ಹಲ್ಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಚಾಮರಾಜನಗರ

ಹಲ್ಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

July 13, 2018

ಚಾಮರಾಜನಗರ:  ಏಕಾಏಕಿ ಜಗಳ ತೆಗೆದು ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಸಾವಿಗೆ ಕಾರಣರಾಗಿದ್ದ ಉಮ್ಮತ್ತೂರು ಗ್ರಾಮದ ನಟರಾಜು ಎಂಬ ಆರೋಪಿಗೆ ಅಧಿಕ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.

ಸಿದ್ದರಾಜು ಹಲ್ಲೆಗೆ ಒಳಗಾಗಿ ಸಾವಿಗೀಡಾದ ವ್ಯಕ್ತಿ. ಕಳೆದ 2013ರ ಜೂನ್ 20ರಂದು ಉಮ್ಮತ್ತೂರು ಗ್ರಾಮದಲ್ಲಿ ನಟರಾಜು ಸಿದ್ದರಾಜುವಿನೊಂದಿಗೆ ಜಗಳ ತೆಗೆದು ಎದೆಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದ. ತೀವ್ರ ಗಾಯಗೊಂಡಿದ್ದ ಸಿದ್ದರಾಜುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೂ ಸಿದ್ದರಾಜು ಚಿಕಿತ್ಸೆ ಫ¯ಕಾರಿಯಾಗದೆ ಅಸುನೀಗಿದ್ದರು.

ಪ್ರಕರಣ ದಾಖಲಾಗಿ ಆರೋಪ ರುಜುವಾತಾದ ಹಿನ್ನಲೆಯಲ್ಲಿ ಆರೋಪಿ ನಟರಾಜುವಿಗೆ ಅಧಿಕ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಡಿ. ವಿನಯ್ ಅವರು ಇಂದು ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ.ದಂಡವನ್ನು ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಎಸ್. ಉಷಾ ವಾದ ಮಂಡಿಸಿದ್ದರು.

Translate »