ಇಂದು ಮುನಿಶ್ರೀ ಸಾಗರ್‍ಜೀ ‘ಮಹಾ ಶತಾವಧಾನ’
ಮೈಸೂರು

ಇಂದು ಮುನಿಶ್ರೀ ಸಾಗರ್‍ಜೀ ‘ಮಹಾ ಶತಾವಧಾನ’

August 18, 2019

ಮೈಸೂರು, ಆ.17(ಎಂಟಿವೈ)- ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಜೈನ ಮುನಿ ನಯಚಂದ್ರ ಸಾಗರ್ ಸುರಿಜೀ ಅವರ ಶಿಷ್ಯ, ಮುನಿಶ್ರೀ ಚಂದ್ರಪ್ರಭಾ ಚಂದ್ರ ಸಾಗರ್‍ಜೀ ಅವರು ಇದೇ ಭಾನುವಾರ ಮಹಾ ಶತಾವಧಾನ ನಡೆಸಿಕೊಡಲಿದ್ದಾರೆ. ನಗರದ ಶ್ರೀಮಹಾವೀರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಮುನಿ ಅಜಿತಚಂದ್ರ ಸಾಗರ್‍ಜೀ, 2014ರಲ್ಲಿ ಮುಂಬೈ ನಲ್ಲಿ ಶತಾವಧಾನ ನಡೆಸಿಕೊಟ್ಟು 100 ಪ್ರಶ್ನೆಗಳಿಗೂ ಅನುಕ್ರಮ ವಾಗಿ ಉತ್ತರಿಸಿದ್ದರು. 2018ರಲ್ಲಿ ಬೆಂಗಳೂರಿನಲ್ಲಿ ಮಹಾ ಶತಾ ವಧಾನ ನಡೆಸಿಕೊಟ್ಟಿದ್ದರು. ಇದೇ ಮೊದಲ ಬಾರಿಗೆ ಮೈಸೂರಿ ನಲ್ಲಿ ‘ಮಹಾ ಶತಾವಧಾನ’ ನಡೆಸಿಕೊಡಲಿದ್ದು, 200 ಪ್ರಶ್ನೆಗಳಿಗೆ ಅನುಕ್ರಮವಾಗಿ ಐದು ವಿಭಿನ್ನ ಭಾಷೆಗಳಲ್ಲಿ ಉತ್ತರಿಸಲಿದ್ದಾರೆ. ಮೈಸೂರಿನ ಶ್ರೀ ಸುಮತಿನಾಥ್ ಜೈನ್ ಶ್ವೇತಾಂಬರ ಮೂರ್ತಿಪೂಜಕ ಸಂಘ ಮತ್ತು ಮಹಾ ಶತಾವಧಾನ ಸಮಿತಿ ವತಿಯಿಂದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆ.18ರಂದು ಬೆಳಿಗ್ಗೆ 9ಗಂಟೆಗೆ ಮಹಾ ಶತಾವಧಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

200 ಜನರ ಪ್ರಶ್ನೆಗೆ ಕ್ರಮಾನುಸಾರ ಉತ್ತರ ನೀಡುವುದು ಅಧ್ಯಾತ್ಮವೂ ಹೌದು, ವಿಜ್ಞಾನವೂ ಹೌದು. ಸಮಾಜದಲ್ಲಿ ಹಲವರು ಶತಾವಧಾನಕ್ಕೆ ಪ್ರಯತ್ನಪಟ್ಟಿದ್ದರೂ ಪೂರ್ಣ ಮಾಡಿದವರು ಕಡಿಮೆ. ಮಹಾ ಶತಾವಧಾನ ಪೂರ್ಣಗೊಳಿಸುವುದು ಬಹು ದೊಡ್ಡ ಸಾಧನೆ. ಇದಕ್ಕೆ ಏಕಾಗ್ರತೆ ಮುಖ್ಯ. ಶತಾವಧಾನದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗಲಿದ್ದು, ವ್ಯಕ್ತಿತ್ವವೂ ವಿಕಸನವಾಗಲಿದೆ ಎಂದರು. ಶ್ರೀ ಸರಸ್ವತಿ ಸಾಧನಾ ಸಂಶೋಧನಾ ಪ್ರತಿಷ್ಠಾನದಿಂದ ದೇಶಾದ್ಯಂತ 40 ಸಾವಿರ ವಿದ್ಯಾರ್ಥಿಗಳು ಶತಾವಧಾನ ಅಭ್ಯಾಸ ಮಾಡುತ್ತಿದ್ದು, ಮೈಸೂರಿನಲ್ಲೂ 190 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇದಕ್ಕಾಗಿ 10 ದಿನದಿಂದ 45 ದಿನಗಳವರೆಗೆ ವಿವಿಧ ಹಂತದ ತರಬೇತಿ ನೀಡುತ್ತಾ ಬಂದಿದ್ದೇವೆ ಎಂದರು. ಮುನಿ ಶ್ರೀ ಚಂದ್ರಪ್ರಭಾ ಚಂದ್ರ ಸಾಗರ್‍ಜೀ, ಮೈಸೂರು ಜೈನ್ ಸಂಘದ ಅಧ್ಯಕ್ಷ ಬಿ.ಎ.ಕೈಲಾಸ್ ಚಂದ್ ಜೈನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »