೈಸೂರಲ್ಲಿ ಹೊಸ ವರ್ಷಾಚರಣೆ ಹರ್ಷದಾಯಕ
ಮೈಸೂರು

ಸಣ್ಣಪುಟ್ಟ ಅವಘಡ ಹೊರತುಪಡಿಸಿದರೆ ಮೈಸೂರಲ್ಲಿ ಹೊಸ ವರ್ಷಾಚರಣೆ ಹರ್ಷದಾಯಕ

January 2, 2020

ಮೈಸೂರು,ಜ.1(ಆರ್‍ಕೆ)-ಕೆಲವೆಡೆ ಸಣ್ಣಪುಟ್ಟ ಅವಘಡಗಳು ಸಂಭವಿಸಿದರೂ ಯಾವುದೇ ಪ್ರಾಣಾಪಾಯವಿಲ್ಲದೆ ಮೈಸೂರಲ್ಲಿ ಹೊಸ ವರ್ಷಾಚರಣೆ ಹರ್ಷದಾಯಕವಾಗಿತ್ತು.

ರಾತ್ರಿ 8.30 ಗಂಟೆ ವೇಳೆಗೆ ಸ್ನೇಹಿತ ನೊಂದಿಗೆ ಬೈಕ್‍ನಲ್ಲಿ ವೈನ್ ಸ್ಟೋರ್‍ನಿಂದ ಮದ್ಯ ಖರೀದಿಸಿ ಬಾಕ್ಸ್‍ನಲ್ಲಿರಿಸಿಕೊಂಡು ಜೆ.ಪಿ.ನಗರ ಕಡೆಗೆ ಹೋಗುತ್ತಿದ್ದಾಗ ಅಶೋಕಪುರಂ ಬಳಿ ಮಾನಂದವಾಡಿ ರಸ್ತೆಯಲ್ಲಿ ಹಿಂಬದಿ ಕುಳಿತಿದ್ದ ಯುವಕ ಕೆಳಬಿದ್ದು, ರಸ್ತೆಯಲ್ಲಿ ಮದ್ಯದ ಬಾಟಲಿ ಗಳು ಒಡೆದು ಚೂರು ಚೂರಾದವು.

ಹಿಂಬದಿ ಸವಾರ ಬೀಳುತ್ತಿದ್ದಂತೆಯೇ ಬೈಕ್ ಚಾಲನೆ ಮಾಡುತ್ತಿದ್ದ ಯುವಕನೂ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡನು. ತಕ್ಷಣ 108 ಆಂಬುಲೆನ್ಸ್ ವಾಹನ ಸ್ಥಳಕ್ಕೆ ಆಗಮಿಸಿ ಯುವಕರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಿತು.

ಅದೇ ರೀತಿ ಗಾಯತ್ರಿ ಭವನ ಬಳಿಯ ಪೆಟ್ರೋಲ್ ಬಂಕ್‍ವೊಂದರಲ್ಲಿ ವಾಹನಕ್ಕೆ ಇಂಧನ ತುಂಬಿಸಿಕೊಳ್ಳಲು ನೂಕು ನುಗ್ಗಲು ಉಂಟಾದ ಪರಿಣಾಮ ಇಬ್ಬರು ಯುವಕರು ವಾಗ್ವಾದ ನಡೆಸಿದ್ದರಿಂದ ಕೆಲ ಹೊತ್ತು ಗಲಾಟೆಯಾಯಿತು.

ಡಿಸೆಂಬರ್ 31ರ ರಾತ್ರಿ ಸುಮಾರು 9.50 ಗಂಟೆಯಲ್ಲಿ ಪೆಟ್ರೋಲ್ ಹಾಕಿಸಿ ಕೊಳ್ಳಲು ಜನರ ನೂಕು-ನುಗ್ಗಲು ಉಂಟಾದ ಕಾರಣ ನಾ ಮುಂದು ತಾ ಮುಂದು ಎಂದು ನುಗ್ಗುತ್ತಿದ್ದರಿಂದ ಬೈಕುಗಳಿಗೆ ಡಿಕ್ಕಿ ಯಾಯಿತು. ಆ ವೇಳೆ ಜಗಳ ಉಂಟಾ ಯಿತು. ವಿಷಯ ತಿಳಿದ ದೇವರಾಜ ಠಾಣೆ ಗರುಡ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕ ರನ್ನು ಸಮಾಧಾನಪಡಿಸಿ ಕಳುಹಿಸಿದರು.

ಮತ್ತೊಂದೆಡೆ ಮೆಟ್ರೋಪೋಲ್ ಸರ್ಕಲ್ ನಿಂದ ಕಲಾಮಂದಿರ ಕಡೆಗೆ ಹೋಗುತ್ತಿದ್ದ ಕಾರೊಂದಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ಹುಣಸೂರು ರಸ್ತೆಯಲ್ಲಿ ಮಧ್ಯರಾತ್ರಿ ಸುಮಾರು 12.35 ಗಂಟೆಯಲ್ಲಿ ಹಿಂದಿನಿಂದ ಬಂದ ಬೈಕೊಂದು ಬಲ ಭಾಗಕ್ಕೆ ಡಿಕ್ಕಿ ಹೊಡೆದು ಯುವಕರಿಬ್ಬರು ಕೆಳಕ್ಕೆ ಬಿದ್ದರು. ಸಾರ್ವ ಜನಿಕರ್ಯಾರೂ ಅವರ ಸಹಾಯಕ್ಕೆ ಬರಲಿಲ್ಲ. ಕಡೆಗೆ ಎದುರಿನಿಂದ ಬರುತ್ತಿದ್ದ ಗಸ್ತಿನಲ್ಲಿದ್ದ ಕೆ.ಆರ್. ಸಂಚಾರ ಠಾಣೆ ಸಿಬ್ಬಂದಿ, ಯುವಕ ರನ್ನು ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಕಳುಹಿಸಿದರು. ಅದೇ ರೀತಿ ರಿಂಗ್ ರಸ್ತೆ, ಕೆ.ಆರ್.ಎಸ್. ರಸ್ತೆ, ವಾಲ್ಮೀಕಿ ರಸ್ತೆ ಜಂಕ್ಷನ್, ನಜರ್ ಬಾದಿನ ಎಸ್ಪಿ ಆಫೀಸ್ ಸರ್ಕಲ್ ಬಳಿಯೂ ಅಲ್ಲಲ್ಲಿ ಸಣ್ಣಪುಟ್ಟ ಅಪಘಾತಗಳಾಗಿ ವಾಹನ ಗಳು ಜಖಂಗೊಂಡು ಕೆಲವರಿಗೆ ಗಾಯ ಗಳಾಯಿತಾದರೂ ಯಾರೂ ಪೊಲೀಸರಿಗೆ ದೂರು ನೀಡಲು ಮುಂದಾಗಿಲ್ಲ.

ಮೈಸೂರು ನಗರದಾದ್ಯಂತ ಎಲ್ಲೆಡೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಅಲ್ಲಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಎಚ್ಚರ ವಹಿಸಿದ್ದರಿಂದ ಅಪಘಾತವಾಗಲೀ, ಅಪ ರಾಧವಾಗಲೀ ಅಥವಾ ಕಾನೂನು-ಸುವ್ಯ ವಸ್ಥೆ ಸಂಬಂಧ ಒಂದೇ ಒಂದು ಪ್ರಕರಣ ಯಾವುದೇ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ `ಮಿತ್ರ’ನಿಗೆ ತಿಳಿಸಿದ್ದಾರೆ.

Translate »