ಮೈಸೂರು, ಫೆ.13- ಸಂತ ವ್ಯಾಲೆಂಟೈನ್ಸ್ ನೆನಪಿನಾರ್ಥವಾಗಿ ಜಗತ್ತಿನೆಲ್ಲೆಡೆ ಇಂದು (ಫೆ.14) ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಯುವ ಪ್ರೇಮಿಗಳು ತಮ್ಮ ಸಂಗಾತಿಗೆ ಪ್ರೇಮ ನಿವೇ ದನೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಪ್ರೀತಿ ಪಾತ್ರರಿಗೆ ಇಂದು ಉಡುಗೊರೆ ಕೊಟ್ಟು ತಮ್ಮ ಪ್ರೀತಿಯನ್ನು ಬಿನ್ನವಿಸುತ್ತಾರೆ. ಇದನ್ನೇ ಬಂಡವಾಳ ಮಾಡಿ ಕೊಂಡಿರುವ ವ್ಯಾಪಾರಿಗಳು ಪ್ರೇಮಿಗಳಿಗಾಗಿ ವಿಶೇಷ ತಯಾರಿಗಳನ್ನು ನಡೆಸಿದ್ದಾರೆ. ಮೈಸೂರು ಸೇರಿದಂತೆ ವಿವಿಧೆಡೆ ಮಾರುಕಟ್ಟೆಯಲ್ಲಿ ವಿಶೇಷ ಬಗೆಯ ಕೇಕ್, ಚಾಕೊಲೇಟ್, ಗಿಫ್ಟ್, ಹೂ-ಗುಚ್ಛಗಳ ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಪ್ರೇಮಿಗಳಿಗಳಿಗಷ್ಟೇ ಅಲ್ಲದೆ ಪ್ರೀತಿಯನ್ನು ಬಯಸುವ, ಒಲವುಳ್ಳ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರೀತಿ ಪಾತ್ರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ತಮ್ಮ ಪ್ರೀತಿ ಪಾತ್ರ ಪ್ರಾಣಿ- ಪಕ್ಷಿಗಳಿಗೆ ಹೀಗೆ ತಾವು ಪ್ರೀತಿಸುವ ಪ್ರತಿ ಜೀವಕೋಟಿಗೂ ಪ್ರೀತಿ ಹಂಚುವ ಸುದಿನವಿದು.
ಕೆಲವರ ವಿರೋಧ: ಪ್ರೇಮಿಗಳ ದಿನವೆಂದು ‘ವ್ಯಾಲೆಂಟೈನ್ ಡೇ’ ಆಚರಿಸಬೇಡಿ ಮತ್ತು ಲೈಂಗಿಕ ದೌರ್ಜನ್ಯಗಳಿಂದ ತಮ್ಮ ಮಕ್ಕಳನ್ನು ರಕ್ಷಿಸಿ, ನಾವಂತೂ ಈ ದಿನವನ್ನು ವಿರೋಧಿಸುತ್ತೇವೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ವ್ಯಾಲೆಂಟೈನ್ ಡೇ’ಯ ದಿನದಂದು ಪ್ರೇಮ ವ್ಯಕ್ತಪಡಿಸುವ ನೆಪದಲ್ಲಿ ಒಮ್ಮುಖ ಪ್ರೇಮದಿಂದ ಹೆಣ್ಣುಮಕ್ಕಳ ವಿಷಯದಲ್ಲಿ ಕಿರುಕುಳ, ಮಾನಭಂಗ, ಬಲಾತ್ಕಾರ ಮುಂತಾದ ಅಪರಾಧಕ್ಕೆ ದಾರಿಯಾಗಲಿದೆ. ಮದ್ಯಪಾನ, ಧೂಮಪಾನ, ಅಮಲು ಪದಾರ್ಥಗಳ ಸೇವನೆ ಮುಂತಾದ ತಪ್ಪು ಕೃತ್ಯಗಳಾಗುತ್ತವೆ ಎಂದು ದೂರಿದ್ದಾರೆ.
ಒಟ್ಟಾರೆ ಪ್ರೇಮಿಗಳ ದಿನ ಒಂದಷ್ಟು ಜನರ ವಿರೋಧ ಹಾಗೂ ಒಂದಷ್ಟು ಜನರ ಪರವಾಗಿ ಆಚರಿಸಲಾಗುತ್ತಿದ್ದರೂ, ಪ್ರೇಮಿಗಳ ದಿನವನ್ನು ನಾವು ನಮ್ಮ ಸಂಸ್ಕೃತಿಗೆ ಒಗ್ಗಿಸಿಕೊಳ್ಳುವ ಮೂಲಕ ಪ್ರೀತಿಯಿಂದ ಪ್ರೀತಿಗಾಗಿ ಆಚರಿಸೋಣ.