ವೈದ್ಯನ ಮನೆಯಲ್ಲಿ ಭಾರೀ ಕಳವು ಪ್ರಕರಣ: ತನಿಖೆ ಸಿಸಿಬಿಗೆ ಹಸ್ತಾಂತರಆರೋಪಿಗಳ ಪತ್ತೆಗೆ ತೀವ್ರ ಶೋಧ
ಮೈಸೂರು

ವೈದ್ಯನ ಮನೆಯಲ್ಲಿ ಭಾರೀ ಕಳವು ಪ್ರಕರಣ: ತನಿಖೆ ಸಿಸಿಬಿಗೆ ಹಸ್ತಾಂತರಆರೋಪಿಗಳ ಪತ್ತೆಗೆ ತೀವ್ರ ಶೋಧ

May 8, 2019

ಮೈಸೂರು: ಮೈಸೂರಿನ ವಿಜಯನಗರ 4ನೇ ಹಂತದ ಡಾ. ರಾಜೀವ್ ಅವರ ಮನೆಯಲ್ಲಿ ನಡೆದಿದ್ದ ಭಾರೀ ಕಳವು ಪ್ರಕರಣದ ತನಿಖೆ ಯನ್ನು ಸಿಸಿಬಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಏಪ್ರಿಲ್ 11 ರಂದು ಬೆಳಿಗ್ಗೆ ಕಳ್ಳತನ ನಡೆದಿತ್ತು. ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ. ಕುಮಾರ್ ಸ್ಥಳಕ್ಕೆ ಧಾವಿಸಿ, ಮಹಜರು ನಡೆಸಿದಾಗ ಡಾ. ರಾಜೀವ್ ಅವರ ಮನೆಯ ಮೊದಲ ಮಹಡಿಯ ಮಾಸ್ಟರ್ ಬೆಡ್‍ರೂಮಿನ ಮಂಚದಡಿ ನೆಲದಲ್ಲಿ ಅಳವಡಿಸಿದ್ದ ಮರದ ಬಾಕ್ಸ್ ಒಳಗಿನ ಗಾದ್ರೆಜ್ ಲಾಕರ್ ಒಡೆದು 1.5 ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನಾಭರಣ, ಬೆಲೆ ಬಾಳುವ 30 ವಿದೇಶಿ ವಾಚುಗಳು, ಮತ್ತೊಂದು ಕೊಠಡಿಯ ಕಬೋರ್ಡ್‍ನ ಬೀಗ ಮುರಿದು 11 ಲಕ್ಷ ರೂ. ನಗದು ಕಳವಾಗಿದ್ದು, ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ವಿಜಯನಗರ ಠಾಣೆ ಪೊಲೀಸರು ಖದೀಮರ ಪತ್ತೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಸುಳಿವಿನ ಜಾಡು ಹಿಡಿದು ತನಿಖಾ ತಂಡವೊಂದು ಬೆಂಗಳೂರಿಗೂ ತೆರಳಿ ಜಾಲಾಡಿತ್ತಾದರೂ ಖದೀಮರು ಮಾತ್ರ ಸಿಕ್ಕಲಿಲ್ಲ. ವೈದ್ಯರ ಮನೆಯಲ್ಲಿ ಸಿಸಿ ಕ್ಯಾಮರಾಗಳಿವೆಯಾದರೂ, ಬೆಂಗಳೂರಿಗೆ ಹೊರಡುವಾಗ ಅವುಗಳನ್ನು ಆಫ್ ಮಾಡಿದ್ದರಿಂದ ಹಾಗೂ ಮನೆ ಸುತ್ತಮುತ್ತ ಎಲ್ಲಿಯೂ ಕ್ಯಾಮರಾಗಳನ್ನು ಅಳವಡಿಸಿಲ್ಲವಾದ ಕಾರಣ ಖದೀಮರ ಕೈಚಳಕದ ಯಾವುದೇ ಒಂದು ಸಣ್ಣ ಸುಳಿವೂ ಪೊಲೀಸರಿಗೆ ಲಭ್ಯವಾಗದಿರುವುದು ಪ್ರಕರಣ ಭೇದಿಸಲು ಕಷ್ಟಸಾಧ್ಯವಾಗಿತ್ತು.

ಜೊತೆಗೆ ಲೋಕಸಭಾ ಚುನಾವಣಾ ಬಂದೋಬಸ್ತ್‍ನಲ್ಲಿ ವಿಜಯನಗರ ಠಾಣೆ ಪೊಲೀಸರು ತೊಡಗಿಸಿಕೊಳ್ಳಬೇಕಾಯಿತ್ತಲ್ಲದೇ, ಇನ್ನಿತರ ಅಪರಾಧ ಪ್ರಕರಣಗಳ ತನಿಖೆ ಬಾಕಿ ಇರುವುದರಿಂದ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ವೈದ್ಯನ ಮನೆ ಕಳವು ಪ್ರಕರಣದ ತನಿಖೆಯನ್ನು ಅಪರಾಧ ಪತ್ತೆಗಾಗಿಯೇ ಇರುವ ಸಿಸಿಬಿ ಘಟಕಕ್ಕೆ ಒಪ್ಪಿಸಿದ್ದಾರೆ. ಮನೆ ಬೀಗ ಮುರಿದು, ಗ್ಯಾಸ್ಕೆಟ್‍ನಿಂದ ಸರಳು ಕತ್ತರಿಸಿ ಮನೆಗಳವು ಮಾಡಿರುವ ಹಳೇ ಎಂಓಗಳನ್ನು ಕರೆಸಿ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಡಾ. ರಾಜೀವ್ ಅವರ ಮನೆ ಪರಿಚಯವಿರು ವವರನ್ನೂ ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.

Translate »