ನಾಳೆ `ಅಭಿವ್ಯಕ್ತಿ ಸ್ವಾತಂತ್ರ್ಯ, ರಾಷ್ಟ್ರೀಯತೆ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು

ನಾಳೆ `ಅಭಿವ್ಯಕ್ತಿ ಸ್ವಾತಂತ್ರ್ಯ, ರಾಷ್ಟ್ರೀಯತೆ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

March 23, 2019

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ವತಿಯಿಂದ ಮಾ.24ರಂದು ಸಂಜೆ 5.30 ಗಂಟೆಗೆ ಮೈಸೂರಿನ ರಾಜೇಂದ್ರ ಭವನದಲ್ಲಿ `ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಪರಿಷತ್‍ನ ಮೈಸೂರು ನಗರ ಘಟಕದ ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಸ್ವೇಚ್ಛಾಚಾರಣೆಯ ರಹದಾರಿಯಲ್ಲ. ಅದು ಕರ್ತವ್ಯದ ಕಡಿವಾಣ ಎಂಬ ಮಾತನ್ನು ಸಂವಿಧಾನ ಒತ್ತಿ ಹೇಳಿದೆ. ಏನಿದ್ದರೂ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆ ಈ ಎರಡೂ ಮಾನವ ಸಮುದಾಯಕ್ಕೆ ಅಗತ್ಯವಾದ ಹಾಗೂ ಅನಿವಾರ್ಯವಾದ ವಿಷಯಗಳು. ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ರಾಷ್ಟ್ರೀಯತೆಯ ಚೌಕಟ್ಟಿನಲ್ಲಿರಬೇಕು. ಆಗ ಮಾತ್ರ ರಾಷ್ಟ್ರ ಮತ್ತು ವ್ಯಕ್ತಿಗೆ ಬೆಲೆ. ಇದು ಇಂದಿನ ಅವಶ್ಯ ಕತೆಯೂ ಹೌದು. ಇವುಗಳ ಬಗ್ಗೆ ಎಷ್ಟು ಚರ್ಚೆ ನಡೆದರೆ ಅವುಗಳ ಅರ್ಥವ್ಯಾಪ್ತಿಯ ಸ್ಪಷ್ಟತೆ ಅಷ್ಟೇ ಹೆಚ್ಚಾಗುತ್ತಾ ಹೋಗುತ್ತದೆ. `ಅಭಿವ್ಯಕ್ತಿಗೆ ಸದಾಶಯವಿರಬೇಕು, ರಾಷ್ಟ್ರೀಯತೆಗೆ ಸಮಗ್ರತೆ ಇರಬೇಕು. ಇದು ವಿಚಾರಗೋಷ್ಠಿಯ ಪ್ರಮುಖ ಆಶಯವಾಗಿದೆ ಎಂದರು.

ಬಿ.ಎಸ್.ಸಿದ್ದಲಿಂಗಶೆಟ್ಟರ ದತ್ತಿ, ಸಿದ್ದಮ್ಮಣ್ಣಿ ಸಿದ್ದಲಿಂಗಶೆಟ್ಟರ ದತ್ತಿ, ಸಿದ್ದನಂಜಪ್ಪ ದತ್ತಿ, ಶಾಂತಾದೇವಿ ಸಿದ್ದನಂಜಪ್ಪ ದತ್ತಿಯಡಿ ನಡೆಯುವ ವಿಚಾರ ಸಂಕಿರಣಕ್ಕೆ ಅಂದು ಸಂಜೆ 5.30 ಗಂಟೆಗೆ ಕುಂದೂರು ಮಠದ ಡಾ.ಶ್ರೀ ಶರತ್‍ಚಂದ್ರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಆರ್‍ಎಸ್‍ಎಸ್‍ನ ಹಿರಿಯ ಪ್ರಚಾರಕ ಸು.ರಾಮಣ್ಣ ಉದ್ಘಾಟನೆ ನೆರವೇರಿಸ ಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಡಾ.ಓ.ಎಲ್.ನಾಗಭೂಷಣ ಅಧ್ಯಕ್ಷತೆ ವಹಿಸಲಿದ್ದಾರೆ. `ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನ’ ಕುರಿತು ಸಾಹಿತಿ ಪ್ರೇಮಶೇಖರ್, `ವೈಯಕ್ತಿಕ ಜೀವನ ಮತ್ತು ರಾಷ್ಟ್ರ ಪ್ರೇಮ’ ಕುರಿತು ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಜ್ಯೋತಿಶಂಕರ್ ವಿಚಾರ ಮಂಡಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಂಎಲ್‍ಸಿ ತೋಂಟದಾರ್ಯ, ಪರಿಷತ್ ಕಾರ್ಯದರ್ಶಿ ಮಹಾದೇವಪ್ಪ, ನಿರ್ದೇಶಕ ಜಗದೀಶ್ ಉಪಸ್ಥಿತರಿದ್ದರು.

Translate »