ಇಂದು, ನಾಳೆ ಭಾರತ್ ಬಂದ್
ಮೈಸೂರು

ಇಂದು, ನಾಳೆ ಭಾರತ್ ಬಂದ್

January 8, 2019

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9ರಂದು ಹಮ್ಮಿಕೊಂಡಿರುವ ಭಾರತ್ ಬಂದ್‍ಗೆ ರಾಜ್ಯ ಸರ್ಕಾರ ತಟಸ್ಥ ಧೋರಣೆ ತಳೆದಿದೆ. ಈ ಹಿನ್ನೆಲೆಯಲ್ಲಿ ಮುಷ್ಕರದ ಎರಡು ದಿನಗಳ ಕಾಲ ರಾಜ್ಯ ಸಾರಿಗೆ ಸಂಸ್ಥೆ ಬಸ್‍ಗಳು ರಸ್ತೆಗಿಳಿಯುವುದು ಅನುಮಾನ. ಆದರೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಶಾಲಾ-ಕಾಲೇಜುಗಳಿಗೆ ಪರಿಸ್ಥಿತಿ ಆಧರಿಸಿ ರಜೆ ನೀಡುವ ನಿರ್ಧಾರವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವಹಿಸಿದೆ.

ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಬಂದ್ ಸಂಬಂಧ ಮಾಹಿತಿ ಪಡೆದಿದ್ದಲ್ಲದೆ, ತೀವ್ರ ಭದ್ರತೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‍ಗೆ ಬೆಂಬಲ ನೀಡುವ ಕುರಿತು ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಂದ್ ಸಂದರ್ಭದಲ್ಲಿ ಆಸ್ಪತ್ರೆಗಳು, ಔಷಧ ಅಂಗಡಿಗಳು, ದೈನಂದಿನ ಅಗತ್ಯ ವಸ್ತುಗಳ ಸರಬರಾಜಿಗೆ ಯಾವುದೇ ಅಡ್ಡಿ ಇರುವುದಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಮೈತ್ರಿ ಸರ್ಕಾರ ಇರುವುದರಿಂದ ಕೇಂದ್ರದ ನೀತಿಗಳನ್ನು ವಿರೋಧಿಸುತ್ತಿರುವ ಸಂಘಟನೆಗಳಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷ ಬೆಂಬಲಕ್ಕೆ ಮುಂದಾಗಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ಸಂಚಾರಕ್ಕೆ ಇಳಿಯ ದಿದ್ದರೆ, ಬಂದ್ ಬಹುತೇಕ ಯಶಸ್ವಿಯಾದಂತೆ. ಖಾಸಗಿ ಬಸ್, ಟ್ಯಾಕ್ಸಿ, ಆಟೋ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿಕೆ ಸಂಬಂಧ ವಿಭಿನ್ನ ನಿಲುವು ತಳೆದಿವೆ. ಬಂದ್ ಪ್ರಯುಕ್ತ ವಿಶ್ವವಿದ್ಯಾ ಲಯಗಳು ಈ ಮೊದಲು ನಿಗದಿಯಾಗಿದ್ದ ಎರಡು ದಿನಗಳ ಪರೀಕ್ಷೆಗಳನ್ನು ಮುಂದೂಡಿವೆ. ಬಂದ್ ಬೆಂಬಲಿಸುವ ಬಗ್ಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಂದ್‍ಗೆ ಬೆಂಬಲ ನೀಡದ ಸಂಘಟನೆಗಳಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘಟನೆ, ರಾಜ್ಯ ಹೋಟೆಲ್ ಮಾಲೀಕರ ಸಂಘ, ಏರ್ ಪೋರ್ಟ್ ಟ್ಯಾಕ್ಸಿ ಮಾಲೀಕರ ಸಂಘ ಸೇರಿವೆ. ಈ ಮಧ್ಯೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಎರಡು ದಿನಗಳ ಭಾರತ್ ಬಂದ್ ವೇಳೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯಾಗದಂತೆ ರಕ್ಷಣೆ ಒದಗಿಸಲಾಗುವುದು, ಸಾರಿಗೆ ಸೌಲಭ್ಯ ಅಸ್ತವ್ಯಸ್ತತೆ ಬಗ್ಗೆ ಸರ್ಕಾರ ಗಮನಹರಿಸಿದೆ, ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಪರ್ಯಾಯ ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಂದ್‍ಗೆ ಮೈಸೂರಲ್ಲಿ ಮಿಶ್ರ ಬೆಂಬಲ
ಮೈಸೂರು: ಕೇಂದ್ರ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿ ಹಾಗೂ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ಕರೆ ನೀಡಿರುವ ಭಾರತ ಬಂದ್‍ಗೆ ಮೈಸೂ ರಲ್ಲಿ ಮಿಶ್ರ ಬೆಂಬಲ ವ್ಯಕ್ತವಾಗಿದೆ.

ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಐಎನ್‍ಟಿಯುಸಿ ಸೇರಿದಂತೆ 11 ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಮುಷ್ಕರಕ್ಕೆ ಕರೆ ನೀಡಿದ್ದು, ಮಂಗಳವಾರ ಹಾಗೂ ಬುಧವಾರಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ದೇಶವ್ಯಾಪಿ ಬಂದ್‍ಗೆ ಕರೆ ನೀಡಿವೆ.

ಮುಷ್ಕರದಲ್ಲಿ ಕಾರ್ಮಿಕರು, ಅಂಗನವಾಡಿ ಕಾರ್ಯ ಕರ್ತೆಯರು, ಸಹಾಯಕರು, ವಿಮಾ ನೌಕರರು, ಸಾರಿಗೆ ಕ್ಷೇತ್ರದ ಸಿಬ್ಬಂದಿ, ಅಂಚೆ ನೌಕರರು, ಬ್ಯಾಂಕುಗಳ ಅಧಿ ಕಾರೇತರ ಸಿಬ್ಬಂದಿ, ಕೈಗಾರಿಕೆಗಳ ಕೆಲಸಗಾರರು, ಗಾರ್ಮೆಂಟ್ಸ್ ಕಾರ್ಮಿಕರು ಪಾಲ್ಗೊಂಡು, ಪ್ರತ್ಯೇಕ ವಾಗಿಯೇ ಬೆಂಬಲ ಸೂಚಿಸಲಿದ್ದಾರೆ.

ಕೆಎಸ್‍ಆರ್‍ಟಿಸಿ ಬಸ್ಸುಗಳು: ಭಾರತ ಬಂದ್ ಹಿನ್ನೆಲೆ ಯಲ್ಲಿ ಸರ್ಕಾರ ಯಾವುದೇ ನಿರ್ದೇಶನ ನೀಡದ ಕಾರಣ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕಂಡುಬಂದರೆ ಮಾತ್ರ ಮಂಗಳವಾರ ಬೆಳಿಗ್ಗೆ ಸಾರಿಗೆ ಬಸ್ಸುಗಳ ಸೇವೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಎಸ್ ಆರ್‍ಟಿಸಿ ಮೈಸೂರು ಗ್ರಾಮಾಂತರ ಮತ್ತು ನಗರ ವಿಭಾಗಗಳ ನಿಯಂತ್ರಣಾಧಿಕಾರಿಗಳು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಖಾಸಗಿ ಬಸ್ಸುಗಳನ್ನು ಸ್ಥಗಿತ ಗೊಳಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಆದರೆ ಅನಿವಾರ್ಯವಾದಲ್ಲಿ ಮಾತ್ರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ವಹಿಸಲಾಗುವುದು ಎಂದು ಖಾಸಗಿ ಬಸ್ ಮಾಲೀಕರ ಸಂಘ ತಿಳಿಸಿದೆ.

ಬ್ಯಾಂಕ್ ಸೇವೆ ಇರುವುದಿಲ್ಲ: ಕ್ಲರ್ಕ್‍ಗಳು, ಅಧಿ ಕಾರೇತರ ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಳ್ಳು ತ್ತಿರುವುದರಿಂದ ಮಂಗಳವಾರ ಮತ್ತು ಬುಧವಾರ ಬ್ಯಾಂಕುಗಳ ಸೇವೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಆದರೆ ಎಟಿಎಂಗಳಿಗೆ ಹಣ ತುಂಬಲಾ ಗುವುದು. ಎಟಿಎಂ ಕೌಂಟರ್‍ಗಳಲ್ಲಿ ಹಣ ಕೊರತೆಯಾಗ ದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಟ್ಯಾಕ್ಸಿ, ಪ್ರವಾಸಿ ವಾಹನ ಲಭ್ಯ: ಕಾರ್ಮಿಕರ ಮುಷ್ಕರಕ್ಕೆ ನಾವು ಬಾಹ್ಯ ಬೆಂಬಲ ನೀಡುತ್ತೇವೆ. ಆದರೆ ಖಾಸಗಿ ಟ್ಯಾಕ್ಸಿ, ಪ್ರವಾಸಿ ವಾಹನಗಳು, ಟ್ರಾವೆಲ್ಸ್ ವಾಹನಗಳು ಎಂದಿನಂತೆ ಸೇವೆ ಒದಗಿಸುತ್ತೇವೆ ಎಂದು ಟ್ರಾವೆಲ್ ಅಸೋಸಿಯೇಷನ್‍ನ ಬಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.

ತೆರೆಯಲಿವೆ ಹೋಟೆಲ್‍ಗಳು:ಪ್ರವಾಸಿಗರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ
ಮೈಸೂರಿನ ಎಲ್ಲಾ ಹೋಟೆಲ್, ವಸತಿಗೃಹಗಳು, ರೆಸ್ಟೋರೆಂಟ್‍ಗಳು ಎಂದಿನಂತೆ ತೆರೆದಿರುತ್ತವೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ.

ಸಿನೆಮಾ ಪ್ರದರ್ಶನ ಇರುತ್ತದೆ: ಮೈಸೂರು ನಗರದಾದ್ಯಂತ ಎಲ್ಲಾ ಸಿನೆಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ಎಂದಿನಂತಿರುತ್ತದೆ ಎಂದು ಮೈಸೂರು ನಗರ ಸಿನೆಮಾ ಪ್ರದರ್ಶಕರ ಸಂಘದ ಕಾರ್ಯದರ್ಶಿ ಎಂ.ಆರ್. ರಾಜಾರಾಂ ತಿಳಿಸಿದ್ದಾರೆ.
ಎಂದಿನಂತೆ ರೈಲು ಸಂಚಾರ: ದೇಶಾದ್ಯಂತ ರೈಲು ಸಂಚಾರ ಎಂದಿನಂತಿರುತ್ತದೆ. ಇದರಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ನೈರುತ್ಯ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಲಾರಿ ಸಂಚಾರ ಸ್ಥಗಿತ ಇಲ್ಲ: ಕಾರ್ಮಿಕರ ಮುಷ್ಕರಕ್ಕೆ ನಾವು ನೈತಿಕ ಬೆಂಬಲ ನೀಡುತ್ತೇವೆ. ಆದರೆ ಲಾರಿಗಳು ಈಗಾಗಲೇ ಬೇರೆ-ಬೇರೆ ಸ್ಥಳಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವುದರಿಂದ ಲಾರಿ ಸಂಚಾರ ಸ್ಥಗಿತಗೊಳಿಸುವುದಿಲ್ಲ ಎಂದು ಲಾರಿ ಮಾಲೀಕರ ಸಂಘದ ಬಿ. ಕೋದಂಡರಾಮು ಅವರು ತಿಳಿಸಿದ್ದಾರೆ.

ಪೆಟ್ರೋಲ್ ಬಂಕ್ ತೆರೆದಿರುತ್ತವೆ: ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್‍ಗಳು ಕಾರ್ಯನಿರ್ವಹಿಸಲಿವೆ ಎಂದು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಎಸ್.ಕೆ. ದಿನೇಶ್ ತಿಳಿಸಿದ್ದಾರೆ.

ಕೈಗಾರಿಕೆಗಳಿಗೆ ರಜೆ: ಎರಡು ದಿನಗಳ ಮುಷ್ಕರದ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಕಾಂಪನ್ಸೇಟರಿ ರಜೆ ನೀಡಲಾಗಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್‍ಕುಮಾರ್ ಜೈನ್ ಅವರು ತಿಳಿಸಿದ್ದಾರೆ.

ಅಂಗನವಾಡಿ ಕೇಂದ್ರ ಬಂದ್: ಮೈಸೂರು ಜಿಲ್ಲೆಯ 2860 ಅಂಗನವಾಡಿ ಕೇಂದ್ರಗಳ 5720 ಮಂದಿ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಎರಡು ದಿನಗಳ ಕಾಲ ಅಂಗನವಾಡಿ ಕೇಂದ್ರಗಳು ಮುಚ್ಚಿರುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ. ರಾಧಾ ತಿಳಿಸಿದ್ದಾರೆ.

ಆಟೋ ಚಾಲಕರ ಮಿಶ್ರ ಪ್ರತಿಕ್ರಿಯೆ: ಬಂದ್‍ಗೆ ಬೆಂಬಲ ಚಾಲಕರು ಹಾಗೂ ಮಾಲೀಕರ ಸಂಘಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನ ಬಂದ್ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆಯಲ್ಲದೆ, ನಮ್ಮ ಜೀವನ ನಡೆಯುವುದಾ ದರೂ ಹೇಗೆ ಎಂದು ಕೆಲ ಆಟೋ ಚಾಲಕರು ಪ್ರಶ್ನಿಸಿದರೆ, ಮತ್ತೆ ಕೆಲವರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆ ವಿರೋಧ ವ್ಯಕ್ತಪಡಿಸಲು ಮುಷ್ಕರ ಅನಿವಾರ್ಯ ಎಂದಿದ್ದಾರೆ. ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಹಾಲಿನ ಕೇಂದ್ರ, ಕ್ಲಿನಿಕ್‍ಗಳು, ನೀರು ಸೇರಿದಂತೆ ಅಗತ್ಯ ಸೇವೆಗಳು ಎಂದಿನಂತಿರುತ್ತವೆ. ಒಟ್ಟಿನಲ್ಲಿ ಎರಡು ದಿನಗಳ ಮುಷ್ಕರದಿಂದಾಗಿ ಜನಸಾಮಾನ್ಯರಿಗಂತೂ ತೊಂದರೆಯಾಗಲಿದೆ.

ಪರೀಕ್ಷೆಗಳು ಮುಂದೂಡಿಕೆ: ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾ ನಿಲಯ, ತುಮಕೂರು ವಿವಿ, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿವಿ, ಕರ್ನಾಟಕ ವಿವಿ ನಡೆಸಲು ಉದ್ದೇಶಿಸಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Translate »