ಆರು ತಿಂಗಳೊಳಗೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣ
ಚಾಮರಾಜನಗರ

ಆರು ತಿಂಗಳೊಳಗೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣ

September 28, 2018

ಚಾಮರಾಜನಗರ:  ಕುಡಿಯುವ ನೀರಿನ ಉದ್ದೇಶಕ್ಕಾಗಿ ಚಾಮರಾಜನಗರ, ಯಳಂದೂರು ತಾಲೂಕಿನ 22 ಕೆರೆಗಳು ಮತ್ತು ನಂಜನಗೂಡಿನ 2 ಕೆರೆಗಳು ಸೇರಿದಂತೆ ಒಟ್ಟು 24 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಕಾಮಗಾರಿಯು ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಸುತ್ತೂರು ಏತ ಯೋಜನೆಯಡಿ ಕೈಗೆತ್ತಿ ಕೊಂಡಿರುವ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪರಿಶೀಲನೆಯನ್ನು ಸುತ್ತೂರು ಜಾಕ್‍ವೆಲ್ ಬಳಿಯಿಂದ ಆರಂಭಿಸಿದ ಸಚಿವರು ಹಲವು ಕೆರೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದರು. ಒಟ್ಟು 233 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಕಳೆದ ವರ್ಷ ಚಾಲನೆ ನೀಡಲಾಗಿದೆ. ಒಟ್ಟು 186.24 ಕೋಟಿ ರೂ ಗುತ್ತಿಗೆ ಮೊತ್ತವಾಗಿದ್ದು, ಒಟ್ಟು 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣ ಗೊಳಿಸಬೇಕಿದೆ ಎಂದರು.

ಯೋಜನೆಯಲ್ಲಿ ಒಟ್ಟು ಮೂರು ಹಂತಗಳಿವೆ. ಮೊದಲನೇ ಹಂತದಲ್ಲಿ ಚಾಮ ರಾಜನಗರ ತಾಲ್ಲೂಕಿನ ಎಂಟು, ಯಳಂದೂರು ತಾಲೂಕಿನ ಒಂದು ಹಾಗೂ ನಂಜನಗೂಡು ತಾಲೂಕಿನ ಎರಡು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಎರಡನೇ ಹಂತದಲ್ಲಿ ಚಾಮರಾಜನಗರ ತಾಲೂಕಿನ ಆರು ಕೆರೆಗಳು ಮತ್ತು ಮೂರನೇ ಹಂತದಲ್ಲಿ ಏಳು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಮೊದಲನೇ ಹಾಗೂ ಎರಡನೇ ಹಂತದ ಪಂಪ್ ಹೌಸ್ ಕಾಮಗಾರಿಗಳು ಪ್ರಗತಿ ಯಲ್ಲಿವೆ. ಈ ಯೋಜನೆ ಅಡಿಯಲ್ಲಿಯೆ ಯಳಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಂಪನಪುರ ಕೆರೆಗಳಿಗೂ ನೀರು ತುಂಬಿಸಲಾಗುತ್ತದೆ ಎಂದರು.
ಉಮ್ಮತ್ತೂರು ಕೆರೆಯೊಂದಕ್ಕೆ ನೀರು ಬಂದರೆ ದೊಡ್ಡರಾಯಪೇಟೆ, ಕರಡಿ ಮೊಳೆ, ಕೋಡಿಮೊಳೆ ಕೆರೆ, ದೊಡ್ಡಕೆರೆ, ಸಿಂಡಿಗೆರೆ, ಬಂಡಿಗೆರೆ ಕೆರೆ, ಮಲ್ಲದೇವನ ಹಳ್ಳಿ, ಮರಗದಕೆರೆ, ನಾಗವಳ್ಳಿಕೆರೆ, ಪುಟ್ಟನಪುರಕೆರೆ, ಸರಗೂರುಕೆರೆ, ಅಂಬ ಳೆಕೆರೆ ಸೇರಿದಂತೆ ಈ ವ್ಯಾಪ್ತಿಯ ಇನ್ನೂ ಹೆಚ್ಚಿನ ಕೆರೆಗಳ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಒಟ್ಟು 34.22 ಕಿ.ಮೀ ಪೈಕಿ 15.30 ಕಿ.ಮೀ ಉದ್ದದಷ್ಟು ಎಂ.ಎಸ್ ಪೈಪ್‍ಗಳನ್ನು ಅಳವಡಿಸಲಾಗಿದೆ. ಬಾಕಿ ಉಳಿದ 18.92 ಉದ್ದದ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.

ಇದೇ ವೇಳೆ ಸಚಿವರು ಹನುಮನಪುರ ಬಳಿ ಇರುವ ಕಾಮಗಾರಿ ಸರಕು ದಾಸ್ತಾನು ಯಾರ್ಡ್, ಉಮ್ಮತ್ತೂರು ಕೆರೆ, ಹೊಮ್ಮ ಕೆರೆ, ಕೋಡಿಮೊಳೆಕೆರೆ ಇತರೆ ಭಾಗಗಳಿಗೆ ಸಚಿವರು ಭೇಟಿಕೊಟ್ಟು ಪರಿಶೀಲಿಸಿದರು. ಉಮ್ಮತ್ತೂರು ಕೆರೆ ಅಭಿವೃದ್ಧಿಗೆ ಅಗತ್ಯವಿ ರುವ ಅಂದಾಜು ತಯಾರಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಎಪಿ ಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಕಾವೇರಿ ನೀರಾವರಿ ನಿಗಮದ ಎಂಜಿನಿ ಯರ್‍ಗಳಾದ ಮಂಜುನಾಥ್, ಮಹೇಶ್ ಇತರರು ಹಾಜರಿದ್ದರು.

Translate »