ಮೈಸೂರು, ಆ.16(ಎಂಟಿವೈ)- ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಶುಕ್ರವಾರ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ನವೀಕರಣಗೊಂಡ ಸಂಸದರ ಕಚೇರಿಯಲ್ಲಿ ಕಾರ್ಯಾರಂಭಿಸಿದರು. ಎರಡನೇ ಬಾರಿ ಸಂಸದ ರಾಗಿ ಆಯ್ಕೆಯಾದ ಬಳಿಕ ಈ ಹಿಂದಿನ ಕಚೇರಿಗೆ ಕೆಲವು ಮಾರ್ಪಾಡು ಮಾಡಿ, ಇಂದು ಗಣಪತಿ ಹೋಮ ಮಾಡಿ ಸುವ ಮೂಲಕ ಕಚೇರಿಯಲ್ಲಿ ಕಾರ್ಯಾರಂಭ ಮಾಡಿದರು.
ಈ ಸಂದರ್ಭದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ, 2019ನೇ ಸಾಲಿನ ದಸರಾ ಮಹೋತ್ಸವದ ಉದ್ಘಾಟಕರೂ ಆದ ಎಸ್.ಎಲ್.ಭೈರಪ್ಪ, ಮಾಜಿ ಸಚಿವ ಎಸ್.ಎ.ರಾಮದಾಸ್, ಶಾಸಕರಾದ ಎಲ್.ನಾಗೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮಾಜಿ ಶಾಸಕ ಮಾರುತಿರಾವ್ ಪವಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ರಾಜೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ವಿಜಯ ವಿಠಲ ವಿದ್ಯಾ ಸಂಸ್ಥೆಯ ವಾಸುದೇವಭಟ್, ಪ್ರಶಾಂತ್, ಶ್ರೀಹರಿ, ಎಂ.ಮಲ್ಲಪ್ಪಗೌಡ, ಜಗದೀಶ್, ಜೋಗಿ ಮಂಜು, ಗಿರಿಧರ್, ಫಣೀಶ್, ಆನಂದ್ ಇನ್ನಿತರರು ಸಂಸದ ಪ್ರತಾಪ್ ಸಿಂಹ ಅವರಿಗೆ ಶುಭ ಕೋರಿದರು.
ಬಳಿಕ ಪತ್ರಕರ್ತರೊಂದಿಗೆ ಸಂಸದ ಪ್ರತಾಪ ಸಿಂಹ ಮಾತ ನಾಡಿ, ಎರಡನನೇ ಅವಧಿಗೆ ಸಂಸದನಾಗಿ ಪುನರಾಯ್ಕೆಯಾದ ಬಳಿಕ ಈ ಹಿಂದೆ ಇದ್ದ ಕಚೇರಿಯನ್ನು ನವೀಕರಣ ಮಾಡಿ, ಗಣಪತಿ ಹೋಮ ನಡೆಸುವ ಮೂಲಕ ಕಾರ್ಯ ಆರಂ ಭಿಸಿದ್ದೇನೆ. ಎರಡೂ ಜಿಲ್ಲೆಗಳ ಜನರು ನನ್ನ ಮೇಲಿಟ್ಟಿದ್ದ ವಿಶ್ವಾಸವನ್ನು ಉಳಿಸಿಕೊಂಡು ಕೆಲಸ ಮಾಡಿದ್ದೇನೆ. ಸ್ಥಗಿತ ಗೊಂಡಿದ್ದ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದೆ. ಉಡಾನ್ ಯೋಜನೆಯಲ್ಲಿ ಈಗಾಗಲೇ ಗೋವಾ, ಬೆಂಗಳೂರು, ಕೊಚ್ಚಿನ್, ಚೆನ್ನೈಗೆ ವಿಮಾನಯಾನ ಯಶಸ್ವಿಯಾಗಿ ನಡೆಯುತ್ತಿದೆ. ಮುಂದಿನ ತಿಂಗಳೊಳಗೆ ಮತ್ತೆ ಮೂರು ವಿಮಾನ ಹಾರಾಟ ಹೊಸದಾಗಿ ಆರಂಭವಾಗಲಿದೆ. ಅತೀ ಹೆಚ್ಚು ರೈಲನ್ನು ತಂದಿರುವ ದೇಶದ ಮೊದಲ ಸಂಸದನಾಗಿದ್ದೇನೆ. ಇನ್ನೂ ಎರಡು ಹೊಸ ರೈಲು ಮೈಸೂರಿಗೆ ಬರಲಿವೆ. ರೈಲ್ವೆ ನಿಲ್ದಾಣ ನವೀಕರಣದ ಕೆಲಸ ನಡೆಯುತ್ತಿದ್ದು, ಪ್ರಯಾಣಿಕರಿಗೆ ಮೂಲ ಸೌಲಭ್ಯವನ್ನೂ ಹೆಚ್ಚಿಸಲಾಗಿದೆ ಎಂದು ಹೇಳಿದರು.
2021ರ ದಸರಾ ಮಹೋತ್ಸವದ ವೇಳೆಗೆ ಮೈಸೂರು-ಬೆಂಗಳೂರು ನಡುವಿನ 10 ಪಥದ ರಸ್ತೆ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸರ್ಕಾರ 7 ಸಾವಿರ ಕೋಟಿ ರೂ. ವೆಚ್ಚದಲ್ಲಿ 10 ಪಥದ ರಸ್ತೆಯನ್ನಾಗಿ ಬೆಂಗಳೂರು-ಮೈಸೂರು ರಸ್ತೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೆರಡು ವರ್ಷದೊಳಗೆ 10 ಪಥದ ರಸ್ತೆಯಲ್ಲಿ ಸರಾಗವಾಗಿ ಓಡಾಡಬಹುದಾಗಿದೆ. ಮೈಸೂರಿಗೆ ರಸ್ತೆ, ರೈಲು ಹಾಗೂ ವಾಯುಮಾರ್ಗದ ವ್ಯವಸ್ಥೆ ಉತ್ತಮವಾಗಿದ್ದರೆ, ಇಲ್ಲಿನ ಕೈಗಾರಿಕೆಗಳು ಪ್ರಗತಿ ಸಾಧಿಸುತ್ತವೆ. ಇದರಿಂದ ಪ್ರವಾಸೋದ್ಯಮದೊಂದಿಗೆ ಜನ ಜೀವನ ಮಟ್ಟವೂ ಸುಧಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಒಳ್ಳೆ ಕಾಲ ಬಂದಿದೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯಕ್ಕೆ ಒಳ್ಳೆ ಕಾಲ ಬಂದಂತಾಗಿದೆ. ಅಧಿಕಾರ ಸ್ವೀಕರಿಸುತ್ತಿದ್ದಂತೆ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ನೆರೆ ಹಾವಳಿ ಯಿಂದಾಗಿ 6 ಲಕ್ಷ ಜನರಿಗೆ ತೊಂದರೆಯಾಗಿರಬಹುದು. ಆದರೆ ಉಳಿದ ಜನರು ಸಂಕಷ್ಟಕ್ಕೆ ಸಿಲುಕಿರುವ ಜನರ ನೋವಿಗೆ ಸ್ಪಂದಿಸಬೇಕು. ಸಿಎಂ ಯಡಿಯೂರಪ್ಪ ಅವರು ಈಗಾಗಲೇ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ. ಮನೆ ಕಳೆದುಕೊಂಡ ವರು, ಹಾನಿಗೊಳಗಾಗಿರುವವರು ಹಾಗೂ ಪ್ರಾಣ ಕಳೆದು ಕೊಂಡಿರುವವರ ಕುಟುಂಬಕ್ಕೂ ಪರಿಹಾರ ಘೋಷಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಲು ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ. ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿದ್ದುದ್ದನ್ನು ರದ್ದು ಮಾಡಿದ್ದಾರೆ. ಈ ಎಲ್ಲವನ್ನು ಗಮನಿಸಿದಾಗ ರಾಜ್ಯಕ್ಕೆ ಒಳ್ಳೆಯ ಕಾಲ ಬಂದಿರುವುದು ಸ್ಪಷ್ಟವಾಗುತ್ತದೆ ಎಂದರು.