ಬಸ್ ಬ್ರೇಕ್ ವೈಫಲ್ಯ: ಮತ್ತೊಂದು ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಚಾ.ಬೆಟ್ಟದಲ್ಲಿ ತಪ್ಪಿದ ಭಾರೀ ಅನಾಹುತ
ಮೈಸೂರು

ಬಸ್ ಬ್ರೇಕ್ ವೈಫಲ್ಯ: ಮತ್ತೊಂದು ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಚಾ.ಬೆಟ್ಟದಲ್ಲಿ ತಪ್ಪಿದ ಭಾರೀ ಅನಾಹುತ

July 27, 2019

ಮೈಸೂರು, ಜು.26(ಎಂಟಿವೈ)- ಏರ್‍ಬ್ರೇಕ್‍ನ ಪೈಪ್ ತುಂಡರಿಸಿದ ಪರಿಣಾಮ ಭಕ್ತರಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದು ಹಿಮ್ಮುಖವಾಗಿ ಚಲಿಸುತ್ತಿದ್ದನ್ನು ಗಮನಿಸಿದ ಮತ್ತೊಂದು ಬಸ್‍ನ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ಕೂದಲೆಳೆ ಅಂತರದಿಂದ ತಪ್ಪಿದ ಘಟನೆ ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ. ಆಷಾಢ ಮಾಸದ ಕೊನೆ ಶುಕ್ರವಾರದ ವಿಶೇಷ ಪೂಜಾ ಮಹೋ ತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರಿಂದ ನಗರ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 9.30ಕ್ಕೆ ನಗರ ಬಸ್ ನಿಲ್ದಾಣದಿಂದ 3ನೇ ಡಿಪೋಗೆ ಸೇರಿದ ನಗರ ಸಾರಿಗೆ ಬಸ್(ಕೆಎ.09, ಎಫ್.4528) ಸುಮಾರು 45ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಚಾಮುಂಡಿಬೆಟ್ಟಕ್ಕೆ ಪ್ರಯಾಣ ಬೆಳೆಸಿತ್ತು. ತಾವರೆಕಟ್ಟೆಯಿಂದ 6 ಕಿ.ಮೀ. ದೂರ ಕಡಿದಾದ ರಸ್ತೆಯಲ್ಲಿ ಸಾಗುತ್ತಿದ್ದಾಗ ಬ್ರೇಕ್ ವಿಫಲವಾಗಿರುವುದು ಚಾಲಕನ ಗಮನಕ್ಕೆ ಬಂದಿದೆ. ಈ ವೇಳೆ ಎದುರಿನಿಂದ ಮತ್ತೊಂದು ಬಸ್ ಬಂದಿದೆ. ಈ ವೇಳೆ ಬಸ್ ನಿಲ್ಲಿಸಲು ಪ್ರಯತ್ನಿಸಿದಾಗ ಬಸ್ ಇಳಿಜಾರಿನಲ್ಲಿ ಹಿಮ್ಮುಖವಾಗಿ ಚಲಿಸಲಾರಂಭಿಸಿತು.

ಮುಂದೆ ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದುದ್ದನ್ನು ಗಮನಿಸಿದ ಸಾರಿಗೆ ಸಂಸ್ಥೆಯ ಮತ್ತೊಂದು ಬಸ್‍ನ ಚಾಲಕ ಕಂ ನಿರ್ವಾಹಕ ಎಸ್.ಮಹಾದೇವಸ್ವಾಮಿ ತನ್ನ ಬಸ್‍ನಿಂದ, ಒತ್ತರಿಸಿ ವೇಗವನ್ನು ನಿಯಂತ್ರಿಸಿದ್ದಾರೆ. ಈ ವೇಳೆ ಬ್ರೇಕ್ ವಿಫಲಗೊಂಡಿದ್ದ ಬಸ್ ಚಾಲಕನೂ ಬಸ್ ಅನ್ನು ಎಡಕ್ಕೆ ನಿಧಾನವಾಗಿ ತಿರುಗಿಸಿ ತಡೆ ಗೋಡೆಯತ್ತ ಚಾಲಿಸಿದ್ದಾರೆ. ಅಂತಿಮವಾಗಿ ಎರಡೂ ಬಸ್‍ಗಳ ಚಾಲಕರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾ ಹುತವೊಂದು ತಪ್ಪಿದೆ. ಇದರಿಂದ ಬೆಟ್ಟದಿಂದ ಕೆಳಗೆ ಇಳಿಯುವ ಎಲ್ಲಾ ವಾಹನ ಗಳನ್ನು ಮಾರ್ಗ ಬದಲಿಸಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಯಿತು. ವಿಷಯ ತಿಳಿದ ಕೂಡಲೇ ಸಾರಿಗೆ ಸಂಸ್ಥೆಗೆ ಸೇರಿದ ಕ್ರೇನ್ ತಂದು ಆ ಬಸ್ಸನ್ನು ಎಳೆದುಕೊಂಡು ಹೋಗಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಎರಡೂ ಬಸ್ ಚಾಲಕರ ಸಮಯ ಪ್ರಜ್ಞೆಯನ್ನು ಭಕ್ತರು, ಪೊಲೀಸರು ಪ್ರಶಂಸಿಸಿದರು.

Translate »