ವಿವೇಕವಿಲ್ಲದ ವಿದ್ಯೆಯಿಂದ ಪ್ರಯೋಜನವಿಲ್ಲ
ಮೈಸೂರು

ವಿವೇಕವಿಲ್ಲದ ವಿದ್ಯೆಯಿಂದ ಪ್ರಯೋಜನವಿಲ್ಲ

December 29, 2019

ಮೈಸೂರು, ಡಿ.28- ಎಷ್ಟೇ ದೊಡ್ಡ ವಿದ್ಯಾವಂತರಾದರೂ ವಿವೇಕವಿಲ್ಲದಿದ್ದರೆ ಅದು ಪ್ರಯೋಜನಕ್ಕೆ ಬಾರದು. ಆದ್ದರಿಂದ ಚಿಕ್ಕ ಮಕ್ಕಳಿಂದಲೇ ವಿದ್ಯೆಯ ಜೊತೆಗೆ ವಿವೇಕವನ್ನು ಕಲಿಸಿ, ಬೆಳೆಸಬೇಕೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು

ಕುವೆಂಪುನಗರದ ದೀಪ್ತಿ ಎಜುಕೇಷನ್ ಟ್ರಸ್ಟ್‍ನ ಬ್ಯೂಸಿಬೀಸ್ ಮಾಂಟೆಸ್ಸರಿ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಪ್ರತಿಯೊಂದು ಮಗುವೂ ಹುಟ್ಟುತ್ತಲೇ ಜ್ಞಾನಿಯಾಗಿರುತ್ತದೆ. ಅದನ್ನು ವಿಕಸಿಸಿ ವಿಕಾಸಗೊಳಿಸುವ ಕೆಲಸವನ್ನು ಶಿಕ್ಷಣ ಮಾಡಬೇಕು. ಯಾವ ಮಗುವೂ ಅಜ್ಞಾನಿ ಯಾಗಿರುವುದಿಲ್ಲ. ಬುದ್ಧಿಹೀನವಾಗಿರುವುದಿಲ್ಲ. ಬುದ್ಧಿಮಾಂದ್ಯ ಮತ್ತು ವಿಕಲಚೇತನ ಮಗುವಿನಲ್ಲೂ ಒಂದು ವಿಶೇಷ ಪ್ರತಿಭಾ ಶಕ್ತಿ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಅದಕ್ಕೆ ತಕ್ಕಂತೆ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಆ ಮಗು ಮೇಧಾವಿಯಾಗಿ ಬಹುದೊಡ್ಡ ಸಾಧನೆ ಮಾಡಬಹುದು. ಬಹಳಷ್ಟು ಇಂಥಾ ಸಾಧಕರನ್ನು ಜಗತ್ತು ಕಂಡಿದೆ ಎಂದರು.

ಡಾಕ್ಟರ್ಸ್, ಇಂಜಿನಿಯರ್ಸ್‍ಗಳನ್ನು ಮೀರಿದ ಉನ್ನತ ಸ್ಥಾನಗಳು, ಹುದ್ದೆಗಳು ನಮ್ಮಲ್ಲಿವೆ. ಬೇಕಾದಷ್ಟು ಕ್ಷೇತ್ರಗಳು ಪ್ರತಿಭಾವಂತರಿಗಾಗಿ ಕಾಯುತ್ತಿವೆ. ಸ್ವತಂತ್ರವಾಗಿ, ಸ್ವಚ್ಛಂದವಾಗಿ ಮಕ್ಕಳನ್ನು ಬಿಟ್ಟು ಒಳ್ಳೆ ಮಾರ್ಗದರ್ಶನವನ್ನಷ್ಟೇ ನೀಡಿದರೆ ತಂದೆ ತಾಯಿಗಳ, ಪೋಷಕರ ಆಸೆ, ಆಕಾಂಕ್ಷೆ, ನಿರೀಕ್ಷೆಗಳನ್ನೆಲ್ಲಾ ಮೀರಿ ಮಕ್ಕಳು ಗುರಿಸಾಧಕರಾಗುತ್ತಾರೆ ಎಂದರು.

ಶಾಲೆಯ ಪುಟ್ಟ ಮಕ್ಕಳಿಂದ ತಾಯಿ ಶಾರದೆ ಲೋಕ ಪೂಜಿತೆ ಎಂಬ ಪ್ರಾರ್ಥನೆ ಮತ್ತು ವಿಶ್ವೇಶ ಭಟ್ಟರ ವೇದ ಘೋಷದೊಡನೆ ಪ್ರಾರಂಭವಾದ ಕಾರ್ಯಕ್ರಮವನ್ನು ಏರ್ ಫೋರ್ಸ್‍ನ ನಿವೃತ್ತ ಅಧಿಕಾರಿ ಶ್ವೇತಾದ್ರಿ ರಾಮಣ್ಣ ಉದ್ಘಾಟಿಸಿ ಮಕ್ಕಳಿಗೆ ಹಿತವಚನ ಹೇಳಿದರು. ಪ್ರಾಂಶುಪಾಲೆ ಡಾ.ದಿವ್ಯ ವಿನಯ್ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯದರ್ಶಿ ಬಿ.ವಿ.ಜಯಪ್ರಕಾಶ್, ರೆಡ್‍ಎಫ್ ಎಂ ರೇಡಿಯೋ ಕೇಂದ್ರದ ತಂತ್ರಜ್ಞ ಸಂದೇಶ್, ಡಿಎವಿ ಪಬ್ಲಿಕ್ ಶಾಲೆಯ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು. ಅನೂಪ್ ಮತ್ತು ಅನನ್ಯ ನಿರೂಪಿಸಿದರು. ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸ ಲಾಯಿತು. ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Translate »