ದ್ವಿತೀಯ ಟೆಸ್ಟ್: ಭಾರತ 601ಕ್ಕೆ ಡಿಕ್ಲೇರ್
ಮೈಸೂರು

ದ್ವಿತೀಯ ಟೆಸ್ಟ್: ಭಾರತ 601ಕ್ಕೆ ಡಿಕ್ಲೇರ್

October 12, 2019

ಪುಣೆ, ಅ.11- ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ನಷ್ಟಕ್ಕೆ 601ರನ್ ಗಳ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿದೆ.

2ನೇ ದಿನವಾದ ಶುಕ್ರವಾರ 3 ವಿಕೆಟ್‍ಗೆ 273 ರನ್‍ಗಳಿಂದ ಆಟ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಮೊದಲ ಅವಧಿಯಲ್ಲಿ ಎಚ್ಚರಿಕೆಯ ಆಟವಾಡಿದರು. ಈ ಜೋಡಿ 4ನೇ ವಿಕೆಟ್‍ಗೆ 178ರನ್‍ಗಳ ಜೊತೆಯಾಟವಾಡುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ರಹಾನೆ 8 ಬೌಂಡರಿ ಒಳಗೊಂಡ 59 ರನ್ ಬಾರಿಸಿ ಕೇಶವ್ ಮಹಾರಾಜ್‍ಗೆ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಅಬ್ಬರಿಸಿದ ನಾಯಕ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ 26ನೇ ಶತಕ ಪೂರೈಸಿದರು.

ರಹಾನೆ ಔಟಾದ ಬಳಿಕ ಬ್ಯಾಟಿಂಗ್‍ನಲ್ಲಿ ಬಡ್ತಿ ಪಡೆದ ರವೀಂದ್ರ ಜಡೇಜಾ ಆರಂಭದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್ ಮಾಡಿದ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ 7ನೇ ದ್ವಿಶತಕ ಸಿಡಿಸಿ ಸಂಭ್ರಮಿ ಸಿದರು. ಈ ಮೂಲಕ ಭಾರತದ ಸಚಿನ್ ತೆಂಡೂಲ್ಕರ್ ಅವರ 6 ದ್ವಿಶತಕಗಳ ದಾಖಲೆಯನ್ನು ಮುರಿದರು. ಅಲ್ಲದೇ ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ವೇಗವಾಗಿ 7 ಸಾವಿರ ರನ್‍ಗಳ ಗಡಿ ದಾಟಿ ಸರ್ ಡಾನ್ ಬ್ರಾಡ್ಮನ್ ದಾಖಲೆಯನ್ನು ಅಳಿಸಿ ಹಾಕಿದರು. ಅಲ್ಲದೇ ನಾಯಕ ನಾಗಿ 40 ಶತಕ ಹಾಗೂ 9 ಬಾರಿ 150ಕ್ಕೂ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ದ್ವಿಶತಕ ಪೂರ್ಣಗೊಳ್ಳುತ್ತಿದ್ದಂತೆ ಬಿರುಸಿನ ಆಟಕ್ಕಿಳಿದ ಕೊಹ್ಲಿ ಹಾಗೂ ಜಡೇಜಾ ತಂಡದ ಮೊತ್ತವನ್ನು ಹೆಚ್ಚಿಸಿ ದರು. ಈ ಜೋಡಿ 5 ವಿಕೆಟ್‍ಗೆ 237 ಎಸೆತ ಗಳಲ್ಲಿ 225 ರನ್ ಸೇರಿಸಿ ಬೇರ್ಪಟ್ಟಿತ್ತು. ಆದರೆ ಶತಕ ದಂಚಿನಲ್ಲಿದ್ದ ಜಡೇಜಾ 91 ರನ್ ಬಾರಿಸಿ ಔಟಾದರು. ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 601 ರನ್ ಆಗಿದ್ದ ವೇಳೆ ಭಾರತ ಡಿಕ್ಲೇರ್ ಮಾಡಿಕೊಂಡಿತು. ವಿರಾಟ್ ಕೊಹ್ಲಿ 336 ಎಸೆತಗಳಲ್ಲಿ 33 ಬೌಂಡರಿ, 2 ಸಿಕ್ಸರ್ ನೆರವಿನಿಂದ 254 ರನ್ ಬಾರಿಸಿ ಅಜೇಯರಾಗುಳಿದರು. ಇನ್ನು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಭಾರತೀಯ ಬೌಲರ್‍ಗಳ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿ ತಂಡದ ಮೊತ್ತ 33ರನ್ ಆಗುವಷ್ಟರಲ್ಲೇ ಆರಂಭಿಕರಾದ ಡೀನ್ ಎಲ್ಗರ್ (6), ಏಡೆನ್ ಮಾಕ್ರಮ್(0) ಹಾಗೂ ತೆಂಬ ಬಾವುಮರನ್ನು (8) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತದ ಪರ ಉಮೇಶ್ ಯಾದವ್ 2, ಮೊಹಮ್ಮದ್ ಶಮಿ 1 ವಿಕೆಟ್ ಪಡೆದು ಸಂಭ್ರಮಿಸಿದರು. ಇನ್ನೂ ಎರಡನೇ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.

Translate »