ಕಣ್ಮರೆಯಾಗುವ ಹಂತ ತಲುಪಿವೆ ಈ ಪಾರಂಪರಿಕ ಕಲ್ಯಾಣಿಗಳು!
ಮೈಸೂರು

ಕಣ್ಮರೆಯಾಗುವ ಹಂತ ತಲುಪಿವೆ ಈ ಪಾರಂಪರಿಕ ಕಲ್ಯಾಣಿಗಳು!

March 10, 2020

ಮೈಸೂರು, ಮಾ.9(ಎಂಕೆ)- ಸುತ್ತಲೂ ಸುರಿದ ಕಟ್ಟಡದ ತ್ಯಾಜ್ಯ, ಚಪ್ಪಡಿ ಕಲ್ಲುಗಳು, ಕಸದ ರಾಶಿ ಮತ್ತು ಬೃಹತ್ತಾಗಿ ಬೆಳೆದ ಪೊದೆಗಳ ನಡುವೆ ಮರೆಯಾಗಿ ಪಾರಂಪರಿಕ ‘ಕಲ್ಯಾಣಿ’ಗಳೆರಡು ಮುಚ್ಚಿ ಹೋಗುತ್ತಿವೆ.

ಮೈಸೂರಿನ ಕುಕ್ಕರಹಳ್ಳಿ ಕೆರೆ ರಸ್ತೆ ಬದಿಯಲ್ಲಿ ಮೈಸೂರು ವಿವಿ ಈಜುಕೊಳಕ್ಕೆ ಹೊಂದಿಕೊಂಡಂತೆ ಅಕ್ಕ- ಪಕ್ಕದಲ್ಲಿರುವ ಎರಡು ಪ್ರತ್ಯೇಕ ಕಲ್ಯಾಣಿಗಳು ನಿರ್ವಹಣೆ ಮತ್ತು ಅಭಿವೃದ್ಧಿ ಕಾಣದೆ ಕಸ ಮತ್ತು ಕೆಸರಿನ ಗುಂಡಿಗಳಾಗಿ ಮಾರ್ಪಟ್ಟಿವೆ. ಆಯುಶ್ ಇಲಾಖೆಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾ ಲಯದ ‘ಚಂದ್ರವನ’ ಔಷಧಿಯ ಗಿಡ ಮೂಲಿಕೆಗಳ ಸಸ್ಯ ತೋಟದಲ್ಲಿರುವ ಕಲ್ಯಾಣಿ ಮತ್ತು ಮೈಸೂರು ವಿವಿ ಈಜುಕೊಳದ ಪಕ್ಕದಲ್ಲಿರುವ ಕಲ್ಯಾಣಿ ಸಂಪೂರ್ಣ ಮುಚ್ಚಿಹೋಗಿದ್ದು, ಕೆಸರಿನಿಂದ ದುರ್ವಾಸನೆ ಬೀರುತ್ತಿವೆ.

‘ಚಂದ್ರವನ’ ಸಸ್ಯತೋಟದಲ್ಲಿರುವ ಕಲ್ಯಾಣಿ ಕಟ್ಟಡದ ತ್ಯಾಜ್ಯ, ಮಣ್ಣಿನಿಂದ ಮುಚ್ಚಿಕೊಂಡರೆ, ಪಕ್ಕದಲ್ಲಿಯೇ ಇರುವ ಇನ್ನೊಂದು ಕಲ್ಯಾಣಿ ಸರಸ್ವತಿಪುರಂ ಕಡೆಯಿಂದ ಹರಿದು ಬರುವ ಚರಂಡಿ ನೀರು, ಕಸದ ರಾಶಿ, ಚಪ್ಪಡಿ ಕಲ್ಲುಗಳಿಂದ ಮರೆಯಾಗಿದೆ. ಮಹಾರಾಜರ ಕಾಲದಲ್ಲಿ ನೀರಿನ ಸಂಗ್ರಹಣೆ, ಅಂತರ್ಜಲ ವೃದ್ಧಿ ಮತ್ತು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗಿದ್ದ ಕಲ್ಯಾಣಿಗಳೆರಡನ್ನು ನಿರ್ವಹಣೆ ಮಾಡುವಲ್ಲಿ ಸಂಬಂಧ ಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಕಲ್ಯಾಣಿಗಳ ಜೀರ್ಣೋದ್ದಾರ ಮಾಡಿದರೆ ನಮಗೇನು ಲಾಭ ಎಂಬಂತೆ ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ ಎಂದು ಸ್ಥಳಿಯ ಸಾರ್ವಜನಿಕರು ಆರೋಪಿಸಿದ್ದಾರೆ.

ದುರ್ವಾಸನೆ: ಮೈಸೂರು ವಿವಿ ಈಜುಕೊಳದ ಪಕ್ಕದಲ್ಲಿ ರುವ ಕಲ್ಯಾಣಿಗೆ ಮೂರ್ನಾಲ್ಕು ಚರಂಡಿಗಳಿಂದ ಕೊಳಚೆ ನೀರು ಹರಿದು ಬರುತ್ತಿದೆ. ಸಣ್ಣ ಮಳೆ ಬಂದರೆ ಸಾಕು ಕಲ್ಯಾಣಿಯೇ ಭರ್ತಿಯಾಗುತ್ತದೆ. ಚರಂಡಿ ನೀರಿನ ದುರ್ವಾಸನೆ ಹೆಚ್ಚಾಗು ತ್ತಿದ್ದು, ಈಜಲು ಬರುವ ವಿದ್ಯಾರ್ಥಿಗಳು ಮೂಗು ಮುಚ್ಚಿ ಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವಿ ಈಜುಕೊಳ ನೋಡಿಕೊಳ್ಳುವ ಅಧಿಕಾರಿ ಯೊಬ್ಬರು ‘ಮೈಸೂರು ಮಿತ್ರ’ನಲ್ಲಿ ದೂರಿದರು.

ಕಲ್ಯಾಣಿ ಸ್ಪಲ್ಪ ದೂರದಲ್ಲೇ ಜೆಎಸ್‍ಎಸ್ ಮಹಿಳಾ ಕಾಲೇಜು, ಶನಿದೇವರ ದೇವಸ್ಥಾನವಿದ್ದು, ಪ್ರತಿನಿತ್ಯ ನೂರಾರು ಮಂದಿ ಇದೇ ಮಾರ್ಗದಲ್ಲಿ ತಿರುಗಾಡುತ್ತಾರೆ. ಅಲ್ಲದೆ ನೂರಾರು ಕುಟುಂಬಗಳೂ ಕಲ್ಯಾಣಿ ದುರ್ನಾತ ದಿಂದ ಮುಕ್ತಿ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒತ್ತುವರಿಗೆ ಯತ್ನ: ಬೆಂಗಳೂರಿನಲ್ಲಿರುವ ಲಾಲ್ ಬಾಗ್ ನಂತೆಯೇ ಮೈಸೂರಿನಲ್ಲೂ ಲಾಲ್‍ಬಾಗ್ ನಿರ್ಮಾಣಕ್ಕಾಗಿ ಈ ಸ್ಥಳವನ್ನು ಗುರುತಿಸಲಾಗಿದೆ. ಆದರೆ, ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಕಾರ್ಯ ವೈಖರಿ ನೋಡಿದರೆ ಅತ್ತ ಲಾಲ್ ಬಾಗ್ ಮತ್ತು ಇತ್ತ ಕಲ್ಯಾಣಿಗಳು ಇಲ್ಲದಂತಾಗುತ್ತಿದೆ. ಕೆಲವರು ಒತ್ತುವರಿ ಮಾಡಿ ಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ನಜರ್ ಬಾದ್ ನಿವಾಸಿ ಎಂ.ಆರ್.ಅಶೋಕ್‍ಕುಮಾರ್ ತಿಳಿಸಿದರು.

Translate »