ಮಡಿಕೇರಿ: ತಾತ ಮತ್ತು ಮೊಮ್ಮಗನನ್ನು ಹತ್ಯೆ ಮಾಡಿದ ಮೂವರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಮಡಿಕೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಡಿ.ಪವನೇಶ್ ತೀರ್ಪು ನೀಡಿದ್ದಾರೆ.
ಕುಶಾಲನಗರ ಸಮೀಪದ ಮಲ್ಲೇನ ಹಳ್ಳಿ ಗ್ರಾಮದವರಾದ ಹೆಚ್.ಎಸ್. ಶಿವಕುಮಾರ್ ಅಲಿಯಾಸ್ ಶಿವು, ಟಿ.ಇ.ಶಿವಕುಮಾರ್ ಅಲಿಯಾಸ್ ಜುಟ್ಟು ಶಿವು ಮತ್ತು ಕುಮಾರ್ ಅಲಿ ಯಾಸ್ ಕರಿಯಾ ಗಲ್ಲು ಶಿಕ್ಷೆಗೆ ಗುರಿ ಯಾದವರು. ಇವರುಗಳು 2016ರ ಫೆಬ್ರವರಿ 11ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಮಲ್ಲೇನಹಳ್ಳಿ ಗ್ರಾಮದ ಕೊಚ್ಚುಣ್ಣ ಅವರ ಮನೆಗೆ ತೆರಳಿದ್ದಾರೆ. ಇವರಲ್ಲಿ ಕುಮಾರ ಎಂಬಾತ ಸಿಗರೇಟ್ ಸೇದುವ ನೆಪದಲ್ಲಿ ಕೊಚ್ಚುಣ್ಣ ಅವರ ಮೊಮ್ಮಗ ಅಮೃತರಾಜನನ್ನು ತೋಟದ ಶೆಡ್‍ಗೆ ಕರೆದುಕೊಂಡು ಹೋದಾಗ ಮನೆಯಲ್ಲೇ ಇದ್ದ ಶಿವಕುಮಾರ್ ಅಲಿಯಾಸ್ ಶಿವು ಮತ್ತು ಶಿವಕುಮಾರ್ ಅಲಿಯಾಸ್ ಜುಟ್ಟು ಶಿವು ಅವರುಗಳು ಕೊಚ್ಚುಣ್ಣ ಅವರ ಕತ್ತಿಗೆ ಟವಲ್‍ನಿಂದ ಬಿಗಿದು ಹತ್ಯೆಗೈದಿದ್ದಾರೆ. ನಂತರ, ಮನೆಯಲ್ಲಿದ್ದ ಬೀರುವಿನಲ್ಲಿ ಹಣಕ್ಕಾಗಿ ಹುಡುಕಾಡಿದ್ದಾರೆ.
ಅಲ್ಲಿ ಹಣ ಸಿಗದೆ ಇದ್ದಾಗ. ಅಮೃತರಾಜ್ ಬಳಿ ಬಂದು ‘ನಿನ್ನ ಅಜ್ಜ ಹಣ ಎಲ್ಲಿಟ್ಟಿದ್ದಾನೆ’ ಎಂದು ಪ್ರಶ್ನಿಸಿದ್ದಾರೆ. ಅಪಾಯವರಿತು ಓಡಿ ಹೋಗುತ್ತಿದ್ದ ಅಮೃತರಾಜ್‍ನನ್ನು ಹಿಡಿದು ಕತ್ತು ಕೊಯ್ದು ಕೊಲೆ ಮಾಡಿ, ಮೃತ ದೇಹವನ್ನು ಚರಂಡಿಯೊಳಗೆ ಅಡಿಕೆ ಸೋಗೆ ಯಿಂದ ಮುಚ್ಚಿಟ್ಟು, ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕುಶಾಲನಗರ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮೂವರಿಗೆ ಗಲ್ಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಎಂ.ಕೃಷ್ಣವೇಣಿ ವಾದ ಮಂಡಿಸಿದ್ದರು.