ನಾಳೆ ಮೈಸೂರಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ
ಮೈಸೂರು

ನಾಳೆ ಮೈಸೂರಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ

January 31, 2019

ಮೈಸೂರು: ಜಿಲ್ಲಾಡಳಿತ, ಶ್ರೀಮಡಿವಾಳ ಮಾಚಿದೇವರ ಜಯಂ ತ್ಯೋತ್ಸವ ಸಮಿತಿ ವತಿಯಿಂದ ಫೆ.1ರಂದು ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ಎಂ.ರಾಜು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಸೂರಿನ ಕಲಾಮಂದಿರ ದಲ್ಲಿ ಅಂದು ಬೆಳಿಗ್ಗೆ 10ಕ್ಕೆ ಜಯಂತ್ಯೋತ್ಸವ ಏರ್ಪಡಿಸಲಾಗಿದೆ. ಇದಕ್ಕೂ ಮುನ್ನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳ ಸಹಿತ ನಡೆಯಲಿರುವ ಮೆರವಣಿಗೆಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಬಸವ ಮಾಚಿದೇವರು ಸ್ವಾಮೀಜಿಗಳು ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಜಿ.ಟಿ.ದೇವೇಗೌಡರು ನೆರವೇರಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಉಪಸ್ಥಿತರಿರಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್, ಸಂಸದ ರಾದ ಆರ್.ಧ್ರುವನಾರಾಯಣ್, ಪ್ರತಾಪ್‍ಸಿಂಹ, ಎಲ್.ಆರ್.ಶಿವರಾಮೇಗೌಡ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಬಾರಿಯ ಬಜೆಟ್‍ನಲ್ಲಿ ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ತಮ್ಮ ಸಮುದಾಯದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮನವೊಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇದೇ ವೇಳೆ ಮನವಿ ಸಲ್ಲಿಸಲಾಗುವುದು. ಜಯಂತ್ಯೋತ್ಸವದಲ್ಲಿ ಸುಮಾರು ಒಂದೂವರೆ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಸಮಿತಿಯ ಸದಸ್ಯರಾದ ಚಂದ್ರಶೇಖರ್ (ಭೈರಿ), ಚನ್ನಕೇಶವ, ದುದ್ದಗೆರೆ ಶಿವಣ್ಣ, ಬಿ.ಜಿ.ಕೇಶವ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »