ದಸರಾ ಕ್ರೀಡಾಕೂಟದ ವಿಜೇತರಿಗೆ ಎರಡು ತಿಂಗಳಾದರೂ ಕೈ ಸೇರದ ನಗದು ಬಹುಮಾನ
ಮೈಸೂರು

ದಸರಾ ಕ್ರೀಡಾಕೂಟದ ವಿಜೇತರಿಗೆ ಎರಡು ತಿಂಗಳಾದರೂ ಕೈ ಸೇರದ ನಗದು ಬಹುಮಾನ

December 12, 2019

ಮೈಸೂರು,ಡಿ.11- `ದೇವರು ವರ ಕೊಟ್ರು ಪೂಜಾರಿ ಕೊಡನು’ ಗಾದೆ ಮಾತಿಗೆ ಅನ್ವರ್ಥಕವಾಗಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವರ್ತನೆ. ದಸರಾ ರಾಷ್ಟ್ರ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ಆಯೋಜಿಸಿ ಸೈ ಎನಿಸಿಕೊಂಡಿದ್ದ ಕ್ರೀಡಾ ಇಲಾಖೆ, ಇಲ್ಲಿನ ವಿಜೇತರಿಗೆ ಎರಡು ತಿಂಗಳಾದರೂ ನಗದು ಬಹುಮಾನ ನೀಡದೆ, ದಸರಾ ಉತ್ಸವಕ್ಕೆ ಕೆಟ್ಟ ಭಾವನೆ ಮೂಡುವಂತೆ ಮಾಡಿದೆ.

ಮೈಸೂರು ಮಾತ್ರವಲ್ಲದೆ ರಾಜ್ಯದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ದಸರಾ ಕ್ರೀಡಾಕೂಟ ತನ್ನದೇ ಪ್ರಾಮು ಖ್ಯತೆ ಪಡೆದಿದೆ. ದೇಶದ ವಿವಿಧ ರಾಜ್ಯಗಳಿಂದ ಕ್ರೀಡಾಪಟು ಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಆದರೆ ಕ್ರೀಡಾ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆಯಿಂದಾಗಿ ದಸರಾ ಕ್ರೀಡಾಕೂಟಕ್ಕೇ ಕಳಂಕ ಬರುವಂತಾಗಿದೆ. 2019ರ ಅ. 1ರಂದು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಚಾಲನೆ ನೀಡಿದ ದಸರಾ ಕ್ರೀಡಾಕೂಟ ಅ.6ರವರೆಗೂ ನಡೆದಿತ್ತು. ಜಿಲ್ಲಾಡಳಿತ, ಕ್ರೀಡಾಕೂಟದ ಉಸ್ತುವಾರಿಯನ್ನು ಯುವಜನ ಸಬಲೀ ಕರಣ ಹಾಗೂ ಕ್ರೀಡಾ ಇಲಾಖೆಗೆ ನೀಡಿತ್ತು. ಮ್ಯಾರಥಾನ್, ಸೈಕ್ಲಿಂಗ್, ಗುಂಪುಕ್ರೀಡೆ, ಒಳಾಂಗಣ, ಹೊರಾಂಗಣ ಸೇರಿ ದಂತೆ 28 ಬಗೆಯ ಕ್ರೀಡಾ ಚಟುವಟಿಕೆಯಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಆದರೆ, ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹು ಮಾನ ನೀಡದ ಕ್ರೀಡಾ ಇಲಾಖೆ ಅಧಿಕಾರಿಗಳ ವರ್ತನೆಯಿಂದ ಮೈಸೂರಿನ ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗುವಂತಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಆರಂಭದಲ್ಲೇ ಸಣ್ಣ ಲೋಪವಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿ ದ್ದರು. ಅಲ್ಲದೆ ಕ್ರೀಡಾಪಟು ಸೇರಿದಂತೆ ವಿವಿಧ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೂ ಸ್ಥಳದಲ್ಲೇ  ಅಥವಾ ಸಕಾಲದಲ್ಲಿ ಗೌರವ ಧನ, ಪ್ರಶಸ್ತಿ ಮೊತ್ತ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರಲ್ಲದೆ, ಒಂದು ರೂ. ವೆಚ್ಚ ಮಾಡಿ ದರೂ ಕಟ್ಟುನಿಟ್ಟಾಗಿ ಲೆಕ್ಕ ಇಡಲಾಗುತ್ತದೆ. ಯಾರಿಗಾದರೂ ಹಣ ನೀಡಿದರೂ ಚೆಕ್ ಮೂಲಕವೇ ನೀಡಿ, ಪಾರದರ್ಶ ಕತೆ ಕಾಪಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ದಸರಾ ಕ್ರೀಡಾಕೂಟ ಮುಗಿದು ಎರಡು ತಿಂಗಳಾದರೂ ವಿಜೇತರಿಗೆ ನಗದು ಬಹುಮಾನ ನೀಡದಿರುವುದು ಕ್ರೀಡಾ ಇಲಾಖೆ ಮುಂದಾಗಿ ಜಿಲ್ಲಾಡಳಿತ ಮುಜುಗರಕ್ಕೆ ಒಳಗಾಗಬೇಕಿದೆ.

ಕ್ರೀಡೆಗಳು: ದಸರಾ ಕ್ರೀಡಾಕೂಟದಲ್ಲಿ ಗುಂಪು ಕ್ರೀಡೆಗಳಾದ ಖೋ ಖೋ, ಬಾಲ್ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್‍ನ (ಪುರುಷ ಮತ್ತು ಮಹಿಳಾ) ಪ್ರತಿ ತಂಡದಲ್ಲಿ 12 ಮಂದಿ ಆಟಗಾರರಿರುತ್ತಾರೆ. ಇದರಲ್ಲಿ ಪುರುಷ ಮತ್ತು ಮಹಿಳಾ ತಂಡ ಗಳು ಇರುತ್ತವೆ. ವಾಲಿಬಾಲ್, ಹಾಕಿ, ಫುಟ್‍ಬಾಲ್, ಕಬಡ್ಡಿ,  ಹ್ಯಾಂಡ್‍ಬಾಲ್ ಹಾಗೂ ಇನ್ನಿತರ ಗುಂಪುಕ್ರೀಡೆ ತಂಡದಲ್ಲಿ ತಲಾ 16 ಸದಸ್ಯರಿರುತ್ತಾರೆ. ಈ ಗುಂಪು ಕ್ರೀಡೆಯಲ್ಲಿ ಪ್ರಥಮ ಬಹುಮಾನ ಪಡೆದ ತಂಡದ ಎಲ್ಲಾ ಸದಸ್ಯರಿಗೆ ತಲಾ 3 ಸಾವಿರ, ದ್ವಿತೀಯ ಬಹುಮಾನ ಪಡೆದ ತಂಡದ ಸದಸ್ಯರಿಗೆ ತಲಾ 2 ಸಾವಿರ, 3ನೇ ಬಹುಮಾನ ಪಡೆದ ತಂಡದ ಸದಸ್ಯರಿಗೆ ತಲಾ 1 ಸಾವಿರ ರೂ. ನಗದು ಬಹುಮಾನವಾಗಿ ನೀಡಲಾಗು ತ್ತದೆ. ವೈಯಕ್ತಿಕ ಕ್ರೀಡೆಯಾದ 100 ಮೀ, 200, 400, 800, 1500, 5000, 10000 ಮೀಟರ್ ಓಟ, ಗುಂಡು ಎಸೆತ, ಎತ್ತರ, ಉದ್ದ ಜಿಗಿತ, ಹ್ಯಾಮರ್, ಡಿಸ್ಕಸ್ ಥ್ರೋ, ಮ್ಯಾರಥಾನ್, ಸೈಕ್ಲಿಂಗ್ ಸೇರಿದಂತೆ ಇನ್ನಿತರ ಕ್ರೀಡೆಯಲ್ಲಿ (ಪುರುಷ ಮತ್ತು ಮಹಿಳಾ) ಪ್ರಥಮ ಬಹುಮಾನ ಪಡೆದ ವಿಜೇತರಿಗೆ ತಲಾ 10 ಸಾವಿರ ರೂ., ದ್ವಿತೀಯ ಬಹುಮಾನ ಪಡೆದ ವಿಜೇತರಿಗೆ 8 ಸಾವಿರ ರೂ., 3ನೇ ಬಹುಮಾನ ಪಡೆದ ವಿಜೇತರಿಗೆ 5 ಸಾವಿರ ರೂ. ನಗದು ಬಹುಮಾನ. ಮ್ಯಾರಥಾನ್‍ನಲ್ಲಿ (ಪುರುಷ ಮತ್ತು ಮಹಿಳಾ) ಪ್ರಥಮ ಸ್ಥಾನ ಪಡೆದವರಿಗೆ 30 ಸಾವಿರ ರೂ. ನಗದು, 2ನೇ ಸ್ಥಾನ ಪಡೆದವರಿಗೆ 25 ಸಾವಿರ ರೂ., 3ನೇ ಬಹುಮಾನ ಪಡೆದವರಿಗೆ 20 ಸಾವಿರ ರೂ., 4ನೇ ಬಹಮಾನ 15 ಸಾವಿರ ರೂ., ಐದನೇ ಸ್ಥಾನಪಡೆದವರಿಗೆ 10 ಸಾವಿರ ರೂ ಹಾಗೂ ಆರನೇ ಬಹುಮಾನ ಪಡೆದವರಿಗೆ 5 ಸಾವಿರ ರೂ. ನಗದು ಬಹುಮಾನ ನೀಡಬೇಕಾಗಿದೆ. ದಸರಾ ಕ್ರೀಡಾ ಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2 ತಿಂಗಳ ಬಳಿಕವೂ ವಿಜೇತರಿಗೆ ನಗದು ಬಹುಮಾನ ನೀಡದಿರುವ ಕಳಂಕವನ್ನು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೊತ್ತಿದೆ. ಇದುವರೆಗೆ ದಸರಾ ಕ್ರೀಡಾಕೂಟ ಮುಗಿದ 15 ದಿನದೊಳಗೆ ವಿಜೇತರಿಗೆ ಬಹುಮಾನ ನೀಡಲಾಗಿತ್ತು. ಕೆಲ ವರ್ಷ ಕ್ರೀಡಾಕೂಟ ಮುಗಿದ ಮರುದಿನವೇ ಬಹುಮಾನದ ಮೊತ್ತ ನೀಡಿರುವ ನಿದರ್ಶನವಿದೆ. ಆದರೆ, ಈ ಬಾರಿ ನಗದು ಬಹುಮಾನ ಮೊತ್ತ 25ರಿಂದ 30 ಲಕ್ಷ ರೂ.ಗಳಾಗಿದ್ದು, ಇದನ್ನು ಸರ್ಕಾರವೇ ನೀಡಿಲ್ಲವೆ ಇಲ್ಲ ದುರುಪಯೋಗವಾಗಿದೆಯೇ ಎಂಬ ಶಂಕೆಯನ್ನು ಕ್ರೀಡಾಪಟುಗಳು ವ್ಯಕ್ತಪಡಿಸಿದ್ದಾರೆ.

ಇಲಾಖೆಯನ್ನು ಸ್ವಚ್ಛಗೊಳಿಸಬೇಕು: ಮೈಸೂರಿನಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಗ್ರಹಣ ಬಡಿದಂತಿದೆ. ಕ್ರೀಡಾ ಚಟುವಟಿಕೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಏಕಚಕ್ರಾಧಿಪತಿಯಂತೆ ಕೆಲವು ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಇದರಿಂದ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ಸಿಗದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕಾಯಕಲ್ಪ ನೀಡಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಹಿರಿಯ ಕ್ರೀಡಾಪಟುಗಳು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಹಲವು ಹಿರಿಯ ಕ್ರೀಡಾಪಟುಗಳು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಎಂ.ಟಿ.ಯೋಗೇಶ್ ಕುಮಾರ್

 

Translate »