ಸಮಾಜದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು: ಡಿಸಿಪಿ ಪ್ರಕಾಶ್ ಗೌಡ ಪ್ರಶಂಸೆ
ಮೈಸೂರು, ಮಾ.4(ಪಿಎಂ)- ಗರ್ಭಿಣಿ ಯರು, ಬಾಣಂತಿಯರು ಹಾಗೂ 6 ವರ್ಷದೊಳಗಿನ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳನ್ನು ಪರಿ ಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ `ರಾಷ್ಟ್ರೀಯ ಪೋಷಣಾ ಅಭಿಯಾನ’ದ ತರಬೇತಿ ಕಾರ್ಯಕ್ರಮ ಬುಧವಾರ ಮೈಸೂರಿನಲ್ಲಿ ನಡೆಯಿತು.
ಮೈಸೂರಿನ ಬನ್ನಿಮಂಟಪದ ಬಾಲ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಯ ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಅಭಿ ಯಾನ ಅನುಷ್ಠಾನಗೊಳಿಸುವ ಅಂಗನ ವಾಡಿ ಕಾರ್ಯಕರ್ತೆಯರಿಗೆ ಏರ್ಪಡಿ ಸಿದ್ದ ತರಬೇತಿ ಕಾರ್ಯಕ್ರಮವನ್ನು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎ.ಎನ್. ಪ್ರಕಾಶ್‍ಗೌಡ ಉದ್ಘಾಟಿಸಿದರು. ಬಳಿಕ ಮಾತ ನಾಡಿದ ಅವರು, ಅಂಗನವಾಡಿ ಕಾರ್ಯ ಕರ್ತೆಯರು ಸಮಾಜದಲ್ಲಿ ಪ್ರಮುಖ ಜವಾ ಬ್ದಾರಿ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶ ದಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೈಕೆಗೆ ಸಂಬಂಧಿಸಿ ಮಾಹಿತಿ ಕೊರತೆ ಹೆಚ್ಚಿದೆ. ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಮಾಹಿತಿಯನ್ನು ತಲುಪಿಸುವ ಕಾರ್ಯ ಅಗತ್ಯ. ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅದನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಇಂದಿನ ತರಬೇತಿ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ತಿಳಿಸಿದರು.
ನಿಮ್ಮ ಸಣ್ಣ ಬೇಡಿಕೆಗಳಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ಇರುವುದು ದುರ್ದೈವ. ಸಂಘಟಿತರಾಗಿ ಸೂಕ್ತ ಮಾರ್ಗದಲ್ಲಿ ಮುನ್ನಡೆ ದರೆ ನಿಮ್ಮ ಎಲ್ಲಾ ಬೇಡಿಕೆಗಳನ್ನು ಸಂಬಂಧಿಸಿ ದವರು ಈಡೇರಿಸುವ ವಿಶ್ವಾಸವಿದೆ ಎಂದರು.
ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳನ್ನು ಪೋಷಣೆ ಮಾಡುವ ಕಾರ್ಯಕರ್ತೆಯರು ಆ ಮಕ್ಕಳಿಗೆ 2ನೇ ತಾಯಿ ಇದ್ದಂತೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಮಗುವಿಗೆ ಥಳಿಸು ತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ರೀತಿ ತಾಳ್ಮೆ ಕಳೆದುಕೊಳ್ಳಬೇಡಿ. ಮಾನವೀಯತೆ ಬಹಳ ಮುಖ್ಯ. ತಮ್ಮ ಮಕ್ಕಳಂತೆ ಎಲ್ಲ ಮಕ್ಕಳನ್ನೂ ಸಂತೈಸುವುದು ನಿಮ್ಮ ಕರ್ತವ್ಯ. ಮಹಿಳಾ ಶೋಷಣೆ ವಿರುದ್ಧ ದನಿ ಎತ್ತುವ ಜಾಗೃತಿ ನಿಮ್ಮಲ್ಲಿರಲಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇ ಶಕಿ ಕೆ.ಪದ್ಮ ಮಾತನಾಡಿ, ತಾಯಿ ಮತ್ತು ಮಕ್ಕಳ ಪೌಷ್ಟಿಕತೆಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶ ದಿಂದ ಈ ಅಭಿಯಾನ ನಡೆದಿದೆ. ಆ ಮೂಲಕ ಇಡೀ ಕುಟುಂಬದಲ್ಲಿ ಜಾಗೃತಿ ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾರ್ಗ ದರ್ಶನ ನೀಡಲಾಗುವುದು ಎಂದರು. ಮೈಸೂರು ತಾಲೂಕು ಆರೋಗ್ಯಾಧಿಕಾರಿ ಡಾ.ಮಹದೇವ ಪ್ರಸಾದ್, ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಲಿಂಗಪ್ಪ, ಮೇಲ್ವಿ ಚಾರಕಿ ಭಾಗ್ಯಶ್ರೀ ಮತ್ತಿತರರಿದ್ದರು.
ಅಭಿಯಾನದ ಅಂಗವಾಗಿ ಅಂಗನವಾಡಿಗಳಲ್ಲಿ 2 ದಿನ ಕಾರ್ಯಕ್ರಮ
ತಾಯಿ-ಮಕ್ಕಳ ಅಪೌಷ್ಟಿಕತೆ ಮಟ್ಟ ಕರ್ನಾಟಕದಲ್ಲಿ ಪ್ರಸ್ತುತ ಶೇ.32ರಷ್ಟಿದೆ. ಪೋಷಣಾ ಅಭಿಯಾನ ಮೂಲಕ ಇದನ್ನು 2022ರ ವೇಳೆಗೆ ಶೇ.25ಕ್ಕೆ ತಗ್ಗಿ ಸುವ ಗುರಿ ರಾಜ್ಯ ಸರ್ಕಾರದ್ದಾಗಿದೆ. ಅಭಿ ಯಾನದ ಅಂಗವಾಗಿ ಪ್ರತಿ ತಿಂಗಳಲ್ಲಿ 2 ದಿನ ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ. ಒಂದು ದಿನ `ಅನ್ನಪ್ರಾಶನ ದಿನ’ ನಡೆಯಲಿದ್ದು, ಅಂದು ಮಗುವಿನ ಬೆಳವಣಿಗೆ ಹಂತದಲ್ಲಿ ಯಾವ ರೀತಿ ಆಹಾರ ನೀಡಬೇಕು. ಜೊತೆಗೆ ಮಗುವಿನ ತೂಕ ಮತ್ತು ಎತ್ತರದ ಪರೀಕ್ಷೆ ನಡೆಸುವುದೂ ಸೇರಿದಂತೆ ಮಗು ವಿನ ಆರೋಗ್ಯಕರ ಬೆಳೆವಣಿಗೆಗೆ ತಾಯಂ ದಿರಿಗೆ ಮಾಹಿತಿ ನೀಡಲಾಗುವುದು. ಮತ್ತೊಂದು ದಿನ `ಸೀಮಂತ ಕಾರ್ಯ ಕ್ರಮ’. ಈ ಎರಡು ದಿನಗಳಲ್ಲೂ ಗರ್ಭಿಣಿ, ಬಾಣಂತಿಯರ ಜೊತೆಯಲ್ಲಿ ಅವರ ಕುಟುಂಬಸ್ಥರು ಭಾಗವಹಿಸು ವಂತೆ ನೋಡಿಕೊಳ್ಳಲಾಗುವುದು. ಅಭಿಯಾನಕ್ಕೆ ಕೇಂದ್ರ ಸರ್ಕಾರ ಶೇ.60ರಷ್ಟು ಮತ್ತು ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ಭರಿಸಲಿವೆ.
-ಭಾಗ್ಯಶ್ರೀ, ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ