ಟಿಪ್ಪರ್ ಡಿಕ್ಕಿ: ಮೂವರ ಸಾವು
ಮೈಸೂರು

ಟಿಪ್ಪರ್ ಡಿಕ್ಕಿ: ಮೂವರ ಸಾವು

December 19, 2018

ಮಂಡ್ಯ:  ಶ್ರೀರಂಗಪಟ್ಟಣ ಹಾಗೂ ಮದ್ದೂರು ಸಮೀಪದ ಶಿವ ಪುರದ ಬಳಿ ಮಂಗಳವಾರ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಟಿಪ್ಪರ್‍ಗೆ ಮೂವರು ಬೈಕ್ ಸವಾರರು ಬಲಿಯಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಸಂಭವಿ ಸಿದ ಅಪಘಾತದಲ್ಲಿ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಸಲ್ಮಾನ್(24) ಹಾಗೂ ಕೆಸರೆ ನಿವಾಸಿ ಇನಾಯತ್ (20), ಶಿವಪುರದ ಬಳಿ ನಡೆದ ಅಪಘಾತದಲ್ಲಿ ವಳಗೆರೆಹಳ್ಳಿ ಗ್ರಾಮದ ತೇಜೋಮೂರ್ತಿ(40) ಮೃತಪಟ್ಟಿದ್ದಾರೆ.

ಘಟನೆ-1: ಶ್ರೀರಂಗಪಟ್ಟಣ ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಹಾಗೂ ಇನಾಯತ್ ಮಂಗಳವಾರ ಮಧ್ಯಾಹ್ನ ಊಟಕ್ಕೆಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಜಂಕ್ಷನ್‍ನಲ್ಲಿ ಬೆಂಗಳೂರಿನಿಂದ ಮೈಸೂರಿನ ಕಡೆಗೆ ಸಂಚರಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರಿಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಇಬ್ಬರೂ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಡ್ರೈವರ್ ಸ್ಥಳದಲ್ಲಿ ಇಲ್ಲದಿರು ವುದನ್ನು ತಿಳಿದ ಸಾರ್ವಜನಿಕರು ತಾಲೂಕು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಘಟನೆಯೂ ನಡೆಯಿತು. ಬಳಿಕ ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದರಿಂದ 108 ಆಂಬುಲೆನ್ಸ್‍ನಲ್ಲಿ ಮೈಸೂರಿಗೆ ಕರೆತರಲಾಯಿತು. ಅಪಘಾತದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ-2: ವಳಗೆರೆಹಳ್ಳಿಯ ತೇಜೋಮೂರ್ತಿ ಅವರು ಕೆಲಸ ನಿಮಿತ್ತ ತಮ್ಮ ಬೈಕ್‍ನಲ್ಲಿ ಮದ್ದೂರು ಪಟ್ಟಣಕ್ಕೆ ಬರುತ್ತಿದ್ದಾಗ ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪ ಬಳಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »