ಬೆಂಗಳೂರಿನ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಸೇರಿ  ಮೂವರು ನೀರುಪಾಲು
ಮೈಸೂರು

ಬೆಂಗಳೂರಿನ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಸೇರಿ ಮೂವರು ನೀರುಪಾಲು

June 10, 2019

ಕೊಳ್ಳೇಗಾಲ: ನದಿಯಲ್ಲಿ ಆಟವಾಡುತ್ತಿದ್ದಾಗ ಕಾಲು ಜಾರಿ ಬಿದ್ದು ಬೆಂಗಳೂರಿನ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಸೇರಿ ಮೂವರು ಮೃತಪಟ್ಟ ಘಟನೆ ಶಿವನ ಸಮುದ್ರ ಸಮೀಪದ ವೆಸ್ಲಿ ಸೇತುವೆ ಬಳಿ ಭಾನುವಾರ ಸಂಭವಿಸಿದೆ.

ನದಿಯ ಮಧ್ಯೆ ಬಂಡೆ ಮೇಲೆ ಕುಳಿತಿದ್ದ ಮಹಿಳಾ ಉದ್ಯೋಗಿ ಕಾಲು ಜಾರಿ ನದಿಗೆ ಬಿದ್ದಾಗ ಅವರನ್ನು ರಕ್ಷಿಸಲು ಪ್ರಯತ್ನಿಸಿದ ಮತ್ತಿಬ್ಬರು ಉದ್ಯೋಗಿಗಳು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಪ್ರಸಾದ್ ಎಂಬುವರ ಪುತ್ರ ಮನೋಜ್ ಕುಮಾರ್(23), ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕೊತ್ತೇಗಾಲ ಗ್ರಾಮದ ನಾರಾಯಣಪ್ಪ ಎಂಬುವರ ಪುತ್ರ ಲೋಕೇಶ್(21), ಕುಣಿಗಲ್ ತಾಲೂಕು ತಿಪ್ಪನಾಯಕನಹಳ್ಳಿ ಗ್ರಾಮದ ಓಬಳಯ್ಯ ಎಂಬುವರ ಪುತ್ರಿ ವೀಣಾ(23) ದುರಂತದಲ್ಲಿ ಸಾವನ್ನಪ್ಪಿದವರು.

ವಿವಿಧ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿರುವ 6 ಮಂದಿ ಸ್ನೇಹಿತರು ಮೂರು ಬೈಕುಗಳಲ್ಲಿ ಜಾಲಿ ಟ್ರಿಪ್‍ಗಾಗಿ ಶಿವನ ಸಮುದ್ರಕ್ಕೆ ಬಂದಿದ್ದರು ಎನ್ನಲಾಗಿದೆ. ವೆಸ್ಲಿ ಸೇತುವೆ ಬಳಿ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ವೀಣಾ ಅವರು ತಾವು ನಿಂತಿದ್ದ ಬಂಡೆಕಲ್ಲಿನಿಂದ ಜಾರಿ ನೀರಿಗೆ ಬಿದ್ದು, ಮುಳುಗುತ್ತಿದ್ದಾಗ ಅವರನ್ನು ರಕ್ಷಿಸಲು ಮುಂದಾದ ಮನೋಜ್ ಕುಮಾರ್ ಮತ್ತು ಲೋಕೇಶ್ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಅವರ ಸ್ನೇಹಿತರಾದ ಬೆಂಗಳೂರಿನ ಗೋವಿಂದರಾಜನಗರದ ಸಿಂಧು, ಅನ್ನಪೂರ್ಣೇಶ್ವರಿ ನಗರದ ಲೀಲಾ ಮತ್ತು ರಾಘವೇಂದ್ರ ತಮ್ಮ ಕಣ್ಣೆದುರಿಗೆ ಸ್ನೇಹಿತರು ಜಲಸಮಾಧಿಯಾದುದ್ದನ್ನು ಕಂಡು ನದಿಯಲ್ಲಿ ಆಟವಾಡುತ್ತಿದ್ದ ಇತರರನ್ನು ಸಹಾಯಕ್ಕಾಗಿ ಕೂಗಿದರಾದರೂ ಎಲ್ಲರೂ ಆಸ್ಥಳದಿಂದ ದೂರವಿದ್ದ ಕಾರಣ ಅವರು ಧಾವಿಸುವಷ್ಟರಲ್ಲಿ ಮೂವರು ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.

ವೆಸ್ಲಿ ಸೇತುವೆ ಬಳಿ ಕಡಿಮೆ ಪ್ರಮಾಣದಲ್ಲೇ ನೀರು ಹರಿಯುತ್ತಿದೆ. ಆ ಸ್ಥಳದಲ್ಲಿ ಅಷ್ಟೇನೂ ಆಳವಿಲ್ಲ. ಭಾನುವಾರವಾದ ಇಂದು ಸೇತುವೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನೀರಿಗೆ ಇಳಿದಿದ್ದರು. ಆದರೆ ಈ ಸ್ನೇಹಿತರ ತಂಡ ವೆಸ್ಲಿ ಸೇತುವೆಯಿಂದ ಸ್ವಲ್ಪ ದೂರ ಸಾಗಿ ನದಿ ನಡುವೆ ಇದ್ದ ಬಂಡೆಗಳ ಮೇಲೆ ಕುಳಿತು ಆಟವಾಡುತ್ತಿದ್ದರು. ಇವರ್ಯಾರಿಗೂ ಈಜು ಬರುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಕಾಂತ್, ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ವನರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾ ಗಿದ್ದು, ಸೋಮವಾರ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿ ಸಲಾಗುವುದು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಕಾಂತ್ ಮೈಸೂರು ಮಿತ್ರನಿಗೆ ತಿಳಿಸಿದರು.

Translate »