ಯುವಕ ನೀರು ಪಾಲು
ಮೈಸೂರು

ಯುವಕ ನೀರು ಪಾಲು

February 4, 2019

ಮಡಿಕೇರಿ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವಕ ನೋರ್ವ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲ ಪಾತದ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಪ್ರಸಾದ್ ಎಂಬುವರ ಪುತ್ರ, ಹಾಲಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಸ್ಕಂದ (24) ಮೃತ ಯುವಕನಾಗಿದ್ದು, ಸ್ಥಳೀಯ ಗ್ರಾಮಸ್ಥರು ನೀರಿನಲ್ಲಿ ಶೋಧ ನಡೆಸಿ ಮೃತದೇಹ ವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ವಿವರ: ಮೈಸೂರಿನ ನಿವಾಸಿಯಾದ ಸ್ಕಂದ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ವೀಕೆಂಡ್ ರಜೆಯ ಹಿನ್ನೆಲೆಯಲ್ಲಿ ಇಂದು (ಫೆ.3) ಬೆಳಿಗ್ಗೆ 11 ಗಂಟೆಯ ಸಮಯದಲ್ಲಿ ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತಕ್ಕೆ ತನ್ನ 11 ಮಂದಿ ಸಹೋದ್ಯೋಗಿಗಳೊಂದಿಗೆ ಪ್ರವಾಸಕ್ಕೆ ಬಂದಿದ್ದ ಎನ್ನಲಾಗಿದೆ. ಜಲಪಾತಕ್ಕೆ ಇಳಿಯುವುದನ್ನು ನಿಷೇಧಿಸಲಾಗಿದ್ದರೂ ಕೂಡ ಸ್ಥಳದಲ್ಲಿದ್ದ ಅಪಾಯದ ಎಚ್ಚರಿಕೆ ಫಲಕವನ್ನು ಗಮನಿಸಿಯೂ ಜಲಪಾತದ ಕೆಳಭಾಗದ ಆಳದ ನೀರಿನಲ್ಲಿ ಸ್ಕಂದ ಈಜಲು ಇಳಿದಿದ್ದಾನೆ. ಈ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಸ್ನೇಹಿತರ ಕಣ್ಣೆದುರಲ್ಲೇ ನೀರು ಪಾಲಾಗಿದ್ದಾನೆ. ಇದರಿಂದ ದಿಗ್ಭ್ರಾಂತರಾದ ಜೊತೆಯಲ್ಲಿದ್ದ ಇತರ ಸ್ನೇಹಿತರು ಜಲಪಾತದ ಮೇಲ್ಭಾಗದಲ್ಲಿದ್ದ ‘ಪ್ರವಾಸಿ ಮಿತ್ರ’ ಸಿಬ್ಬಂದಿಗಳಿಗೆ ವಿಷಯ ತಿಳಿಸಿದರು. ತಕ್ಷಣವೇ ಪ್ರವಾಸಿ ಮಿತ್ರ ಸಿಬ್ಬಂದಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ನುರಿತ ಈಜುಗಾರರ ಮೂಲಕ ಮೃತದೇಹಕ್ಕಾಗಿ ನಿರಂತರ ಶೋಧ ನಡೆಸಿದರು. ಯುವಕ ಮುಳುಗಿದ ಸ್ಥಳದಲ್ಲಿ ಶೋಧ ನಡೆಸಿದ ಮುಳುಗು ತಜ್ಞರು ಹಲವು ಗಂಟೆಗಳ ಕಾಲ ನೀರಿನಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆಯುವಲ್ಲಿ ಸಫಲರಾದರು. ವಿಷಯ ಅರಿತ ಸೋಮ ವಾರಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಬಳಿಕ ಸೋಮವಾರ ಪೇಟೆ ಸರಕಾರಿ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ದು, ಶವ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.

Translate »