ಹೊಸ ವರ್ಷಾಚರಣೆ ವೇಳೆ ವಿಪರೀತ ಮದ್ಯ ಸೇವಿಸಿ ಯುವಕ ಸಾವು
ಮೈಸೂರು

ಹೊಸ ವರ್ಷಾಚರಣೆ ವೇಳೆ ವಿಪರೀತ ಮದ್ಯ ಸೇವಿಸಿ ಯುವಕ ಸಾವು

January 3, 2020

ಮೈಸೂರು, ಜ.2(ಆರ್‍ಕೆ)-ಹೊಸ ವರ್ಷಾಚರಣೆ ವೇಳೆ ಸ್ನೇಹಿತರೊಂದಿಗೆ ವಿಪರೀತ ಮದ್ಯ ಸೇವಿಸಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ಬುಧವಾರ ಸಂಭವಿಸಿದೆ. ಮೈಸೂರಿನ ಮಂಡಿ ಮೊಹಲ್ಲಾ, 2ನೇ ಈದ್ಗಾ ನಿವಾಸಿ ಅಶ್ವತ್ಥ ಅವರ ಮಗ ಕಾರ್ತಿಕ್(22) ಸಾವನ್ನಪ್ಪಿದ ಯುವಕ. ಹೊಸ ವರ್ಷಾ ಚರಣೆಗೆಂದು ಡಿ.31ರಂದು ಸಂಜೆ ಸಯ್ಯಾಜಿರಾವ್ ರಸ್ತೆಯ ಲಾಡ್ಜ್‍ವೊಂದರಲ್ಲಿ ಕೊಠಡಿ ಪಡೆದಿದ್ದ ಕಾರ್ತಿಕ್, ಪರಮೇಶ ಮತ್ತು ಚಂದನ್ ಸ್ನೇಹಿತರೊಂದಿಗೆ ಅಂದು ರಾತ್ರಿ ಪಾರ್ಟಿ ಮಾಡಿ ಮಲಗಿದ್ದ. ಮರುದಿನ (ಜ.1) ಬೆಳಿಗ್ಗೆ 10.30 ಗಂಟೆಗೆ ಚಂದನ ಮತ್ತು ಪರಮೇಶ ಎದ್ದು ನೋಡಿದಾಗ ಕಾರ್ತಿಕ್ ನಿದ್ರಿಸುತ್ತಿದ್ದರಿಂದ ಹೊರಗೆ ಹೋಗಿ ಮತ್ತೆ ಮಧ್ಯಾಹ್ನ 12.30 ಗಂಟೆಗೆ ಬಂದಾಗ ಆತ ಮಂಚದಿಂದ ಕೆಳಗೆ ಬಿದ್ದಿದ್ದ. ತಕ್ಷಣ ಆತನನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಕಾರ್ತಿಕ್ ಮೃತಪಟ್ಟಿರುವುದನ್ನು ಖಚಿತಪಡಿಸಿದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Translate »