ಹೆಂಚಿನ ಮನೆ ಕುಸಿತ: ಬೀದಿ ಪಾಲಾದ ಕುಟುಂಬ
ಮೈಸೂರು

ಹೆಂಚಿನ ಮನೆ ಕುಸಿತ: ಬೀದಿ ಪಾಲಾದ ಕುಟುಂಬ

July 26, 2019

ಮೈಸೂರು; ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಶಿಥಿಲಗೊಂಡಿದ್ದ ಹಳೆಯ ಹೆಂಚಿನ ಮನೆ ಕುಸಿದಿರುವ ಘಟನೆ ಮೈಸೂರಿನ ಗಾಯತ್ರಿಪುರಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಗಾಯತ್ರಿಪುರಂ ಮೊದಲ ಹಂತದ 7ನೇ ಕ್ರಾಸ್‍ನಲ್ಲಿರುವ ತಿಮ್ಮಯ್ಯ ಎಂಬುವರಿಗೆ ಸೇರಿದ ಹೆಂಚಿನ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. 9 ಮಂದಿ ಕುಟುಂಬ ಸದಸ್ಯರು ಮಲಗಿದ್ದಾಗ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಭಾರೀ ಶಬ್ದ ಕೇಳಿಬಂದ ಕಾರಣ ಎಚ್ಚರಗೊಂಡು ಮನೆಯಿಂದ ಹೊರ ಬಂದ ಕೆಲ ನಿಮಿಷಗಳಲ್ಲೇ ಮನೆ ಕುಸಿಯಿತು. ಪರಿಣಾಮ ಮನೆಯಲ್ಲಿದ್ದ ಪಾತ್ರೆ, ಬಟ್ಟೆ ಇನ್ನಿತರ ವಸ್ತುಗಳು ಮಣ್ಣಿನ ಗೋಡೆ ಯಡಿ ಸಿಲುಕಿ ನಾಶವಾಗಿದ್ದು, ಇದರಿಂದಾಗಿ ತಿಮ್ಮಯ್ಯ ಕುಟುಂಬ ಆಶ್ರಯವಿಲ್ಲದೆ ಬೀದಿ ಪಾಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಪೊರೇಟರ್ ಜಿ.ಎಸ್.ಸತ್ಯರಾಜು, ಪಾಲಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು. ಸದ್ಯಕ್ಕೆ ತಿಮ್ಮಯ್ಯ ಕುಟುಂಬದ ಸದಸ್ಯರಿಗೆ ಗಾಯತ್ರಿಪುರಂನ ಸಮು ದಾಯ ಭವನವೊಂದರಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿರುವ ಅಧಿಕಾರಿಗಳು ಹಾಗೂ ಕಾರ್ಪೊರೇಟರ್, ಮನೆಯ ಹಾನಿಗೆ ಪರಿಹಾರ ಕಲ್ಪಿಸುವ ಸಂಬಂಧ ಪ್ರಕ್ರಿಯೆ ಆರಂಭಿಸಿದ್ದಾರೆ.

Translate »