ಇಂದು ಅಂಬಳೆ ಚಾಮುಂಡೇಶ್ವರಿ ರಥೋತ್ಸವ
ಚಾಮರಾಜನಗರ

ಇಂದು ಅಂಬಳೆ ಚಾಮುಂಡೇಶ್ವರಿ ರಥೋತ್ಸವ

June 22, 2018

ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ಶ್ರೀಚಾಮುಂಡೇಶ್ವರಿ ಚಿರಬಿಂಬ ಹಾಗೂ ನೂತನ ರಥ ಸಮರ್ಪಣಾ ಮಹೋತ್ಸವ ನಾಳೆ (ಜೂ.22) ಮಧ್ಯಾಹ್ನ 12.45 ರಿಂದ 1.40 ರಲ್ಲಿ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ನಡೆಯಲಿದ್ದು, ಶ್ರೀ ಚಾಮುಂಡೇಶ್ವರಿ ಅಮ್ಮ ನವರ ಬ್ರಹ್ಮರಥೋತ್ಸವವೂ ನಡೆಯಲಿರುವುದರಿಂದ ಗ್ರಾಮ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಶುಕ್ರವಾರ ಬೆಳಿಗ್ಗೆಯಿಂದಲೇ ದೇವಾಲಯದ ಅವರಣದಲ್ಲಿ ಶ್ರೀ ಗಣಪತಿ ಪೂಜೆ, ಪುಣ್ಯಾಹ, ಚಿರಬಿಂಬ, ರಥಬಿಂಬ, ಶುದ್ದಿನೇತ್ರೋ ನ್ಮಿಲನ, ಧೇನು, ಕುಂಬ, ದೀಪಾಗ್ನಿ, ನಿರೀಕ್ಷಣೆ, ಕಲ್ಪೋಕ್ತ, ಸಪ್ತಮಾತೃ ಕಾಕಲಶ ಸ್ಥಾಪನೆ, ವೇದಿಕಾ, ಮಂಟಪಾರ್ಚನೆ, ರಥಬಿಂಬ, ಪ್ರತಿಷ್ಠಾಂಗ, ಹೋಮ, ಸೂಕ್ತಾಧಿ, ಪಾರಾಯಣಗಳು, ರಥಯಂತ್ರ, ಮಹಾಪೂಜೆ, ದೇವತಾರಾಧನೆ ಸೇರಿದಂತೆ ವಿವಿಧ ಪೂಜೆ ಪುರಸ್ಕಾರಗಳು ನಡೆಯಲಿದ್ದು, ನಂತರ ಶ್ರೀರಥಾರೋಹಣ, ಬ್ರಹ್ಮರಥೋತ್ಸವ ನಡೆಯಲಿದೆ.

ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಹುಣ್ಣಿಮೆ ಬ್ರಹ್ಮ ರಥೋತ್ಸವ ಅಂಗವಾಗಿ ಮನೆಗಳಿಗೆ ಸುಣ್ಣ ಬಣ್ಣಗಳನ್ನು ಬಳಿದು, ಮನೆ ಅಂಗಳಗಳಲ್ಲಿ ರಂಗೋಲಿ ಬಿಟ್ಟು ಊರಿಗೆ ಬರುವ ಭಕ್ತರನ್ನು ಸ್ವಾಗತಿಸುತ್ತಿದ್ದಾರೆ. ಬೀದಿಗಳಲ್ಲಿ ವಿದ್ಯುತ್ ಕಂಬಗಳಿಗೆ ಮಾವು, ಬಾಳೆ ಹಸಿರು ತೋರಣಗಳನ್ನು ಕಟ್ಟಲಾಗಿದೆ. ಮನೆಗಳ ಮುಂದೆ ಬಣ್ಣ ಬಣ್ಣದ ದೀಪಗಳನ್ನು ಇಟ್ಟು ಅಲಂಕರಿಸಿದ್ದಾರೆ. ದೂರದ ಊರುಗಳು ಸೇರಿದಂತೆ ದೇವಾಲಯಕ್ಕೆ ಬರುವ ಭಕ್ತರಿಗೆ ಅನ್ನಸಂರ್ತಪಣೆ ಏರ್ಪಡಿಸಲಾಗಿದೆ. ಈ ದೇವತಾ ಕಾರ್ಯವನ್ನು ಚಾಮರಾಜನಗರ ಆಗಮಾಚಾರ್ಯ ಶೈವಾಗಮ ವಿದ್ವಾನ್ ವೇ.ಬ್ರ.ಶ್ರೀ. ಆಗಮಿಕ ನಾಗರಾಜದಿಕ್ಷೀತ್, ವೇ.ಬ್ರ ಎ.ಎನ್.ರಾಮನಾಥ ನೆರವೇರಿಸುವರು.

Translate »