ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ, ನಮ್ಮ ಮುಂದಿನ ದಾರಿ ನಿಚ್ಚಳವಾಗಿದೆ
ಮೈಸೂರು

ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ, ನಮ್ಮ ಮುಂದಿನ ದಾರಿ ನಿಚ್ಚಳವಾಗಿದೆ

July 27, 2019

ಬೆಂಗಳೂರು, ಜು.26-ಯಾವುದೇ ಕಾರಣಕ್ಕೂ ಮರಳಿ ಜೆಡಿಎಸ್‍ಗೆ ವಾಪಸ್ ಆಗುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್‍ನ ಅತೃಪ್ತ ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಿ ಅತೃಪ್ತ ಶಾಸಕರೊಂದಿಗೆ ಮುಂಬೈಗೆ ಹಾರಿರುವ ಎ.ಹೆಚ್.ವಿಶ್ವನಾಥ್ ಅವರು, `ನಾವೆಲ್ಲ ಶಾಸಕರು ಬಂಡೆ ಯಂತೆ ಒಗ್ಗಟ್ಟಾಗಿದ್ದೇವೆ. ಹಾಗಾಗಿ, ನಾವು ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರನ್ನು ಅನರ್ಹ ಮಾಡುವ ಕುರಿತು ನಿರ್ಧಾರ ತಳೆದ ಬೆನ್ನಲ್ಲೇ ಅತೃಪ್ತ ಶಾಸಕರ ಬಣ ಬೆಂಗಳೂರಿಗೆ ವಾಪಾಸ್ ಆಗುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಆರಂಭವಾಗಿವೆ. ಈ ಕುರಿತಂತೆ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, `ನಾವು ವಾಪಸ್ ಪಕ್ಷಕ್ಕೆ ಮರಳುವ ಪ್ರಶ್ನೆಯೂ ಇಲ್ಲ. ನಮ್ಮನ್ನು ಸಂಪರ್ಕಿಸಿ, ಮನ ಒಲಿಸುವ ಧೈರ್ಯ ಯಾವ ನಾಯಕರಿಗೂ ಇಲ್ಲ’ ಎಂದು ಗುಡುಗಿದರು.

ಅಂತೆಯೇ ನಾವೆಲ್ಲ ಶಾಸಕರು ಬಂಡೆಯಂತೆ ಒಗ್ಗಟ್ಟಾಗಿದ್ದೇವೆ. ನೆಮ್ಮದಿಯಾಗಿ ದ್ದೇವೆ. ಯಾವ ನಾಯಕನೇ ಇರಲಿ. ನಮ್ಮ ಜತೆ ಸಂಪರ್ಕದಲ್ಲಿರುವುದಾಗಿ ಹೇಳಿದರೆ ಅದು ಸುಳ್ಳು. ಏಕೆಂದರೆ ನಮ್ಮ ಜತೆ ಮಾತನಾಡುವ ಮುಖ ಅವರಲ್ಲಿ ಯಾರಿಗೂ ಇಲ್ಲ. ಹಾಗೆ ಯಾರಾದರೂ ನಾಯಕರು ಹೇಳಿಕೊಂಡರೆ ಅದು ಭ್ರಮೆ ಮಾತ್ರ. ನಮ್ಮ ದಾರಿ ನಿಚ್ಚಳವಾಗಿದೆ ಹಾಗೂ ಸ್ಪಷ್ಟವಾಗಿದೆ ಎಂದು ವಿಶ್ವನಾಥ್ ಹೇಳಿದ್ದಾರೆ.

ಅನರ್ಹತೆಗೆ ನಾವು ಹೆದರೋದಿಲ್ಲ: ಇದೇ ವೇಳೆ ಶಾಸಕರ ಅನರ್ಹತೆ ಕುರಿತು ಮಾತನಾಡಿದ ವಿಶ್ವನಾಥ್, ಅನರ್ಹತೆಗೆ ನಾವು ಹೆದರೋದಿಲ್ಲ. ಗುರುವಾರದಂದು ರಾಣೇಬೆನ್ನೂರು ಶಾಸಕ ಆರ್.ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಈ ಮೂವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಈ ಬಗ್ಗೆ ಮುಂಬೈನಲ್ಲಿ ಮಾತನಾಡಿದ ವಿಶ್ವನಾಥ್, ಅನರ್ಹತೆಗೆ ನಾವು ಹೆದರೋದಿಲ್ಲ. ಇನ್ನು 2-3 ದಿನಗಳಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತೇವೆ. ಅನರ್ಹತೆ ವಿಚಾರವನ್ನು ಸುಪ್ರಿಂಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.

Translate »