ದಳ ಸಂಸದರ ಗೆಲುವಿನಲ್ಲಿ ಕೈ ಶ್ರಮವಿದೆ: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ ಪ್ರತಿಪಾದನೆ
Uncategorized, ಹಾಸನ

ದಳ ಸಂಸದರ ಗೆಲುವಿನಲ್ಲಿ ಕೈ ಶ್ರಮವಿದೆ: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ ಪ್ರತಿಪಾದನೆ

July 3, 2019

ಹಾಸನ, ಜು.2- ಇತ್ತೀಚಿನ ಲೋಕ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಮೈತ್ರಿ (ಜೆಡಿಎಸ್) ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶ್ರಮವೂ ಇದೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ ಹೇಳಿದರು.

ನಗರದಲ್ಲಿನ ಕಾಂಗ್ರೆಸ್ ಜಿಲ್ಲಾ ಕಚೇರಿ ಯಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಯುವ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್‍ನವರು ಶ್ರಮಿಸಿದ್ದರೂ ಜೆಡಿಎಸ್‍ನಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲೆ ಆಗುತ್ತಿರುವ ದುಷ್ಪರಿಣಾಮ ಗಳ ಕುರಿತು ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಧಿಕಾರಕ್ಕಾಗಿ ನರೇಂದ್ರ ಮೋದಿ ಸುಳ್ಳಿನ ಸರಮಾಲೆಯನ್ನೇ ಹೆಣೆದು ಜನರ ಮನಸ್ಸನ್ನು ಬದಲಿಸಿದ್ದಾರೆ. ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ಕಲ್ಪಿಸುವು ದಾಗಿ ಹೇಳಿ ನಂತರದಲ್ಲಿ ಪಕೋಡ ಮಾರಲು ಸಲಹೆ ನೀಡಿದ್ದರು. ಮುಂದಿನ ಚುನಾವಣೆಗಳಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರೂ ಪಕ್ಷವನ್ನು ಸಂಘಟಿಸ ಬೇಕು ಎಂದು ಉತ್ತೇಜಿಸಿರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಜನ್ ಗೌಡ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು ಪಕ್ಷವನ್ನು ಉಳಿಸಲು ಹೋರಾಡುತ್ತಿದ್ದರೆ ಅತ್ತ ಕಾಂಗ್ರೆಸ್‍ನ ಹಿರಿಯ ನಾಯಕರು ಜೆಡಿಎಸ್ ಹೊಗಳುವ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ. ಅದನ್ನು ಮೊದಲು ಬಿಡುವಂತೆ ಕಟ್ಟಪ್ಪಣೆ ಹೊರಡಿಸ ಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ಅನೇಕ ಯೋಜನೆ ಜಾರಿಗೆ ತಂದಿದ್ದರೂ ಅದರ ಕುರಿತು ಯಾರೂ ಮಾತ ನಾಡುವುದಿಲ್ಲ. ಪ್ರತಿ ಬಾರಿಯೂ ಸಚಿವ ಹೆಚ್.ಡಿ.ರೇವಣ್ಣ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಹೊಗಳಿದರೆ ಪಕ್ಷದ ಕಾರ್ಯ ಕರ್ತರಿಗೆ ನೋವಾಗುತ್ತದೆ. ಇದು ಮೊದಲು ಬದಲಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಜೀವಂತವಾಗಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂಬ ದೃಷ್ಟಿಯಿಂದ ಜೆಡಿಎಸ್‍ಗೆ ಬೆಂಬಲ ಕೊಡಲಾಗಿದೆ. ಅದರಂತೆ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲಾಗಿದೆ. ಆದರೆ 2014ರಲ್ಲಿ 1.24 ಲಕ್ಷದಷ್ಟು ಮತ ಗಳಿಸಿದ್ದ ಬಿಜೆಪಿ, 2019ರಲ್ಲಿ 5.40 ಲಕ್ಷ ಮತ ಪಡೆದಿದೆ. ಜಿಲ್ಲೆಯಲ್ಲಿ ಅಸ್ತಿತ್ವದಲ್ಲೇ ಇಲ್ಲದಂ ತಿದ್ದ ಬಿಜೆಪಿ ಅಷ್ಟೊಂದು ಮತ ಗಳಿಸಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಕಾರ್ಯಕರ್ತರ ನೋವು: ಮೈತ್ರಿ ಸರಕಾರ ಇದ್ದರೂ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ನವರು ಕಾಂಗ್ರೆಸ್‍ನವರನ್ನು ಬಹಳ ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷ ಸಂಘಟನೆಗೆ ಭಾರೀ ಸಮಸ್ಯೆ ಯಾಗುತ್ತಿದೆ ಎಂದು ಸಭೆಯಲ್ಲಿ ಭಾಗವಹಿ ಸಿದ್ದ ಕಾರ್ಯಕರ್ತರು ಒಟ್ಟಾಗಿ ಧ್ವನಿ ಎತ್ತಿದರು.

ಈ ಸಂದರ್ಭದಲ್ಲಿ ಆಲೂರು ತಾಲೂ ಕಿನ ರಾಜಶೇಖರ್, ಅರಸೀಕೆರೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಘು ಇತರರು ಪಾಲ್ಗೊಂಡಿದ್ದರು.

ಮೈತ್ರಿ ಸರಕಾರ ಇದ್ದರೂ ಕಾಂಗ್ರೆಸ್ಸನ್ನು ತಾತ್ಸಾರದಿಂದಲೇ ಕಾಣಲಾಗುತ್ತಿದೆ. ಹಾಗಾ ಗಿಯೇ ಜೆಡಿಎಸ್ ಜತೆಗಿನ ಮೈತ್ರಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಡವಾಗಿದೆ. ಕಾಂಗ್ರೆಸ್ ಸಬಲವಾಗಬೇಕೆಂದರೆ ಯುವಕರಿಗೆ ಆದ್ಯತೆ ನೀಡಬೇಕು. ತಾಪಂ, ಜಿಪಂ ಅಥವಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಯುವಕರಿಗೆ ಟಿಕೆಟ್ ನೀಡಿದರೆ ನಮ್ಮ ಮರ್ಯಾದೆಯೂ ಉಳಿಯುತ್ತದೆ. ಇಲ್ಲವಾದರೆ ಪಕ್ಷ ಸಂಘಟನೆ ಕಷ್ಟವಾಗಲಿದೆ. – ಸುಜನ್‍ಗೌಡ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ

Translate »