ಯುವಕರಿಗೆ ಮುಂದಿನ ಜೀವನ ರೂಪಿಸಿಕೊಳ್ಳಲು ಅಧ್ಯಯನ ಕೊರತೆಯಿದೆ
ಮೈಸೂರು

ಯುವಕರಿಗೆ ಮುಂದಿನ ಜೀವನ ರೂಪಿಸಿಕೊಳ್ಳಲು ಅಧ್ಯಯನ ಕೊರತೆಯಿದೆ

October 12, 2019

ಮೈಸೂರು,ಅ.11(ಎಸ್‍ಪಿಎನ್)-ಇಂದಿನ ಯುವಕ ರಲ್ಲಿ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಅಧ್ಯಯನ ಕೊರತೆಯಿದೆ. ಆದ್ದರಿಂದಲ್ಲೇ ಅವರಿಗೆ ಭವಿಷ್ಯದ ಸಾಧನೆ ಬೆಳಕು ಕಾಣುತ್ತಿಲ್ಲ ಎಂದು ಮೈಸೂರು ವಿವಿ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವಿ.ಎನ್.ಶೇಷಗಿರಿರಾವ್ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಸಂಜೆ ಕಾಲೇಜು ಆವರಣದಲ್ಲಿ ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರ, ವಿವಿ ಸಂಜೆ ಕಾಲೇಜು ಸಹಯೋಗದೊಂದಿಗೆ ಆಯೋಜಿಸಿದ್ದ ಗಾಂಧಿ 150ರ ವರ್ಷಾಚರಣೆಯ ವಿಶೇಷ ಉಪ ನ್ಯಾಸ ಕಾರ್ಯಕ್ರಮದಲ್ಲಿ `ಯುವ ಜನತೆಯೆಡೆಗೆ ಗಾಂಧಿ’ ಕುರಿತು ಮಾತನಾಡಿದರು.

ವಿದ್ಯಾರ್ಥಿ ದಿಸೆಯಲ್ಲಿ ಗಾಂಧೀಜಿ ಎಲ್ಲರಂತೆ ಅವರೂ ಬದುಕು ಕಟ್ಟಿಕೊಂಡಿದ್ದರು. ಆದರೆ, ವಿದ್ಯಾಭ್ಯಾಸ ಮುಗಿಸಿ, ದಕ್ಷಿಣ ಆಫ್ರಿಕಾದಲ್ಲಿ ವೃತ್ತಿ ಜೀವನ ಆರಂಭಿಸಿದ ನಂತರ ಅವರಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವಿಗೆ ಬಂತು. ಅಂದಿನಿಂದಲೇ ಅವರು, ಜನಸಾಮಾನ್ಯರ ಒಳಿತಿ ಗಾಗಿ ದಕ್ಷಿಣ ಆಫ್ರಿಕಾದಲ್ಲಿ ಹೋರಾಟ ಆರಂಭಿಸಿದ ಪ್ರಸಂಗಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮಹಾತ್ಮ ಗಾಂಧಿಯವರು ಮೊದಲ ಬಾರಿಗೆ ಹೋರಾಟ ಕಟ್ಟಿದ್ದು ಬಿಹಾರದಲ್ಲಿ. ಈ ಸಂದರ್ಭದಲ್ಲಿ ಬ್ರಿಟಿಷರು ರೈತರ ಮೇಲೆ ದುಬಾರಿ ತೆರಿಗೆ ವಿಧಿಸಿ ದಬ್ಬಾಳಿಕೆ ನಡೆಸು ತ್ತಿದ್ದರು. ತೆರಿಗೆ ಕಟ್ಟದ ರೈತರ ಭೂಮಿಯ ಮೇಲೆ ಹಕ್ಕು ಸಾಧಿಸಿದ ಆಂಗ್ಲರು, ಬಿಹಾರ ರೈತರಿಗೆ ಬೆದರಿಕೆ ಹಾಕುತ್ತಿದ್ದರು. ಇದನ್ನು ವಿರೋಧಿಸಿದ ರೈತರು ಹೋರಾಟ ಆರಂಭಿಸಿದರು. ಇದಕ್ಕೆ ಬೆಂಬಲವಾಗಿ ನಿಂತಿದ್ದು ಮಹಾತ್ಮ ಗಾಂಧಿ ಎಂದು ವಿವರಿಸಿದರು.

ಪ್ರವಾಹದಿಂದ ತತ್ತರಿಸಿದ್ದ ಗುಜರಾತಿನ ರೈತರ ಮೇಲೆ ಬ್ರಿಟಿಷರು ದುಬಾರಿ ತೆರಿಗೆ ವಿಧಿಸಿ, ರೈತರ ಭೂಮಿ ಮಾಲೀಕತ್ವವನ್ನು ಕಸಿದುಕೊಂಡಿದ್ದರು. ಇದರನ್ನು ಅರಿತ ಮಹಾತ್ಮ ಗಾಂಧಿ 1918ರಲ್ಲಿ ಗುಜರಾತಿಗೆ ಆಗಮಿಸಿ, ಸರ್ದಾರ್ ವಲ್ಲಭಭಾಯಿ ಪಟೇಲರ ಬೆಂಬಲದೊಂದಿಗೆ ರೈತರ ಪರವಾಗಿ ಸತ್ಯಾಗ್ರಹ ಆರಂಭಿಸಿ, ಬ್ರಿಟಷರ ಕುತಂತ್ರಗಳಿಗೆ ಜಗ್ಗದೇ ರೈತರಿಗೆ ನ್ಯಾಯ ಒದಗಿಸಿಕೊಟ್ಟ ಪ್ರಸಂಗವನ್ನು ವಿವರಿಸಿದರು.

ಗಾಂಧೀಜಿ ಅವರ ಹೋರಾಟದ ಬದುಕು ಹಲವು ಆಯಾಮಗಳಿಂದ ಕೂಡಿದೆ. ಇದರ ಬಗ್ಗೆ ಇಂದಿನ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಗಾಂಧೀಜಿ ಯವರ ಹೋರಾಟದ ಬದುಕನ್ನು ಅಧ್ಯಯನ ನಡೆಸಿ ತಮ್ಮ ಜೀವನದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು.

ಗಾಂಧೀಜಿಯವರ ಹೋರಾಟದ ಬದುಕು ಹಲವು ಹೋರಾಟಗಾರರ ಸ್ವಾಭಿಮಾನದÀ ಸಂಕೇತವಾಗಿತ್ತು. ಇದರಿಂದಲೇ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಬ್ರಿಟಿಷರಿಂದ ಲಭಿಸಲು ಕಾರಣವಾಯಿತು. ಈ ಹೋರಾಟದ ಹಿಂದೆ ಹಲವರ ತ್ಯಾಗ, ಬಲಿದಾನದ ಕಥೆಯಿದೆ. ಈ ದಿಸೆಯಲ್ಲಿ ಗಾಂಧೀಜಿಯವರ ಒಂದೊಂದು ಹೋರಾಟಕ್ಕೂ ಇತಿಹಾಸವಿದೆ. ಇದರ ಬಗ್ಗೆ ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿ ಸುವುದು ಅತ್ಯಗತ್ಯ. ಗಾಂಧೀಜಿಯವರ 150ನೇ ಜಯಂತಿ ಪ್ರಯುಕ್ತ ಗಾಂಧೀಜಿ ಸಾಧನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕೆಲಸ ಎಂದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಜೀವಿ, ಹೆಚ್.ಎನ್.ರವಿ, ಉಷಾರಾಣಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಕೆ.ಸಿ.ಬಸವರಾಜು, ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಎಸ್.ಆಂಜನೇಯ, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಸಿ.ಡಿ.ಪರಶು ರಾಮ ಮತ್ತಿತರರು ಉಪಸ್ಥಿತರಿದ್ದರು.

Translate »