ಇಬ್ಬರು ಖದೀಮರ ಬಂಧನ: ಲಕ್ಷಾಂತರ ರೂ. ಮೌಲ್ಯದ ಪದಾರ್ಥ ವಶ
ಮೈಸೂರು

ಇಬ್ಬರು ಖದೀಮರ ಬಂಧನ: ಲಕ್ಷಾಂತರ ರೂ. ಮೌಲ್ಯದ ಪದಾರ್ಥ ವಶ

February 16, 2019

ಮೈಸೂರು: ಕಳವು ಮಾಡಿದ್ದ ಮೊಬೈಲ್‍ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ವಿವಿಪುರಂ ಪೊಲೀಸರು ಬಂಧಿಸಿ, 2.50 ಲಕ್ಷ ರೂ. ಮೌಲ್ಯದ 25 ಗ್ರಾಂ ಸರ, ಸ್ಕೂಟರ್ ಮತ್ತು 2 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ಬಿ.ಎಂ.ಶ್ರೀನಗರ ನಿವಾಸಿ ಮುರುಳಿ(24), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮೊಗರಹಳ್ಳಿ ಮಂಟಿ ನಿವಾಸಿ ವಿನಯ್ ಕುಮಾರ್(24) ಬಂಧಿತರು. ಮೈಸೂರು ವಿವಿ ಮೊಹಲ್ಲಾ ಕಾಳಿದಾಸ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಳವು ಮಾಡಿದ್ದ ಮೊಬೈಲ್‍ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ವಿವಿಪುರಂ ಠಾಣಾ ವ್ಯಾಪ್ತಿಯ ಯಾದವಗಿರಿಯ ಮನೆಯೊಂದರಲ್ಲಿ 2 ಐಫೋನ್, ಬಂಬೂಬಜಾರ್‍ನಲ್ಲಿ ಸ್ಕೂಟರ್ ಮತ್ತು ವಿ.ವಿ.ಪುರಂ ಠಾಣಾ ವ್ಯಾಪ್ತಿಯ ಬೃಂದಾವನ ಬಡಾವಣೆಯಲ್ಲಿ ಮಹಿಳೆಯೊಬ್ಬರ ಸರ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರು ನೀಡಿದ ಮಾಹಿತಿ ಮೇರೆಗೆ 2.50 ಲಕ್ಷ ರೂ. ಮೌಲ್ಯದ 2 ಐಫೋನ್, 25 ಗ್ರಾಂ ತೂಕದ ಸರ ಮತ್ತು ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »