- ಹೇಮಾವತಿ ಜಲಾಶಯದಲ್ಲಿ ಜೀವಕಳೆ
- ಶಾಲಾ-ಕಾಲೇಜುಗಳಿಗೆ ರಜೆ
- ವಿದ್ಯುತ್, ರಸ್ತೆ-ರೈಲು ಸಂಚಾರ ವ್ಯತ್ಯಯ
ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ರಸ್ತೆ, ರೈಲು ಸಂಚಾರ ಅಸ್ತವ್ಯಸ್ತವಾಗಿರುವುದಲ್ಲದೆ, ಅನೇಕ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮುಂಗಾರಿನ ಆರ್ಭಟ ಕಳೆದ ನಾಲ್ಕು ದಿನದಿಂದ ಜೋರಾಗಿದ್ದು, ಭಾನುವಾರ ಸುರಿದ ಭಾರೀ ಮಳೆಗೆ ಜನರು ತತ್ತರಿಸಿದ್ದಾರೆ. ಹಲವೆಡೆ ಮರಗಳು ಧರೆಗುರುಳಿದ್ದು, ಮನೆಗಳ ಗೋಡೆಗಳು ಕುಸಿದಿವೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯೂ ಸಂಭವಿಸಿದೆ. ಹಾಸನ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ರೈಲು ಸಂಚಾರವೂ ವ್ಯತ್ಯಯವಾಗಿದೆ.
ರಸ್ತೆ ಬಂದ್, ಸವಾರರ ಪರದಾಟ: ಇನ್ನು ಭಾರೀ ಗಾಳಿ ಸಹಿತ ಮಳೆಗೆ ಸೋಮ ವಾರಪೇಟೆ-ಬೇಲೂರು ರಾಜ್ಯ ಹೆದ್ದಾರಿ ಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ವೊಂದು ಉರುಳಿ ಬಿದ್ದ ಪರಿಣಾಮ ಬೇಲೂರು-ಬಾಗೆ ನಡುವಿನ ವಾಹನ ಸಂಚಾರ ಸ್ಥಗಿತವಾಗಿ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಮರ ಬಿದ್ದಿರುವುದರ ಬಗ್ಗೆ ಸಂಬಂಧಪಟ್ಟ ಅಧಿ ಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ರೈಲು ಸಂಚಾರದಲ್ಲೂ ವ್ಯತ್ಯಯ: ಸಕಲೇಶಪುರ ಬಳಿಯ ಯಡಕುಮೇರಿ-ಕಡಗರವಳ್ಳಿ ನಡುವೆ ನಾಲ್ಕು ಕಡೆ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿರುವುದ ರಿಂದ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಯಶವಂತಪುರದಿಂದ ಕಾರವಾರಕ್ಕೆ ಹೊರಟಿದ್ದ ರೈಲು ಸಂಚಾರ ರದ್ದುಪಡಿಸ ಲಾಗಿದೆ. 1200 ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾಡಲಾಗಿದ್ದು, 6 ಬಸ್‍ಗಳ ಮೂಲಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ರೈಲಿನ ಮಾರ್ಗ ಬದಲಿಸ ಲಾಗಿದೆ. ನಿರಂತರ ಸುರಿಯುತ್ತಿರುವ ಮಳೆ ಯಿಂದಾಗಿ ಕುಸಿದ ಗುಡ್ಡವನ್ನು ತೆರವು ಗೊಳಿಸಿ ಸಂಜೆ ವೇಳೆಗೆ ರೈಲ್ವೆ ಮಾರ್ಗ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಹಾಸನ ರೈಲ್ವೆ ನಿಲ್ದಾಣಾಧಿಕಾರಿ ವಿಜಯ ಕುಮಾರ್ ಮಾಹಿತಿ ನೀಡಿದ್ದಾರೆ.
ಸಂಪರ್ಕ ಸೇತುವೆ ಜಲಾವೃತ: ಸಕಲೇ ಶಪುರ ಹಾನು ಬಾಳು ಹೋಬಳಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ ಯಾಗಿದೆ. ರಾಗಿಗುಂಡಿ, ಕ್ಯಾನಹಳ್ಳಿ, ಮಜ್ಜನ ಹಳ್ಳಿ, ಸೇರಿದಂತೆ ಹತ್ತಾರು ಗ್ರಾಮ ಗಳಿಗೆ ಸಂಪರ್ಕ ಕಡಿತವಾಗಿದೆ. ಇದು ಹಾನು ಬಾಳು ಹೋಬಳಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವುದಲ್ಲದೇ ತಾಲೂಕಿಗೂ ಸಂಪರ್ಕ ಕಲ್ಪಿಸಲು ಇದ್ದ ಏಕೈಕ ಸೇತುವೆಯಾಗಿದೆ. ಸೇತುವೆ ಮುಳುಗಡೆಯಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದೆ.
ಕತ್ತಲೆಯಲ್ಲಿ ಗ್ರಾಮಗಳು: ಆಲೂರು ತಾಲೂಕಿನಲ್ಲಿ ಮಳೆ-ಗಾಳಿಗೆ 819ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 177ಕ್ಕೂ ಹೆಚ್ಚು ಟ್ರಾನ್ಸ್‍ಫಾರ್ಮರ್ ಹಾನಿ ಯಾಗಿ ಸೆಸ್ಕ್ ಒಂದಕ್ಕೆ 3.1 ಕೋಟಿಗೂ ಮಿಗಿಲಾಗಿ ಹಾನಿಯಾಗಿದೆ. ಸಕಲೇಶಪುರ, ಹೆತ್ತೂರು, ಯಸಳೂರು, ಹಾನುಬಾಳು, ಬೆಳಗೂಡು ಹಾಗೂ ಸುತ್ತಮುತ್ತ ಪ್ರಮುಖ ವಿದ್ಯುತ್ ಲೈನ್‍ಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆಯಾದರೂ, ಆಗಾಗ ಸಂಪರ್ಕ ವ್ಯತ್ಯಯವಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ: ಆಲೂರು-ಸಕಲೇಶಪುರ ತಾಲೂಕುಗಳಲ್ಲಿ ವರ್ಷಧಾರೆ ಮುಂದುವರೆದಿದ್ದು, ಮುನ್ನೆ ಚ್ಚರಿಕಾ ಕ್ರಮವಾಗಿ ಎರಡೂ ತಾಲೂಕು ಗಳಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಜಿಲ್ಲಾಧಿಕಾರಿ ಜಾಫರ್ ಆದೇಶ ಹೊರಡಿಸಿದ್ದಾರೆ.
ಜಲಾಶಯ ನೀರಿನ ಮಟ್ಟ ಏರಿಕೆ: ಭಾರಿ ಮಳೆಯಿಂದಾಗಿ ಹೇಮಾವತಿ ಜಲಾಶಯಗಳ ನೀರಿನ ಮಟ್ಟವು ಏರಿಕೆಯಾಗಿದ್ದು, ಜಲಾಶಯದ ಒಳ ಹರಿವು ಹೆಚ್ಚಿದೆ. ನಿನ್ನೆ ಒಳ ಹರಿವು 3,493 ಕ್ಯೂಸೆಕ್‍ವರೆಗೂ ದಾಖಲಾಗಿತ್ತು. ಇಂದು ಭಾರೀ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಿದೆ. ಜಲಾಶಯದ ಗರಿಷ್ಠ ಮಟ್ಟ 2,922 ಅಡಿಗಳಷ್ಟಿದ್ದು, ನೀರಿನ ಮಟ್ಟ 1,874ನ ಅಡಿಗೆ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಂದು 9,115 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ತುಂಬದ ಜಲಾಶಯ ಈ ಬಾರಿ ಭರ್ತಿಯಾಗುವ ನಿರೀಕ್ಷೆ ಇದೆ.