1.26 ಲಕ್ಷ ರೂ. ಎಗರಿಸಿದ್ದ ಇಬ್ಬರು ಇರಾನಿ ಪ್ರವಾಸಿಗರ ಸೆರೆ
ಮೈಸೂರು

1.26 ಲಕ್ಷ ರೂ. ಎಗರಿಸಿದ್ದ ಇಬ್ಬರು ಇರಾನಿ ಪ್ರವಾಸಿಗರ ಸೆರೆ

February 29, 2020

ಮೈಸೂರು,ಫೆ.28(ಆರ್‍ಕೆ)-ಮೈಸೂರಿನ ಉಪಯೋಗಿಸಿದ ಕಾರುಗಳ ಷೋ ರೂಂವೊಂ ದರ ಅಕೌಂಟೆಂಟ್ ಗಮನ ಬೇರೆಡೆ ಸೆಳೆದು 1.26 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದ ಇಬ್ಬರು ಇರಾನಿ ಪ್ರವಾಸಿಗರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇರಾನಿ ಪ್ರಜೆಗಳಾದ ಸೈಯದ್ ರೋಸ್ಟಮಿ ಮತ್ತು ಸಬರ್ ಹುಸೇನ್ ಬಂಧಿತರಾಗಿದ್ದು, 4 ದಿನಗಳ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಇವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.

ವಿಚಾರಣೆಗೊಳಪಡಿಸಿದ ಮೈಸೂರಿನ ಹುಣಸೂರು ರಸ್ತೆಯ ಮಾಂಡವಿ ಮೋಟಾರ್ಸ್ ಯೂಸ್ಡ್ ಕಾರ್‍ಗಳ ಟ್ರೂ ವ್ಯಾಲ್ಯೂ ಶೋರೂಂನಲ್ಲಿ ಅಕೌಂಟೆಂಟ್ ಗಮನ ಬೇರೆಡೆ ಸೆಳೆದು ಹಣದೊಂದಿಗೆ ಪರಾರಿಯಾಗಿದ್ದರು ಎಂಬ ವಿಷಯ ತಿಳಿಯಿತು. ಆರೋಪಿ ಗಳು ಪತ್ತೆಯಾಗಿದ್ದಾರೆಂಬ ಮಾಹಿತಿ ಅರಿತ ಮೈಸೂರಿನ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಾಲಕೃಷ್ಣ, ಬೆಂಗಳೂರಿಗೆ ತೆರಳಿ ಇಬ್ಬರು ಆರೋಪಿಗಳನ್ನು ಬುಧವಾರ ಮೈಸೂರಿಗೆ ಕರೆತಂದು ಮಹಜರು ನಡೆಸಿ, ಶುಕ್ರವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಜನವರಿ 31ರಂದು ಕಾರಿನ ಡ್ಯಾಶ್ ಬೋರ್ಡ್ ಮೇಲೆ ಹಾಕುವ ಗಣಪತಿ ವಿಗ್ರಹ ಖರೀದಿ ಮಾಡುವ ನೆಪದಲ್ಲಿ ಮಾಂಡವಿ ಮೋಟಾರ್ಸ್ ಯೂಸ್ಡ್ ಕಾರ್ ಟ್ರೂ ವ್ಯಾಲ್ಯೂ ಷೋ ರೂಂಗೆ ತೆರಳಿದ್ದ ಹುಸೇನ್ ಮತ್ತು ರೋಸ್ಟಮಿ, ಅಕೌಂಟೆಂಟ್‍ಯಿಂದ 2018ರ 2,000 ರೂ. ಮುಖಬೆಲೆಯ ನೋಟುಗಳನ್ನು ಕೊಡುವಂತೆ ಕೇಳಿ ಅವರು ಕ್ಯಾಷ್ ಬಾಕ್ಸ್‍ನಲ್ಲಿ ಆ ನೋಟುಗಳನ್ನು ಹುಡುಕುವತ್ತ ಮಗ್ನರಾಗಿದ್ದಾಗ ಪಕ್ಕದಲ್ಲಿದ್ದ 1.26 ಲಕ್ಷ ರೂ. ಹಣ ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಕಾರ್ತಿಕ್ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಾಲಕೃಷ್ಣ ಅವರು, ಸಿಸಿ ಕ್ಯಾಮರಾ ಫುಟೇಜಸ್‍ಗಳನ್ನು ಪಡೆದು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದರು.

ದೋಚುವುದೇ ಚಾಳಿ: ರಾಜ್ಯಕ್ಕೆ ಪ್ರವಾಸಕ್ಕೆ ಬಂದಿದ್ದ ಸೈಯ್ಯದ್ ರೋಸ್ಟಮಿ ಮತ್ತು ಸಬರ್ ಹುಸೇನ್ ಅವರು ಅಂಗಡಿ, ಶೋ ರೂಂಗಳಿಗೆ ತೆರಳಿ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಕಳ್ಳತನ ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದರು ಎಂದು ಇನ್ಸ್‍ಪೆಕ್ಟರ್ ಬಾಲಕೃಷ್ಣ ತಿಳಿಸಿದ್ದಾರೆ. ಬೆಂಗಳೂರು, ಮಂಗಳೂರು ನಗರಗಳಲ್ಲೂ ಆರೋಪಿಗಳು ತಮ್ಮ ಕೈಚಳಕ ತೋರಿಸಿದ್ದಾರೆ. ಪ್ರಕರಣವೊಂದರಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಮಾಹಿತಿ ತಿಳಿದು ನಾವು ಬಾಡಿ ವಾರಂಟ್ ಪಡೆದು ಕರೆತಂದು ಮಹಜರು ನಡೆಸಿದೆವು. ಆದರೆ, ಕಳವಾಗಿದ್ದ ಹಣ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬಾಲಕೃಷ್ಣ ತಿಳಿಸಿದರು. ಘಟನೆ ನಡೆದ ದಿನದ ಸಿಸಿ ಟಿವಿ ಕ್ಯಾಮರಾ ಫುಟೇಜಸ್‍ಗಳನ್ನು ನೋಡಿದಾಗ ಕೃತ್ಯವೆಸಗಿದ ಆಸಾಮಿಗಳು ಇವರೇ ಎಂಬುದು ಖಾತರಿಯಾಗಿದೆ ಎಂದು ಅವರು ತಿಳಿಸಿದರು.

Translate »