ಸರ್ವರಿಗೂ ಆರೋಗ್ಯ ಸೇವೆ ಕಲ್ಪಿಸುವ ‘ಆರೋಗ್ಯ ಕರ್ನಾಟಕ’ದೊಂದಿಗೆ  ‘ಯಶಸ್ವಿನಿ’ ವಿಲೀನ
ಮೈಸೂರು

ಸರ್ವರಿಗೂ ಆರೋಗ್ಯ ಸೇವೆ ಕಲ್ಪಿಸುವ ‘ಆರೋಗ್ಯ ಕರ್ನಾಟಕ’ದೊಂದಿಗೆ  ‘ಯಶಸ್ವಿನಿ’ ವಿಲೀನ

July 14, 2018
  •  ಜು.9ರಂದು ಸರ್ಕಾರದ ಮಹತ್ವದ ಆದೇಶ
  • ನೋಂದಣಿ ಯೊಂದಿಗೆ ಕಾರ್ಡ್ ಪಡೆಯಲು ಆಗಸ್ಟ್ 3 ಕಡೇ ದಿನ

ಮೈಸೂರು: ಕರ್ನಾಟಕ ರಾಜ್ಯದ ಎಲ್ಲಾ ವರ್ಗದ ಜನರಿಗೂ ಆರೋಗ್ಯ ಮತ್ತು ತುರ್ತು ಆರೋಗ್ಯ ಸೇವೆ ಒದಗಿಸಿ, ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡುವ ಸಲುವಾಗಿ 2018ರ ಮಾರ್ಚ್ 2ರಿಂದ ಜಾರಿಗೆ ತಂದಿದ್ದ ‘ಆರೋಗ್ಯ ಕರ್ನಾಟಕ’ ಯೋಜನೆಯೊಂದಿಗೆ ‘ಯಶಸ್ವಿನಿ’ಯನ್ನು ವಿಲೀನಗೊಳಿಸಿ ಸರ್ಕಾರ ಜುಲೈ 9ರಂದು ಆದೇಶ ಹೊರಡಿಸಿದೆ.

ಈ ಯೋಜನೆ ಮೂಲಕ ನಿರ್ಧಿಷ್ಠಪಡಿಸಿದ ಪ್ರಾಥಮಿಕ ಆರೋಗ್ಯ ಸೇವೆ, ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ ಸೇವೆ, ತೃತೀಯ ಹಂತದ ಆರೋಗ್ಯ ಸೇವೆ ಹಾಗೂ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ.

ಸಹಕಾರ ಸಂಘಗಳ ಸದಸ್ಯರುಗಳಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ 2003ರಲ್ಲಿ ಸರ್ಕಾರ ‘ಯಶಸ್ವಿನಿ’ ಯೋಜನೆಯನ್ನು ಆರಂಭಿಸಿತ್ತು. ಅದರಲ್ಲಿ ಗ್ರಾಮಾಂತರ ಸದಸ್ಯರು ವಾರ್ಷಿಕ 300 ರೂ. ಮತ್ತು ನಗರ ಪ್ರದೇಶದವರು 710 ರೂ.ಗಳಂತೆ ವಾರ್ಷಿಕ ವಂತಿಗೆ ಪಾವತಿಸಿದವರು ಯಶಸ್ವಿನಿ ವ್ಯಾಪ್ತಿಗೆ ಬರುತ್ತಿದ್ದರು. ಈ ಯೋಜನೆಯಡಿ ಬಹುತೇಕ ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರು, ವಿವಿಧ ಸಹಕಾರ ಸಂಘಗಳ ಸದಸ್ಯರಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಸರ್ಕಾರಿ ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿತ್ತು.

ಯೋಜನೆಗಳ ವಿಲೀನ : ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಸಾಮರ್ಥ್ಯ ಬಳಸಿಕೊಳ್ಳಲು ಮತ್ತು ಕರ್ನಾಟಕದ ಎಲ್ಲಾ ನಿವಾಸಿಗಳಿಗೆ ಒಂದೇ ಸೂರಿನಡಿ ಆರೋಗ್ಯ ಸೇವೆ ಒದಗಿಸಲು ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ ಯೋಜನೆ ಮತ್ತು ಇಂದಿಗೂ ಸುರಕ್ಷಾ ಯೋಜನೆಗಳನ್ನು ವಿಲೀನಗೊಳಿಸಿ ಸಮಗ್ರವಾದ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿಗೆ ತಂದಿದೆ.

ವಿಲೀನವಾದ ಯೋಜನೆ ವ್ಯಾಪ್ತಿ : ವಿಲೀನವಾದ ಆರೋಗ್ಯ ಕರ್ನಾಟಕ ಮತ್ತು ಯಶಸ್ವಿನಿ ಯೋಜನೆಯಡಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರೂ ಉಚಿತವಾಗಿ ಅಥವಾ ಅತ್ಯಲ್ಪ ಸೇವಾ ಶುಲ್ಕ ನೀಡಿ ಆರೋಗ್ಯ ಸೇವೆ ಗಳನ್ನು ಪಡೆಯಬಹುದಾಗಿದೆ. ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸದರಿ ಸೌಲಭ್ಯ ಇಲ್ಲದಿದ್ದಲ್ಲಿ ರೆಫರಲ್ ಮುಖಾಂತರ
ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.

ಅರ್ಹ ರೋಗಿಗಳು: ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರಡಿ ಅರ್ಹ ಕುಟುಂಬಕ್ಕೆ ಸೇರಿರುವವರು, ಪಡಿತರ ಚೀಟಿ ಹೊಂದಿರುವ ರೋಗಿಗಳು ಅರ್ಹ ರೋಗಿಗಳ ವರ್ಗಕ್ಕೆ ಸೇರಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿಲ್ಲದವರು ಸಾಮಾನ್ಯ ರೋಗಿ ಎಂದು ಪರಿಗಣಿಸಿ ಅವರಿಗೂ ಸಹ ಪಾವತಿ ಆಧಾರದ ಚಿಕಿತ್ಸೆ ಒದಗಿಸಲಾಗುವುದು. ಆರೋಗ್ಯ ಕರ್ನಾಟಕ ಯೋಜನೆಯಡಿ ಕೆಲ ಸೀಮಿತ ವರ್ಗಗಳನ್ನೊರತು ಪಡಿಸಿ ರಾಜ್ಯದ 6.5 ಕೋಟಿ ಜನರಿಗೆ 1516 ನಿರ್ಧಿಷ್ಟ ಚಿಕಿತ್ಸೆಗಳನ್ನು ಒದಗಿಸಲಾಗುವುದು. 2018ರ ಮೇ 31ಕ್ಕೆ ಯಶಸ್ವಿನಿ ಯೋಜನೆ ಅಂತ್ಯಗೊಂಡಿದ್ದು, ಆರೋಗ್ಯ ಕರ್ನಾಟಕದೊಂದಿಗೆ ವಿಲೀನಗೊಳಿಸಿದೆ.

ರೋಗಿಗಳ ನೋಂದಣಿ : ಆಧಾರ ಕಾರ್ಡ್ ಮತ್ತು ಪಡಿತರ ಚೀಟಿ ಆಧರಿಸಿ ಆರೋಗ್ಯ ಕರ್ನಾಟಕ ಯೋಜನೆಗೆ ನೊಂದಣಿ ಮಾಡಿಕೊಂಡು ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಅನ್ನು ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 10 ರೂ. ಪಾವತಿಸಿ ಕಾರ್ಡ್ ಪಡೆಯಲು 2018ರ ಆಗಸ್ಟ್ 31 ಕಡೇ ದಿನವಾಗಿದೆ. ಯೋಜನೆಯ ವಿವರ ಹಾಗೂ ನೋಂದಣಿ ವಿಧಾನ ಕುರಿತು ಮಾಹಿತಿಗಾಗಿ ಸಹಾಯವಾಣಿ 104 ಮತ್ತು 180042583300.

ಚಿಕಿತ್ಸಾ ಧರ : ಐವರು ಸದಸ್ಯರಿರುವ ಕುಟುಂಬಕ್ಕೆ 30,000 ರೂ.ವರೆಗೆ 1 ವರ್ಷಕ್ಕೆ ದ್ವಿತೀಯ ಹಂತದ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ತೃತೀಯ ಹಂತದ ಆರೋಗ್ಯ ಚಿಕತ್ಸೆಗೆ 1 ವರ್ಷಕ್ಕೆ 1.50 ಲಕ್ಷ ರೂ.ವರೆಗೆ ಒದಗಿಸಲಾಗುವುದು.

Translate »