ಮತದಾನ ಜಾಗೃತಿಗೆ ಹತ್ತು ಹಲವು ವಿಧಾನ
ಮೈಸೂರು

ಮತದಾನ ಜಾಗೃತಿಗೆ ಹತ್ತು ಹಲವು ವಿಧಾನ

April 4, 2019

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿ ಸಲು ಮೈಸೂರು ಮೃಗಾಲಯದಲ್ಲಿ ವಿವಿಧ ಪ್ರಾಣಿಗಳ ಮಾಡೆಲ್‍ಗಳನ್ನು ರಚಿಸಿ `ಸೆಲ್ಫಿ ಜೋನ್’ ನಿರ್ಮಿಸಿ, ಕಡ್ಡಾಯ ಮತದಾನದ ಬಗ್ಗೆ ಪೋಸ್ಟರ್‍ಗಳನ್ನು ಹಾಕಲಾಗುವುದು. ಜತೆಗೆ ದೀಪಾಲಂಕಾರ, ಬೃಹತ್ ಜಾಥಾ, ಟಾಂ.. ಟಾಂ.. ಮೂಲಕವೂ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ತಿಳಿಸಿದರು.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಸೂಚನೆಯಂತೆ ಶಾಲಾ ಕಾಲೇಜುಗಳಲ್ಲಿ 1145 `ಮತದಾರರ ಸಾಕ್ಷರತಾ ಕ್ಲಬ್’ ಗಳನ್ನು ರಚಿಸಲಾಗಿದೆ. ಪ್ರತಿ ಶನಿವಾರ ಶಾಲಾ ವಿದ್ಯಾರ್ಥಿ ಗಳಿಂದ ಮತದಾನದ ಜಾಗೃತಿ ಮೂಡಿಸುವ ಜಾಥಾ ನಡೆಸ ಲಾಗುತ್ತಿದೆ ಹಾಗೂ ಅವುಗಳ ಮೂಲಕ ಯುವ ಮತದಾರ ರಲ್ಲಿ ಹಾಗೂ ಅವರ ಪೋಷಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕ್ರಮವಹಿಸಲಾಗಿದೆ ಎಂದರು.

ಸಖಿ ಮತಗಟ್ಟೆ: ಪ್ರಸ್ತುತ ಚುನಾವಣೆಯಲ್ಲಿ ವಿಶೇಷವಾಗಿ ಮಹಿಳಾ ಮತದಾರರು ಅಧಿಕವಾಗಿರುವ ಮತಗಟ್ಟೆಗಳಲ್ಲಿ ಕೆಲವನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಪೊಲೀಸ್ ಸೇರಿದಂತೆ ಸಂಪೂರ್ಣ ಮಹಿಳಾ ಸಿಬ್ಬಂದಿಗಳನ್ನೇ ಮಹಿಳಾ ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಹೆಚ್ಚು ಮತದಾನ ಮಾಡಲು ಪ್ರೇರೇಪಿಸಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 2ರಂತೆ ಒಟ್ಟು 24 ಮತಗಟ್ಟೆಗಳಿದ್ದು, ಅವುಗಳಿಗೆ ‘ಸಖಿ’ ಮತಗಟ್ಟೆಗಳೆಂದು ಹೆಸರಿಸಲಾಗಿದೆ ಎಂದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳನ್ನು ಮತದಾರ ಸ್ನೇಹಿಯಾಗಿ ಸಲು ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಅಂಗವಿಕಲರಿಗೆ ಮತ್ತು ವಯೋ ವೃದ್ಧರಿಗೆ ಅನುಕೂಲವಾಗುವಂತೆ ರ್ಯಾಂಪ್, ಶೌಚಾಲಯ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಏಪ್ರಿಲ್ 3ರಿಂದ ಚಾಮುಂಡಿಬೆಟ್ಟದ ಮೇಲೆ ‘ನಿಮ್ಮ ಮತ ನಿಮ್ಮ ಹಕ್ಕು’ ಎಂದು ವಿದ್ಯುತ್ ದೀಪಾಲಂಕಾರದಲ್ಲಿ ಮತದಾನದ ಜಾಗೃತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಬಸ್ ಟಿಕೆಟ್, ಹಾಲಿನ ಪ್ಯಾಕೆಟ್ ಮತ್ತು ವೈದ್ಯರು ನೀಡುವ ಔಷಧಿ ಚೀಟಿಯ ಮೇಲೆ “ನಿಮ್ಮ ಮತ ನಿಮ್ಮ ಹಕ್ಕು”ಎಂದು ಮತದಾನದ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ ಎಂದು ಹೇಳಿದರು.

ಬೀದಿ ನಾಟಕ: ವಾರ್ತಾ ಇಲಾಖೆಯ ಒಂದು ವಿಶೇಷ ವಾಹನದಲ್ಲಿ ನೈತಿಕ ಮತ್ತು ಕಡ್ಡಾಯ ಮತದಾನದ ಬಗ್ಗೆ ಟ್ಯಾಬ್ಲೋ ಸಿದ್ಧಪಡಿಸಿ ಜಿಲ್ಲೆಯ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಂಚರಿಸಿ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ನೈತಿಕತೆಯಿಂದ ಮತದಾನ ಮಾಡುವ ಸಲು ವಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಶಾಲಾ ಶಿಕ್ಷಕರು ಹಾಗೂ ಮಕ್ಕಳು, ಅಂಗನವಾಡಿ, ಆಶಾ ಕಾರ್ಯಕರ್ತೆ ಯರು ಮತ್ತಿತರರಿಂದ ಸೈಕಲ್, ಬೈಕ್, ಮ್ಯಾರಥಾನ್ ಮೂಲಕ 600 ಕ್ಕೂ ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಲಾಗಿದೆ. ಏ.5ರ ನಂತರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತದಾರರ ಬೃಹತ್ ಜಾಗೃತಿ ಜಾಥಾ ನಡೆಸಲಾಗುವುದು. ಜತೆಗೆ ಕಲಾವಿದರಿಂದ ಬೀದಿ ನಾಟಕಗಳನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಮತದಾನದ ದಿನ (ಏ.18) ಹಾಗೂ ವೇಳೆ (ಬೆಳಿಗ್ಗೆ 7ರಿಂದ ಸಂಜೆ 6) ಬಗ್ಗೆ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲೂ ವಿಶೇಷವಾಗಿ ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ ತಾಲೂಕಿನ ಹಾಡಿಗಳಲ್ಲಿ ಟಾಂ.. ಟಾಂ.. ಮೂಲಕ ಪ್ರಚಾರ ಮಾಡಲು ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿನ 2921 ಮತಗಟ್ಟೆ ಹಂತದ ಸಮಿತಿಗಳನ್ನು ರಚಿಸಿದ್ದು(ಚುನಾವಣಾ ಪಾಠಶಾಲಾ) ಸಂಬಂಧಿಸಿದವರಿಗೆ ತರಬೇತಿ ನೀಡಲಾಗಿದೆ. ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಡಿಮೆ ಮತದಾನವಾ ಗಿರುವ ಶೇ.10ರಷ್ಟು ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಸ್ವೀಪ್ ವತಿಯಿಂದ ಅಂತಹ ಮತಗಟ್ಟೆಗಳಿಗೆ ವಿಶೇಷ ಗಮನಹರಿಸಿ ಪ್ರತಿ ಮನೆಗೂ ಭೇಟಿ ನೀಡಿ ಮತದಾನ ಮಾಡಲು ಪ್ರೇರೇಪಿಸಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಆಯೋಗ ದಿಂದ ಸರಬರಾಜಾದ 5 ಲಕ್ಷಕ್ಕೂ ಹೆಚ್ಚು ವೋಟರ್ ಸ್ಲಿಪ್ ಮತ್ತು ವೋಟರ್ ಗೈಡ್‍ಗಳನ್ನು ಮನೆಮನೆಗೆ ವಿತರಿ ಸಲು ಕ್ರಮಕೈಗೊಳ್ಳಲಾಗಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 212 ಗಿರಿಜನ ಹಾಡಿಗಳಿದ್ದು, ಹಿಂದಿನ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಿರು ವುದರಿಂದ ಈ ಬಾರಿ ಆರು ಕಡೆ ‘ಗಿರಿಜನ ಸಂಸ್ಕøತಿ’ ಮಾದರಿಯಲ್ಲಿ ಮತಗಟ್ಟೆಗಳನ್ನು ವಿಶೇಷವಾಗಿ ಸಿಂಗರಿಸಿ ಹೆಚ್ಚಿನ ಮತದಾನವಾಗುವಂತೆ ಪ್ರೇರೇಪಿಸಲಾಗುತ್ತಿದೆ. ಹಾಗೆಯೇ ತೃತೀಯ ಲಿಂಗಿ ಮತ್ತು ಲೈಂಗಿಕ ಕಾರ್ಯಕರ್ತೆ ಯರ ಸಭೆ ನಡೆಸಿ, ಮತದಾರರ ಪಟ್ಟಿಗೆ ನೋಂದಣಿ ಮಾಡಲು ಹಾಗೂ ಕಡ್ಡಾಯವಾಗಿ ಮತದಾನಕ್ಕೆ ಪ್ರೇರೇಪಿಸ ಲಾಗುವುದು. ಜತೆಗೆ ನಗರಪಾಲಿಕೆಯು ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಡಿಜಿಟಲ್ ಬೋರ್ಡ್‍ಗಳ ಮೇಲೆ ಮತದಾನ ಜಾಗೃತಿ ಬಗ್ಗೆ ವೀಡಿಯೋ ಚಿತ್ರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.

ಮೈಸೂರು ಆಕಾಶವಾಣಿ ಮತ್ತು ವಿವಿಧ ಎಫ್‍ಎಂ ರೇಡಿಯೋಗಳ ಮೂಲಕ ಚುನಾವಣಾ ಮಾಹಿತಿಯ ಜಿಂಗಲ್‍ಗಳ ಪ್ರಸಾರ ಹಾಗೂ ಜಿಲ್ಲೆಯಲ್ಲಿ ಕೇಬಲ್ ಟಿವಿ ಮೂಲಕ ಚುನಾವಣಾ ಮಾಹಿತಿಯನ್ನು `ಸ್ಕ್ರೋಲಿಂಗ್ ಮೂಲಕ ಪ್ರಸಾರ ಮಾಡಲಾಗುವುದು. ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಉಪಯೋಗಿಸಿ ಮತದಾನದ ಬಗ್ಗೆ ಪ್ರಾತ್ಯಕ್ಷಿಕೆಗಾಗಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ತಾಲೂಕು ಕಚೇರಿ ಮತ್ತು ನಗರಪಾಲಿಕೆ ಕಚೇರಿಗಳಲ್ಲಿ ಮತಯಂತ್ರಗಳನ್ನು ಇಡಲಾಗಿದ್ದು, ಸಾರ್ವಜನಿಕರು ಉಪಯೋಗಿಸಿಕೊಳ್ಳಬಹುದಾಗಿದೆ.

ಎಲ್ಲಾ ಮತಗಟ್ಟೆಗಳಲ್ಲೂ ಪ್ರಥಮ ಚಿಕಿತ್ಸಾ ಸೌಲಭ್ಯ ಹಾಗೂ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು/ಸಿಬ್ಬಂದಿಗಳು ಮತದಾನದ ದಿನಾಂಕ ಕಾರ್ಯ ನಿರ್ವ ಹಿಸಲಿದ್ದು, ಚುನಾವಣಾ ದಿನವನ್ನು `ಪ್ರಜಾಪ್ರಭುತ್ವದ ಹಬ್ಬ’ದ ದಿನವನ್ನಾಗಿ ಕಡ್ಡಾಯ ಮತದಾನ ಮಾಡುವ ಮೂಲಕ ಆಚರಿಸುವಂತೆ ಸಾರ್ವಜನಿಕರನ್ನು ಕೋರಲಾಗಿದೆ. ಏನಾ ದರೂ ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ಸಾರ್ವ ಜನಿಕರು ವೀಡಿಯೋ/ಫೋಟೋ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಲು ಅನುಕೂಲವಾಗುವಂತೆ ಸಿ-ವಿಜಿಲ್ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು, ಅದನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ ಕೊಂಡು ದೂರು ಸಲ್ಲಿಸಬಹುದಾಗಿದೆ. ಈ ಎಲ್ಲಾ ಕಾರ್ಯ ಕ್ರಮಗಳು ಏ.16ರವರೆಗೆ ಮುಂದುವರೆಯಲಿವೆ ಎಂದರು.

ಚುನಾವಣೆಯಲ್ಲಿ ವಿಶೇಷ ಚೇತನ ಮತದಾರರು ಮತ್ತು ಅಶಕ್ತ ವೃದ್ಧರಿಗೆ ಅನುಕೂಲವಾಗುವಂತೆ ಎಲ್ಲಾ 2921 ಮತಕೇಂದ್ರಗಳಲ್ಲೂ ಗಾಲಿ ಕುರ್ಚಿಗಳನ್ನು ಮತ್ತು ಸಹಾಯಕರ ವ್ಯವಸ್ಥೆ ಮಾಡಲಾಗುವುದು. ಕಡಿಮೆ ದೃಷ್ಟಿ ಇರುವ ಮತದಾರರಿಗೆ ಅನುಕೂಲವಾಗುವಂತೆ ಎಲ್ಲಾ ಮತಗಟ್ಟೆಗಳಲ್ಲಿಯೂ ಭೂತಗನ್ನಡಿಯನ್ನು ಒದಗಿಸಲಾಗಿದೆ. ಹಾಗೆಯೇ ವಿಶೇಷ ಚೇತನರಿಂದಲೇ(ಪಿಡಬ್ಲ್ಯೂ) ನಿರ್ವಹಿಸಲ್ಪಡುವ 10 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಎಂದು ಹೇಳಿದರು.

ಜಿಲ್ಲಾ ಚುನಾವಣಾ ಸ್ವೀಪ್ ರಾಯಭಾರಿಯೂ ಆದ ಗಾಯಕ ಶ್ರೀಹರ್ಷ ಮಾತನಾಡಿ, ಮತದಾನ ಜಾಗೃತಿ ಮೂಡಿಸಲು ನನ್ನನ್ನು ರಾಯಭಾರಿ ಮಾಡಿ ಜವಾಬ್ದಾರಿಯುತ ಕೆಲಸ ವಹಿಸಿದ್ದಾರೆ. ಅದಕ್ಕೆ ನಾನು ಕೃತಜ್ಞನಾಗಿದ್ದೇನೆ. ಯುವಜನತೆ ಸೆಳೆಯಲು ಈಗಾಗಲೇ ‘ಓಟ್ ಇಂಡಿಯಾ’ ಎಂದು 2.40 ನಿಮಿಷದ ವೀಡಿಯೋ ಹಾಡನ್ನು ರೂಪಿಸಿದ್ದೇನೆ. ಇನ್ನೆರಡು ದಿನದಲ್ಲಿ ವಿಡಿಯೋವನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುವುದು. ಆ ಮೂಲಕ ಮತದಾನ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಮತದಾನ ಜಾಗೃತಿ ಮೂಡಿಸುವ ವಾರ್ತಾ ಇಲಾಖೆ ವಾಹನಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ಚಾಲನೆ ನೀಡಿದರು. ಜಿಲ್ಲಾ ಸ್ವೀಪ್ ಕಾರ್ಯದರ್ಶಿ ಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾ ಯಕ ನಿರ್ದೇಶಕ ಆರ್.ರಾಜು ಗೋಷ್ಠಿಯಲ್ಲಿದ್ದರು.

Translate »