ಸೋಮವಾರಪೇಟೆ: ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕೊಂದ ಯುವಕನೋರ್ವ ನೇಣಿಗೆ ಶರಣಾಗಿರುವ ದಾರುಣ ಘಟನೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದಲ್ಲಿ ಸಂಜೆ ನಡೆದಿದೆ. ಗ್ರಾಮದ ನಿವೃತ್ತ ಪೊಲೀಸ್ ಸೂದನ ಗಣೇಶ್(63), ಅವರ ಪತ್ನಿ ಮೋಹಿನಿ(48) ಕೊಲೆಯಾದವರು. ಆರೋಪಿ ಸೂದನ ದಿಲೀಪ್(30) ಅದೇ ಮನೆಯಲ್ಲಿ ನೇಣಿಗೆ ಶರ ಣಾಗಿದ್ದಾನೆ. ಇಂದು ಸಂಜೆ 6.30ರ ಸಮಯಕ್ಕೆ ಆರೋಪಿ ದಿಲೀಪ್, ತನ್ನ ಚಿಕ್ಕಪ್ಪನ ಮನೆಗೆ ತೆರಳಿ ಆಸ್ತಿ ವಿಷಯಕ್ಕೆ ಜಗಳ ಮಾಡಿದನೆನ್ನಲಾಗಿದೆ. ಈ ವೇಳೆ ಮಾತು ವಿಕೋಪಕ್ಕೆ ತಿರುಗಿ ಕತ್ತಿಯಿಂದ ಗಣೇಶ್ ಅವರ ತಲೆಯ ಭಾಗಕ್ಕೆ ಹೊಡೆದಿದ್ದಾನೆ. ಈ ವೇಳೆ ತಡೆಯಲು ಬಂದ ಅವರ ಪತ್ನಿಯ ಕುತ್ತಿಗೆ ಭಾಗಕ್ಕೆ ಕಡಿದ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವ ನ್ನಪ್ಪಿದ್ದಾರೆ. ಮನೆಯಲ್ಲಿದ್ದ ಮಗ ಹರ್ಷಿತ್(23) ಮೇಲೂ ಹಲ್ಲೆ ಮಾಡಿ, ನಂತರ ತಾನೂ ಸಹ ಅದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಘಟನೆ ವೇಳೆ ಬೊಬ್ಬೆ ಕೇಳಿದ ಸ್ಥಳೀಯರು ಸ್ಥಳಕ್ಕೆ ಹೋದ ಸಂದರ್ಭ, ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಗಮನಿಸಿ, ತೀವ್ರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ಹರ್ಷಿತ್‍ನನ್ನು ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಶನಿವಾರಸಂತೆ ಠಾಣಾಧಿಕಾರಿ ತಿಮ್ಮಶೆಟ್ಟಿ ಹಾಗೂ ಸಿಬ್ಬಂದಿಗಳು ತೆರಳಿ ಮಹಜರು ನಡೆಸಿದ್ದಾರೆ.