ಮೈಸೂರು ವಿವಿ ಹಾಸ್ಟೆಲ್‍ಗಳಲ್ಲಿ ಅಕ್ರಮ ವಾಸ್ತವ್ಯ ಹೂಡಿರುವವರ ತೆರವಿಗೆ ಕಠಿಣ ಕ್ರಮ
ಮೈಸೂರು

ಮೈಸೂರು ವಿವಿ ಹಾಸ್ಟೆಲ್‍ಗಳಲ್ಲಿ ಅಕ್ರಮ ವಾಸ್ತವ್ಯ ಹೂಡಿರುವವರ ತೆರವಿಗೆ ಕಠಿಣ ಕ್ರಮ

November 4, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾನಿಲಯದ ವಿವಿಧ ವಿದ್ಯಾರ್ಥಿ ನಿಲಯದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿರುವವರನ್ನು ಖಾಲಿ ಮಾಡಿ ಸಲಾಗುತ್ತಿದ್ದು, ಅಧಿಕೃತ ವಿದ್ಯಾರ್ಥಿ ಗಳಿಗೆ ಪೂರಕ ವಾತಾವರಣ ಕಲ್ಪಿಸುವುದಕ್ಕಾಗಿ ಸಿಸಿ ಕ್ಯಾಮರಾ, ಗುರುತಿನ ಚೀಟಿ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಮೈಸೂರು ವಿವಿಯ ಕುಲ ಸಚಿವ ಪ್ರೊ.ಆರ್.ರಾಜಣ್ಣ ತಿಳಿಸಿದ್ದಾರೆ.

ಗಾಂಧಿಭವನದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಮೈಸೂರು ವಿವಿಯ ವಿದ್ಯಾರ್ಥಿನಿಲಯಗಳಲ್ಲಿ ಅಕ್ರಮ ವಾಗಿ ವಾಸಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯವನ್ನು ಹೊರತುಪಡಿಸಿ ಪುರು ಷರ ವಿದ್ಯಾರ್ಥಿನಿಲಯದಲ್ಲಿ ಅಕ್ರಮವಾಗಿರುವವರು ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ವಿದ್ಯಾರ್ಥಿ ಗಳಿಗೆ ಬೆದರಿಸುವುದು, ಅಡುಗೆ ಭಟ್ಟರ ಮೇಲೆ ಹಲ್ಲೆ ಮಾಡಲು ಯತ್ನಿಸುವುದು, ಭದ್ರತಾ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸುವುದು ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಸೇವಿಸಿ ದಾಂಧಲೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಧಾನ ಮಂತ್ರಿ ಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಇನ್ನಿತರರಿಗೆ ವಿದ್ಯಾರ್ಥಿನಿಲಯದಲ್ಲಿರುವ ಭಯಾನಕ ವಾತಾವರಣವನ್ನು ತಿಳಿಗೊಳಿಸಿ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ಇದನ್ನು ಗಂಭೀರ ವಾಗಿ ಪರಿಗಣಿಸಿ ವಿದ್ಯಾರ್ಥಿನಿಲಯಗಳನ್ನು ಪರಿ ಶೀಲಿಸಿದಾಗ ಅಕ್ರಮವಾಗಿ ನೆಲೆಸಿರುವವರ ದರ್ಬಾರ್ ಕಂಡುಬಂದಿದೆ ಎಂದು ಹೇಳಿದರು.

ವಿದ್ಯಾರ್ಥಿಗಳೊಂದಿಗೆ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ವಿವಿಧ ಮಾಲ್‍ಗಳಲ್ಲಿ ಕೆಲಸ ಮಾಡುವವರು ವಿದ್ಯಾರ್ಥಿನಿಲಯಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಪರಿಶೀಲನೆಯ ವೇಳೆ ಎಲ್ಲಾ ರೂಮ್‍ಗಳಲ್ಲಿರುವವ ರನ್ನು ಚಿತ್ರೀಕರಣ ಮಾಡಿಸಲಾಗಿದೆ. ಒಂದು ರೂಮ್ ನಲ್ಲಿ ಒಬ್ಬರು ಅಥವಾ ಇಬ್ಬರು ಇರಬೇಕಾಗಿತ್ತು. ಆದರೆ ಒಂಭತ್ತರಿಂದ 12 ಜನ ಇದ್ದದ್ದು ಕಂಡು ಬಂದಿದೆ. ಪಿಜಿ ಹಾಸ್ಟೆಲ್‍ನಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರ ಸಂಖ್ಯೆ ಅತೀ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಭಾನು ವಾರ ವಾರ್ಡನ್‍ಗಳು, ಎಂಜಿನಿಯರ್‍ಗಳು ಸೇರಿದಂತೆ ಸುಮಾರು 15 ಮಂದಿ ಎಲ್ಲಾ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಈ ವೇಳೆ ಹಾಸ್ಟೆಲ್‍ನಲ್ಲಿರು ವವರ ಐಡಿ ಕಾರ್ಡ್ ಪರಿಶೀಲನೆ ಮಾಡುವುದರೊಂದಿಗೆ ಹಾಸ್ಟೆಲ್‍ಗೆ ದಾಖಲಾಗಿರುವುದನ್ನು ದೃಢಪಡಿಸಿಕೊಳ್ಳು ತ್ತಿದ್ದೇವೆ. ಇದರಿಂದ ಈಗಾಗಲೇ ಶೇ.40ರಷ್ಟು ಅಕ್ರಮ ವಾಗಿ ನೆಲೆಸಿದ್ದವರನ್ನು ತೆರವು ಮಾಡಲಾಗಿದೆ. ಅಲ್ಲದೆ ಸಬ್‍ಲೀಸ್‍ಗೆ ನೀಡಿದ್ದ 15ರಿಂದ 20ರೂಮ್‍ಗಳಿಗೆ ಬೀಗ ಹಾಕಲಾಗಿದೆ. ಇನ್ನು 15 ರೂಮ್‍ಗಳಲ್ಲಿ ಅಕ್ರಮ ವಾಗಿರುವವರ ಬಗ್ಗೆ ಮಾಹಿತಿ ಬಂದಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೆಟ್ಟ ಹೆಸರು ಬರುವು ದನ್ನು ತಡೆಗಟ್ಟಲು ಈ ಕಾರ್ಯಾಚರಣೆ ಆರಂಭಿಸ ಲಾಗಿದೆ. ಒಂದು ಹಾಸ್ಟೆಲ್‍ಗೆ ಒಂದೇ ಗೇಟ್ ವ್ಯವಸ್ಥೆ ಮಾಡಲಾಗುತ್ತಿದೆ. ಕುಸಿದಿರುವ ಕಾಂಪೌಂಡ್ ದುರಸ್ತಿ ಮಾಡಿಸುವುದು, ಸಿಸಿ ಕ್ಯಾಮರಾ ಅಳವಡಿಸಿ, ವಿದ್ಯಾರ್ಥಿ ಗಳ ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿನಿಲಯಗಳಲ್ಲಿ ಗುಣಮಟ್ಟದ ಆಹಾರ, ಸೋಲಾರ್, ಶುದ್ದ ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡುವುದಕ್ಕೆ ಕ್ರಮ ಕೈಗೊಂ ಡಿದ್ದು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಕ್ರಮವಾಗಿರುವವರ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಲಾಗಿದೆ. ಕೆಲವರು ಸಂಶೋಧನಾ ವಿದ್ಯಾರ್ಥಿ ಗಳೆಂದು ಹೇಳಿಕೊಂಡು ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 45 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡ ಲಾಗಿದೆ. ಅಲ್ಲದೆ ಅಕ್ರಮವಾಗಿದ್ದ ಅತಿಥಿ ಉಪನ್ಯಾಸಕರನ್ನು ಹಾಸ್ಟೆಲ್‍ನಿಂದ ಹೊರಗೆ ಕಳುಹಿಸಲಾಗುತ್ತಿದೆ ಎಂದರು.

Translate »