ಕಾರ್ಕಳ ಬಳಿ ನಡೆದ ಬಸ್ ಅಪಘಾತದಲ್ಲಿ ಮೈಸೂರಿನ ಮೂವರು, ನಂ.ಗೂಡಿನ ಇಬ್ಬರು ಸಾವು
ಮೈಸೂರು

ಕಾರ್ಕಳ ಬಳಿ ನಡೆದ ಬಸ್ ಅಪಘಾತದಲ್ಲಿ ಮೈಸೂರಿನ ಮೂವರು, ನಂ.ಗೂಡಿನ ಇಬ್ಬರು ಸಾವು

February 17, 2020

ನಂಜನಗೂಡು, ಫೆ.16- ಶನಿವಾರ ಸಂಜೆ ಕಾರ್ಕಳ ಬಳಿ ನಡೆದ ಬಸ್ ಅಪಘಾತದಲ್ಲಿ ಮೈಸೂರಿನ ಮೂವರು, ಮತ್ತು ನಂಜನಗೂಡು ತಾಲೂಕಿನ ಇಬ್ಬರು ಅಡುಗೆ ಭಟ್ಟರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಶಂಭುಲಿಂಗಪ್ಪ ಪುತ್ರ ಮಹ ದೇವಸ್ವಾಮಿ(36) ಹಾಗೂ ಶಿವಯ್ಯ ಪುತ್ರ ಬಸವರಾಜು (24) ಮೃತ ದುರ್ದೈವಿಗಳು. ಸುನಿಲ್ ಎಂಬಾತನು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಒಬ್ಬನೇ ಮಗನಾಗಿದ್ದ ಮಹದೇವಸ್ವಾಮಿ ಅವರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಹೇಳತೀರದ್ದಾಗಿದೆ. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಇನ್ನು ಬಸವ ರಾಜು ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆ ನಿಶ್ಚಯವಾಗಿತ್ತು.

ಪ್ರವಾಸಕ್ಕೆ ತೆರಳಿದ್ದ ಖಾಸಗಿ ಕಂಪನಿಯವರ ಊಟ ತಿಂಡಿಗಾಗಿ ಅಡುಗೆ ಮಾಡಿ ಕೊಡಲು ಈ ಮೂವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಅಪಘಾತದಲ್ಲಿ ಗ್ರಾಮದ ಇಬ್ಬರು ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಸಂಬಂಧಿಕರು ರಾತ್ರೋ ರಾತ್ರಿ ಕಾರ್ಕಳಕ್ಕೆ ತೆರಳಿದ್ದಾರೆ. ಮೃತದೇಹಗಳು ಕಾರ್ಕಳದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಭಾನುವಾರ ಸಂಜೆ ವೇಳೆಗೆ ಗ್ರಾಮಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

Translate »