ಇಂದು ಮೈಸೂರು ವಿವಿ ಕೆ-ಸೆಟ್ ಫಲಿತಾಂಶ: ಪರೀಕ್ಷೆಗೆ ಹಾಜರಾಗಿದ್ದವರು 63,068 ಮಂದಿ, ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರು 4,295 ಜನ
ಮೈಸೂರು

ಇಂದು ಮೈಸೂರು ವಿವಿ ಕೆ-ಸೆಟ್ ಫಲಿತಾಂಶ: ಪರೀಕ್ಷೆಗೆ ಹಾಜರಾಗಿದ್ದವರು 63,068 ಮಂದಿ, ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರು 4,295 ಜನ

July 20, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ 2017ರ ಡಿ.31ರಂದು ನಡೆಸಿದ್ದ ಕೆ-ಸೆಟ್ (ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ) ಪರೀಕ್ಷೆ ಫಲಿತಾಂಶ ಮೈಸೂರು ವಿವಿಯ ಕೆ-ಸೆಟ್ ಕೇಂದ್ರದ ವೆಬ್‍ಸೈಟ್‍ನಲ್ಲಿ ನಾಳೆ (ಶುಕ್ರವಾರ) ಪ್ರಕಟಗೊಳ್ಳಲಿದೆ.

ಪರೀಕ್ಷೆ ಬರೆಯಲು ನೋಂದಾಯಿಸಿದ್ದ 73,608 ಅಭ್ಯರ್ಥಿಗಳ ಪೈಕಿ 63,068 ಮಂದಿ ಪರೀಕ್ಷೆ ಎದುರಿಸಿದ್ದರು. ಇವರಲ್ಲಿ 4,295 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಗಳಿಸಿದ್ದಾರೆ. ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ವಿವಿ ಹಂಗಾಮಿ ಕುಲಪತಿಗಳೂ ಆದ ವಿವಿಯ ಕೆ-ಸೆಟ್ ಪರೀಕ್ಷಾ ಕೇಂದ್ರದ ಅಧ್ಯಕ್ಷ ಪ್ರೊ.ಟಿ.ಕೆ.ಉಮೇಶ್, ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳ ಪೈಕಿ 2,603 ಪುರುಷ ಅಭ್ಯರ್ಥಿಗಳಾಗಿದ್ದರೆ, 1,692 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಅಭ್ಯರ್ಥಿಗಳು ನಾಳೆ kset.uni-mysore.ac.in ಅಲ್ಲಿ ಫಲಿತಾಂಶ ವೀಕ್ಷಿಸಬಹುದು ಎಂದು ವಿವರಿಸಿದರು.

ಮೈಸೂರು ವಿವಿ ಕೆ-ಸೆಟ್ ಪರೀಕ್ಷೆ ನಡೆಸಲು ಯುಜಿಸಿಯಿಂದ ಮಾನ್ಯತೆ ಪಡೆದಿದೆ. 2017ರ ಕೆ-ಸೆಟ್ ಪರೀಕ್ಷೆಯನ್ನು ರಾಜ್ಯದ 11 ನೋಡಲ್ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಸದರಿ ಪರೀಕ್ಷೆಯು ಒಂದು ಸಾಮಾನ್ಯ ಹಾಗೂ ಎರಡು ವಿಷಯವಾರು ಪ್ರಶ್ನೆ ಪತ್ರಿಕೆಗಳು ಸೇರಿದಂತೆ ಒಟ್ಟು ಮೂರು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿತ್ತು. ಉತ್ತರವನ್ನು ಓಎಂಆರ್ ಹಾಳೆಯಲ್ಲಿ ತುಂಬುವ ವ್ಯವಸ್ಥೆ ಮಾಡಲಾಗಿತ್ತು. ಓಎಂಆರ್ ಸ್ಕ್ಯಾನ್ ಮಾಡಿದ ನಂತರ ಕೀ-ಉತ್ತರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿ, ಬಳಿಕ ಅಂತಿಮ ಉತ್ತರಗಳನ್ನು ಆಧರಿಸಿ ಫಲಿತಾಂಶಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಯುಜಿಸಿ ನಿಯಮಾನುಸಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಫಲಿತಾಂಶ ಪ್ರಕಟಣೆ ತಡವೇಕೆ?: ಪರೀಕ್ಷೆ ಹಾಗೂ ಮೌಲ್ಯಮಾಪನ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಯುಜಿಸಿ ಪ್ರತಿನಿಧಿಯೊಬ್ಬರು ಪರಿಶೀಲಿಸಬೇಕು. ಅವರು ಅನುಮೋದಿಸಿದ ನಂತರವಷ್ಟೇ ಫಲಿತಾಂಶ ಪ್ರಕಟಿಸಲು ಸಾಧ್ಯ. ಕಾರಣಾಂತರಗಳಿಂದ ಯುಜಿಸಿ ಪ್ರತಿನಿಧಿಗಳ ಸಮಯಾವಕಾಶ ಸಿಕ್ಕಿರದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸುವುದು ತಡವಾಯಿತು ಎಂದು ಪ್ರೊ.ಉಮೇಶ್ ಪ್ರತಿಕ್ರಿಯಿಸಿದರು.

ಮುಂದಿನ ಸಾಲಿನ ಕೆ-ಸೆಟ್ ಪರೀಕ್ಷೆಗೆ ಮೂರು ಪತ್ರಿಕೆಗಳ ಬದಲಿಗೆ ಒಂದು ಸಾಮಾನ್ಯ ಮತ್ತೊಂದು ವಿಷಯವಾರು ಪತ್ರಿಕೆ ಸೇರಿ ಎರಡು ಪತ್ರಿಕೆಗಳು ಮಾತ್ರ ಇರಲಿವೆ. ಇದರ ಒಟ್ಟು ಅಂಕಗಳು 350ರಿಂದ 300ಕ್ಕೆ ಇಳಿಕೆಯಾಗಲಿದೆ. ಜೊತೆಗೆ ಕೆ-ಸೆಟ್ ಪರೀಕ್ಷೆಯಲ್ಲಿ `ಮಹಿಳಾ ಅಧ್ಯಯನ’ ವಿಷಯ ಆಯ್ಕೆ ಮಾಡಿಕೊಳ್ಳಲು ಯಾವುದೇ ವಿಷಯವನ್ನು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅರ್ಹರಾಗಲಿದ್ದಾರೆ. ಇದರೊಂದಿಗೆ ಸ್ನಾತಕೋತ್ತರ ಪದವಿಯ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ಪೂರೈಸಿದವರು ಮಾತ್ರ ಕೆ-ಸೆಟ್ ಪರೀಕ್ಷೆ ಬರೆಯಲು ಅರ್ಹರಾಗಿದ್ದರು. ಇನ್ನು ಮುಂದೆ ಸ್ನಾತಕೋತ್ತರ ಪದವಿಯ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಕೆ-ಸೆಟ್ ಪರೀಕ್ಷೆ ಬರೆಯಲು ಅರ್ಹತೆ ಗಳಿಸಲಿದ್ದಾರೆ ಎಂದು ಹೇಳಿದರು.

ಫಲಿತಾಂಶದಲ್ಲಿ ಇಳಿಕೆ: 2016ರ ಕೆ-ಸೆಟ್ ಪರೀಕ್ಷೆಯ ಫಲಿತಾಂಶಕ್ಕೆ ಹೋಲಿಸಿದರೆ 2017ರ ಸಾಲಿನ ಫಲಿತಾಂಶದಲ್ಲಿ ತುಸು ಇಳಿಕೆಯಾಗಿದೆ. 2016ರಲ್ಲಿ ಶೇ.7.12ರಷ್ಟಿದ್ದ ಫಲಿತಾಂಶ 2017ರಲ್ಲಿ 6.81ಕ್ಕೆ ಕುಸಿದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರೊ.ಉಮೇಶ್, 39 ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿದ್ದು, ಈ ಎಲ್ಲಾ ವಿಷಯಗಳ ಪೈಕಿ ಅಪರಾಧಶಾಸ್ತ್ರದಲ್ಲಿ ಹೆಚ್ಚು ಫಲಿತಾಂಶ ಹೊರಹೊಮ್ಮಿದೆ. ಕೇಂದ್ರವಾರು ಫಲಿತಾಂಶ ನೋಡುವುದಾದರೆ, ಬೆಂಗಳೂರು ಕೇಂದ್ರ ಶೇ.9.399ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ಶೇ.4.644ರಷ್ಟು ಫಲಿತಾಂಶ ದಾಖಲಿಸಿರುವ ಗುಲ್ಬರ್ಗ ಕೊನೆಯ ಸ್ಥಾನದಲ್ಲಿದ್ದರೆ, ಮೈಸೂರು ಕೇಂದ್ರ ಶೇ.7.07 ಫಲಿತಾಂಶ ಪಡೆಯುವ ಮೂಲಕ 7ನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.

ನಯವಾಗಿಯೇ ನಿರಾಕರಿಸಿದರು: 124 ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯ ಅಕ್ರಮ ನೇಮಕಾತಿ ಆರೋಪ ಹಾಗೂ ಇದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಲು ನಯವಾಗಿಯೇ ನಿರಾಕರಿಸಿದ ಹಂಗಾಮಿ ಕುಲಪತಿ ಪ್ರೊ.ಉಮೇಶ್, ಈ ಬಗ್ಗೆ ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತೇನೆ ಎಂದು ಜಾರಿಗೊಂಡರು. ಮೈಸೂರು ವಿವಿ ಆಡಳಿತಾಂಗ ಕುಲಸಚಿವ ಪ್ರೊ.ಆರ್.ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಮೈಸೂರು ವಿವಿಯ ಕೆ-ಸೆಟ್ ಕೇಂದ್ರದ ಸಂಯೋಜಕ ಪ್ರೊ.ಹೆಚ್.ರಾಜಶೇಖರ್ ಗೋಷ್ಠಿಯಲ್ಲಿದ್ದರು.

Translate »