ಕಾರ್ಕಳ ಬಳಿ ಪ್ರವಾಸಿ ಬಸ್ ಅಪಘಾತ ಪ್ರಕರಣ: 25 ಮಂದಿ ಆಸ್ಪತ್ರೆಯಿಂದ ಬಿಡುಗಡೆ: ಐವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮೈಸೂರು

ಕಾರ್ಕಳ ಬಳಿ ಪ್ರವಾಸಿ ಬಸ್ ಅಪಘಾತ ಪ್ರಕರಣ: 25 ಮಂದಿ ಆಸ್ಪತ್ರೆಯಿಂದ ಬಿಡುಗಡೆ: ಐವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ

February 18, 2020

ಮೈಸೂರಿನ ಖಾಸಗಿ ಕಂಪನಿಯಲ್ಲಿ ದುಃಖ, ಆತಂಕ ಪರಿಸ್ಥಿತಿ, ಸಹೋದ್ಯೋಗಿಗಳನ್ನು ಕಳೆದುಕೊಂಡ ನೋವಿನಲ್ಲಿ ಸಿಬ್ಬಂದಿ
ಮೈಸೂರು, ಫೆ. 17 (ಆರ್‍ಕೆ)- ಶನಿವಾರ ಸಂಜೆ ಕಾರ್ಕಳ ಬಳಿ ಸಂಭವಿಸಿದ ಭೀಕರ ಪ್ರವಾಸಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ 9 ಮಂದಿಯ ಪಾರ್ಥಿವ ಶರೀರವನ್ನು ಭಾನುವಾರ ಅವರವರ ಸ್ಥಳಗಳಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಮೈಸೂರಿನ ಮೇಟಗಳ್ಳಿ ವ್ಯಾಪ್ತಿಯಲ್ಲಿರುವ ಬೆಳ ಗೊಳ ಕೈಗಾರಿಕಾ ಪ್ರದೇಶದ ವೈಟಲ್ ರೆಕಾಡ್ರ್ಸ್ ಡೇಟಾ ಬೇಸ್ಡ್ ಖಾಸಗಿ ಕಂಪನಿಯ ನಾಲ್ವರು ಸಿಬ್ಬಂದಿ, ನಂಜನಗೂಡಿನ ಇಬ್ಬರು ಅಡಿಗೆ ಸಹಾಯಕರು ಸೇರಿ ಸಾವನ್ನಪ್ಪಿದ ಎಲ್ಲಾ 9 ಮಂದಿಯ ದೇಹಗಳನ್ನು ಕಾರ್ಕಳ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಒಪ್ಪಿಸಲಾಗಿದ್ದು, ಭಾನುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕಂಪನಿ ಮೂಲಗಳು ತಿಳಿಸಿವೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಿಬ್ಬಂದಿಗಳಾದ ಕೊಳ್ಳೇಗಾಲ ತಾಲೂಕು ಉತ್ತಂಬಳ್ಳಿ ಗ್ರಾಮದ ಕೆ. ಯಮುನಾ, ಮೈಸೂರಿನ ಸುಭಾಷ್‍ನಗರದ ವಿ.ಜಿ. ರಂಜಿತಾ, ಭೈರವೇಶ್ವರನಗರದ ಜಿ.ಎನ್. ಕಾವ್ಯ, ಕುಂಬಾರಕೊಪ್ಪಲಿನ ಆರ್. ಕಾವ್ಯ, ಸೋಮವಾರಪೇಟೆ ತಾಲೂಕಿನ ಎಂ.ವಿ. ಕಾವ್ಯ ಹಾಗೂ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ಆರ್. ರಘುವೀರ್ ಅವರನ್ನು ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಐದೂ ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕ ದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆ ಪೈಕಿ ಕೆ.ಯಮುನಾ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಸಾಧಾರಣ ಗಾಯಗಳಾಗಿದ್ದ 25 ಮಂದಿ ಸಿಬ್ಬಂದಿ ಭಾನುವಾರ ಸಂಜೆ ಕಾರ್ಕಳ, ಉಡುಪಿ ಹಾಗೂ ಮಣಿಪಾಲ ಆಸ್ಪತ್ರೆಗಳಿಂದ ಡಿಸ್‍ಚಾರ್ಜ್ ಮಾಡಲಾಗಿದ್ದು, ವೈಟಲ್ ರೆಕಾಡ್ರ್ಸ್ ಕಂಪನಿ ಮಾಲೀಕರು ಹಾಗೂ ವ್ಯವಸ್ಥಾಪಕರು ರಾತ್ರಿ ತಮ್ಮದೇ ವಾಹನಗಳಲ್ಲಿ ಸುರಕ್ಷಿತವಾಗಿ ಕರೆತಂದು ಅವರವರ ಸ್ಥಳಗಳಿಗೆ ತಲುಪಿಸಿದ್ದಾರೆ.

ಮೌನಾಚರಣೆ: ಸುಮಾರು 200 ಮಂದಿ ಕೆಲಸ ಮಾಡುತ್ತಿರುವ ಈ ಖಾಸಗಿ ಕಂಪನಿಯಲ್ಲಿ ಇಂದು ಬೆಳಿಗ್ಗೆ 3 ನಿಮಿಷ ಮೌನಾಚರಣೆ ಮೂಲಕ ಸಿಬ್ಬಂದಿ ತಮ್ಮನ್ನಗ ಲಿದ ಸಹೋದ್ಯೋಗಿಗಳಿಗೆ ಶ್ರದ್ಧಾಂಜಲಿ ಸಮರ್ಪಿಸಿದರಲ್ಲದೆ, ಅಪಘಾತದಲ್ಲಿ ಗಾಯ ಗೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನೀರವ ಮೌನ: ತಮ್ಮ ಜೊತೆಯಲ್ಲೇ ಕೆಲಸ ಮಾಡುತ್ತಿದ್ದವರು ಮರು ದಿನವೇ ಇಹಲೋಕ ತ್ಯಜಿಸಿರುವುದರಿಂದ ಕಂಗಾಲಾಗಿರುವ ಸಿಬ್ಬಂದಿ ಸೊರಗಿದ್ದಾರೆ. ಇಂದು ಕಂಪನಿ ಆವರಣದಲ್ಲಿ ನೀರವ ಮೌನ ಆವರಿಸಿದ್ದು, ಯಾವ ಸಿಬ್ಬಂದಿಯೂ ಕೆಲಸ ನಿರ್ವಹಿಸದೆ ಅಗಲಿದ ಗೆಳೆಯರ ನೆನೆದು ಕಣ್ಣೀರಿಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

Translate »