ಜ.8ರ ದೇಶವ್ಯಾಪಿ ಮುಷ್ಕರಕ್ಕೆ ಮೈಸೂರಿನಲ್ಲೂ ಕಾರ್ಮಿಕ ಸಂಘಟನೆಗಳ ಬೆಂಬಲ
ಮೈಸೂರು

ಜ.8ರ ದೇಶವ್ಯಾಪಿ ಮುಷ್ಕರಕ್ಕೆ ಮೈಸೂರಿನಲ್ಲೂ ಕಾರ್ಮಿಕ ಸಂಘಟನೆಗಳ ಬೆಂಬಲ

January 7, 2020

ಮೈಸೂರು, ಜ.6(ಪಿಎಂ)- ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಷ್ಟ್ರವ್ಯಾಪಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜ.8ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಮೈಸೂರಿನ ಹಲವು ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ.

ವಿಕ್ರಾಂತ್ ಟೈರ್ಸ್ ಎಂಪ್ಲಾಯ್ಸ್ ಯೂನಿಯನ್ (ಸಿಐಟಿಯು) ಹಾಗೂ ಎಐಎಸ್‍ಎಫ್, ಎಸ್‍ಎಫ್‍ಐ, ಎಐಡಿಎಸ್‍ಓ, ಎಐವೈಎಫ್, ಡಿವೈಎಫ್‍ಐ, ಎಐಡಿ ವೈಓ, ಎನ್‍ಎಫ್‍ಐಡಬ್ಲ್ಯೂ, ಎಐಡಿಡಬ್ಲ್ಯೂಎ, ಎಐಎಂಎಸ್‍ಎಸ್ ಹಾಗೂ ಎಐಪಿಡಬ್ಲ್ಯೂಎ ಸಂಘಟನೆಗಳ ಜಿಲ್ಲಾ ಸಮಿತಿಗಳು ಬೆಂಬಲ ನೀಡಿವೆ.

ವಿಕ್ರಾಂತ್ ಟೈರ್ಸ್ ಎಂಪ್ಲಾಯ್ಸ್ ಯೂನಿಯನ್ ಹಾಗೂ ಮೇಲಿನ ಎಲ್ಲಾ ಸಂಘಟನೆಗಳ ಒಳಗೊಂಡಂತೆ ಸೇರಿದಂತೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಎರಡು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಸಂಘಟನೆಗಳು ತಮ್ಮ ಬೆಂಬಲ ಸೂಚಿಸಿದವು.

ವಿಕ್ರಾಂತ್ ಟೈರ್ಸ್ ಎಂಪ್ಲಾಯ್ಸ್ ಯೂನಿಯನ್ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ದುಡಿಯುವ ವರ್ಗದ ರಕ್ಷಣೆಗೆ ಪರ್ಯಾಯ ಆರ್ಥಿಕ ನೀತಿಗಾಗಿ 13 ಅಂಶಗಳ ಬೇಡಿಕೆಗಳಿಗಾಗಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಈ ಮುಷ್ಕರಕ್ಕೆ ಕರೆ ನೀಡಿದ್ದು, ತಮ್ಮ ಸಂಘಟನೆ ಅದಕ್ಕೆ ಬೆಂಬಲ ನೀಡಿದೆ ಎಂದು ತಿಳಿಸಿದರು.

ಅಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಜೆಕೆ ಮೈದಾನ ದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪುರ ಭವನ ತಲುಪುವುದಲ್ಲದೆ ನಂತರ ಬೃಹತ್ ಸಭೆ ನಡೆಸ ಲಾಗುವುದು. ಆಟೋ, ಟ್ಯಾಕ್ಸಿ ಮಾಲೀಕರ ಸಂಘ, ಚಿತ್ರಮಂದಿರಗಳ ಕಾರ್ಮಿಕರು, ಹಾರ್ಡ್‍ವೇರ್ ಅಸೋಸಿಯೇಷನ್ ಕಾರ್ಮಿಕರು, ಹೋಟೆಲ್ ನೌಕರರು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊ ಳ್ಳಲಿದ್ದಾರೆ. ಸುಮಾರು 10 ಸಾವಿರ ಜನರು ಭಾಗವಹಿ ಸುವ ನಿರೀಕ್ಷೆ ಇದೆ ಎಂದು ಹೇಳಿದರು. ಯೂನಿ ಯನ್‍ನ ಪ್ರಧಾನ ಕಾರ್ಯದರ್ಶಿ ಜಿ.ಟಿ.ಸೋಮೇಶ್, ಉಪಾಧ್ಯಕ್ಷರಾದ ಪುಟ್ಟಮಲ್ಲು, ಮೋಹನ್‍ಕುಮಾರ್, ಕೆ.ಟಿ.ಶೇಖರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

ಮಹಿಳಾ, ಯುವ, ವಿದ್ಯಾರ್ಥಿ ಸಂಘಟನೆಗಳ ಬೆಂಬಲ: ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಷ್ಕರಕ್ಕೆ ಬೆಂಬಲ ನೀಡಿರುವುದಾಗಿ ಘೋಷಿಸಿದವು.

ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಸೀಮಾ ಮಾತನಾಡಿ, ಎಲ್ಲ ಕಾರ್ಮಿಕರಿಗೆ 21 ಸಾವಿರ ರೂ. ಕನಿಷ್ಠ ವೇತನ ನೀಡಬೇಕು, ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ದುಡಿಯುವವರನ್ನು ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರಿದಿ ದ್ದರೂ ಅವುಗಳ ತಡೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಅವುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸಿಎಎ, ಎನ್‍ಆರ್‍ಸಿ ಮೊದಲಾ ದವನ್ನು ಜಾರಿಗೆ ತರಲು ಯತ್ನಿಸಿದೆ ಎಂದು ದೂರಿದರು.

ಎಐಪಿಡಬ್ಲ್ಯೂಎ ರಾಷ್ಟ್ರೀಯ ಅಧ್ಯಕ್ಷೆ ಡಾ.ರತಿರಾವ್ ಮಾತನಾಡಿ, ಭಾನುವಾರ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಗೂಂಡಾಗಿರಿ ಖಂಡನೀಯವಾಗಿದ್ದು, ಇಡೀ ವ್ಯವಸ್ಥೆಯನ್ನು ಗೂಂಡಾಗಳ ಕೈಗೊಪ್ಪಿಸಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಕಳೆದ ಐದು ವರ್ಷಗಳಿಂದ ಹೆಚ್ಚುತ್ತಲೇ ಇದ್ದು, ಅವರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಹೀಗಾಗಿ ಈ ರೀತಿಯ ಎಲ್ಲವುಗಳನ್ನು ವಿರೋಧಿಸಿ ಅಂದಿನ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ನೀಡಲಾಗಿದೆ ಎಂದರು. ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರಕಲಾ, ಹರೀಶ್, ಮಹದೇವಮ್ಮ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »