ನಾಳೆ ಲೋಕ ಅದಾಲತ್: ನ್ಯಾ.ಜಿ.ತಿಮ್ಮಯ್ಯ
ಮಂಡ್ಯ

ನಾಳೆ ಲೋಕ ಅದಾಲತ್: ನ್ಯಾ.ಜಿ.ತಿಮ್ಮಯ್ಯ

July 13, 2018

ಮಂಡ್ಯ: ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಜು.14 ರಂದು ಲೋಕ ಅದಾಲತ್ ನಡೆಯಲಿದ್ದು, ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಲಯದ ಕಕ್ಷಿದಾರರು ಇತ್ಯರ್ಥ ಪಡಿಸಿಕೊಳ್ಳ ಬಹುದಾದ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾ ಧೀಶೆ ಎಂ.ಭಾರತಿ ಹಾಗೂ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ ತಿಳಿಸಿದರು.

ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯ ಸಭಾಂಗಣದಲ್ಲಿ ಈ ಕುರಿತು ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ನ್ಯಾಯಾಧೀಶರು, ರಾಜೀ ಸಂಧಾನದ ಮೂಲಕ ಎರಡೂ ಕಡೆಯ ಕಕ್ಷಿದಾರರ ಸಮಕ್ಷಮದಲ್ಲಿ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕೆಂಬ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪ್ರತಿ ಎರಡು ತಿಂಗಳಿಗೊಮ್ಮೆ ಲೋಕ್ ಅದಾಲತ್ ನಡೆಸ ಲಾಗುತ್ತಿದ್ದು, ಕಕ್ಷಿದಾರರು ಈ ಅದಾಲತ್‍ನ ಸದುಪಯೋಗಪಡಿಸಿಕೊಂಡು ಹಣ ಮತ್ತು ಸಮಯ ವ್ಯರ್ಥವಿಲ್ಲದೆ ತಮ್ಮ ವ್ಯಾಜ್ಯ ಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದರು.

ಪಟ್ಟಣದ ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಲಯಗಳಲ್ಲಿ 600 ಚೆಕ್‍ಬೌನ್ಸ್ ಸೇರಿದಂತೆ ಸಣ್ಣ ಪುಟ್ಟ ಜಗಳ, ಸಿವಿಲ್ ಹಾಗೂ ಐಪಿಸಿ ಒಳಗೊಂಡಂತೆ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳಿದ್ದು, ಎಲ್ಲ ಪ್ರಕರಣಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಲು ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಎರಡೂ ಕಡೆಯ ಕಕ್ಷಿದಾರರು ಒಪ್ಪಿದರೆ, ರಾಜೀಸಂಧಾನದ ಮೂಲಕ ಶೀಘ್ರ ಹಾಗೂ ತ್ವರಿತವಾಗಿ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದ್ದು, ಇದರಿಂದಾಗಿ ಇಬ್ಬರಲ್ಲಿಯೂ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ. ಇದೊಂದು ಸುಪ್ರೀಂ ಕೋರ್ಟ್‍ನ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಕಕ್ಷಿದಾರರು ಲೋಕ್ ಅದಾಲತ್ ಮೂಲಕ ನೆನೆಗುದಿಗೆ ಬಿದ್ದಿರುವ ವ್ಯಾಜ್ಯಗಳಿಂದ ಮುಕ್ತಿ ಹೊಂದಿದರೆ ಸೌಹಾರ್ದ ಯುತ ಬದುಕು ನಡೆಸಬಹುದು ಎಂದರು.

100 ಪ್ರಕರಣ ಇತ್ಯರ್ಥಪಡಿಸುವ ಗುರಿ: ಕಳೆದ ಬಾರಿ ಇದೇ ನ್ಯಾಯಾಲಯದಲ್ಲಿ ನಡೆದಿದ್ದ ಲೋಕ್ ಅದಾಲತ್‍ನಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿತ್ತು. ಎರಡೂ ನ್ಯಾಯಾಲಯಗಳ ವಕೀಲರು ಹಾಗೂ ಕಕ್ಷಿದಾರರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿರುವುದರಿಂದ ಜು.14ರಂದು ನಡೆಯುವ ಲೋಕ್ ಅದಾಲತ್‍ನಲ್ಲಿ ಕನಿಷ್ಠ 100 ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

Translate »